ಇದು ಜಿಲ್ಲಾ ಉಸ್ತುವಾರಿ ಸಚಿವರ ಶ್ರಮಕ್ಕೆ ಸಂದ ಜಯ : ಕೆ.ವಿ.ನಾಗರಾಜ್ ವಿಭಜನೆ ವಿರೋಧಿಯಾಗಿದ್ದರು :ನಿರ್ದೇಶಕ ಭರಣಿ ವೆಂಕಟೇಶ್ ಆಕ್ರೋಶ
ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆ ಮಾಡುವುದು ಸರಿಯಾದ ಕ್ರಮ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪುನೀಡುವ ಮೂಲಕ ಹಗ್ಗಜಗ್ಗಾಟಕ್ಕೆ ಬ್ರೇಕ್ ಹಾಕಿದೆ.ನ್ಯಾಯಾಲಯದ ತೀರ್ಪು ಜಿಲ್ಲೆಯ ಹೈನೋದ್ಯಮದ ಪಾಲಿಗೆ ಸಂತಸ ತಂದಿದೆ ಹೇಳುವ ಮೂಲಕ ಸ್ವಾಗತಿಸಿರುವ ಜಿಲ್ಲೆಯ ನಿರ್ದೇಶಕರು,ಈ ತೀರ್ಪು ಬರಲು ಶ್ರಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನಗರ ಹೊರವಲಯ ನಂದಿ ಮೆಗಾಡೇರಿ ಆವರಣದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ನಿರ್ದೇಶಕರಾದ ಭರಣಿ ವೆಂಕಟೇಶ್, ಶೀಡ್ಲಘಟ್ಟದ ಶ್ರೀನಿವಾಸ್, ಚಿಂತಾಮಣಿಯ ಅಶ್ವತ್ಥ್ ನಾರಾಯಣ್ ಕೋರ್ಟ್ ತೀರ್ಪಿನ ಬಗ್ಗೆ ನಡೆಸಿದ ತುರ್ತುಗೋಷ್ಟಿಯಲ್ಲಿ ಮಾತನಾಡಿದರು.
ಚಿಕ್ಕಬಳ್ಳಾಪುರ ನಿರ್ದೇಶಕ ಭರಣಿ ವೆಂಕಟೇಶ್ ಮಾತನಾಡಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಜಿಲ್ಲೆಯ ನಿರ್ದೇಶಕರನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ತರಾತುರಿ ಯಲ್ಲಿ ಕೋಚಿಮುಲ್ ವಿಭಜನೆ ಮಾಡಿ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ನಮಗೆ ಅನ್ಯಾಯಬ ಮಾಡಿದ್ದರು.
ಅದಾಗ ತಾನೆ ಚುನಾವಣೆಗೆ ನಿಂತು ಗೆದ್ದಿದ್ದ ನಾವು ಈ ಅನ್ಯಾಯವನ್ನು ಪ್ರಶ್ನಿಸಿ ಆಡಳಿತ ಮಂಡಳಿಯ ಅನು ಮೋದನೆ ಪಡೆಯದೆ ವಿಭಜನೆ ಮಾಡಿದ್ದಾರೆ.ಇದು ಸರಿಯಲ್ಲ ಎಂದು ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದೆವು. ನಮ್ಮ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ವಿಭಜನೆಗೆ ತಡೆ ನೀಡಿದ್ದರ ಜತೆಗೆ ಸಹಕಾರಿ ಕಾಯ್ದೆ ಆರ್ಟಿಕಲ್ ೧೪ರಂತೆ ವಿಶೇಷ ಸಭೆ ನಡೆಸಿ ಸರ್ವಾನುಮತದ ನಿರ್ಣಯ ಕೈಗೊಂಡು ಕೋರ್ಟಿಗೆ ಸಲ್ಲಿಸಿದರೆ ವಿಭಜನೆ ಮಾಡುವುದಾಗಿ ತೀರ್ಪು ನೀಡಿದ್ದರು.
6 ತಿಂಗಳ ಹಿಂದೆ ಬಾಗೇಪಲ್ಲಿಯ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ಕೋಚಿಮುಲ್ನ ಅಧ್ಯಕ್ಷ ಕೆ.ವೈನಂಜೇಗೌಡ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆ ನಡೆಸಿ ವಿಭಜನೆ ಬಗ್ಗೆ ಸಹಕಾರಿ ಅಧಿನಿಯಮಗಳ ಕಂಡಿಕೆ 14 ರಂತೆ ಸರ್ವಾನುಮತದಿಂದ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕ ಮಾಡಿ ಎಂದು ಪರವಾಗಿ 1699 ಮಂದಿ ಸದಸ್ಯರು ಕೈ ಎತ್ತುವ ಬೆಂಬಲಿಸಿದರೆ, ವಿರೋಧ ಮಾಡಿದ್ದ ಏಕೈಕ ಸದಸ್ಯ ಎಂದರೆ ಅದು ಕಣಜೇನಹಳ್ಳಿ ಕೆ.ವಿ.ನಾಗರಾಜ್ ಮಾತ್ರ ಎಂದು ದೂರಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಆದ ವಿಭಜನೆಗೆ ಜಿಲ್ಲೆಯ ನಿರ್ದೇಶಕರ ವಿರೋಧವೇ ಇರಲಿಲ್ಲ. ವಿಭಜನೆ ನಂತರವೂ ಕೋಲಾರದ ನಿರ್ದೇಶಕರಿಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಿ ನಮ್ಮನ್ನು ಅಧಿಕಾರದಿಂದ ದೂರವಿಡಲಾಗಿತ್ತು. ಈ ಅನ್ಯಾಯವನ್ನು ಪ್ರಶ್ನಿಸಿ ನಾವು ಕೋರ್ಟಿಗೆ ಹೋಗಬೇಕಾಯಿತೇ ವಿನಃ ನಾವು ವಿಭಜನೆ ವಿರೋಧಿಗಳಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತು. ನಮಗಾದ ಅನ್ಯಾಯವನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮೂಲಕ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮ ವಿಭಜನೆಯನ್ನು ಹಿಂಪಡೆಯ ಲಾಗಿತ್ತು. ಕೋರ್ಟಿನಲ್ಲಿದ್ದ ಈ ಪ್ರಕರಣದ ಬಗ್ಗೆ ಸುಧೀರ್ಘವಾಗಿ ವಿಚಾರಣೆ ನಡೆಸಿ ಗುರುವಾರ ಹೈಕೊರ್ಟ್ ವಿಭಜನೆ ಪರವಾಗಿ ತೀರ್ಪು ನೀಡಿದೆ. ಇದು ಬಿಜೆಪಿ ಸರಕಾರದ ಆಡಳಿತದಲ್ಲಿ ಆದ ತೀರ್ಮಾನಕ್ಕೆ ಸಂದ ಜಯವಲ್ಲ. ಬಿಜೆಪಿ ಮುಖಂಡರು ಜನರನ್ನು ದಿಕ್ಕುತಪ್ಪಿಸುವ ಕಾರಣಕ್ಕಾಗಿಯೇ ಕಾಂಗ್ರೆಸ್ ಸರಕಾರ ವಿಭಜನೆ ವಿಚಾರದಲ್ಲಿ ಬೆಟ್ಟ ಅಗೆದು ಇಲಿ ಹಿಡಿದಿದೆ ಎನ್ನುತ್ತಾ, ನಮ್ಮ ಅವಧಿಯ ನಿರ್ಣಯವನ್ನೇ ಕೋರ್ಟ್ ಎತ್ತಿಹಿಡಿದಿದೆ ಎಂದು ಮಾಧ್ಯಮ ಗಳಿಗೆ ಸುಳ್ಳು ಸುದ್ದಿ ನೀಡುತ್ತಿದ್ದಾರೆ. ಇವೆಲ್ಲಾ ಸತ್ಯಕ್ಕೆ ದೂರವಾದ ಸಂಗತಿಯಾಗಿವೆ. ಬಾಗೇಪಲ್ಲಿಯಲ್ಲಿ ಕೋಚಿ ಮುಲ್ ನಡೆಸಿದ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕ ರಿಸಿಯೇ ಹೈಕೋರ್ಟ್ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕತೆಗೆ ಒಪ್ಪಿಗೆ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಚಿಂತಾಮಣಿ ನಿರ್ದೇಶಕ ಅಶ್ವತ್ಥನಾರಾಯಣ ಮಾತನಾಡಿ ಕರ್ನಾಟಕ ಉಚ್ಚನ್ಯಾಯಲಯ ಕಾನೂನಾತ್ಮಕವಾಗಿ ಕೋಚಿಮುಲ್ ವಿಭಜನೆಯ ಆದೇಶವನ್ನು ನ್ಯಾಯಮೂರ್ತಿಗಳಾದ ಕೃಷ್ಣಜೋಷಿ, ಮತ್ತು ಜೋಷಿಯವರು ನೀಡಿದ್ದಾರೆ.ಇದರ ಅನ್ವಯ 2019ರಲ್ಲಿ ಕೊರೋನಾ ದೇಶವನ್ನು ತಲ್ಲಣಿಸುವಂತೆ ಮಾಡಿತ್ತು, ಈ ಅವಧಿಯಲ್ಲಿಯೇ ಕಾನೂನಾತ್ಮಕವಾಗಿ ವಿಭಜನೆ ಮಾಡದೆ ಜಿಲ್ಲೆಯ ೬ ಮಂದಿ ನಿರ್ದೇಶಕರನ್ನು ಅಧಿಕಾರದಿಂದ ಹೊರಗಿಟ್ಟು ವಿಭಜನೆ ಮಾಡಲಾಗಿತ್ತು.ಈ ಅವಧಿಯಲ್ಲಿ ಒಂದುವರೆ ವರ್ಷ ಕಾಲ ನಾವು ಅಧಿಕಾರದಿಂದ ವಂಚಿತವಾಗಿದ್ದೆವು. ಇದನ್ನು ಪ್ರಶ್ನಿಸಿ ನಾವು ಕೋರ್ಟಿಗೆ ಹೋಗಿದ್ದೆವು. ಸೆಕ್ಷನ್ ೧೪ರಂತೆ ಸರ್ವಸದಸ್ಯರ ಸಾಮಾನ್ಯ ಸಭೆಯ ನಿರ್ಣಯದಂತೆ ವಿಭಜನೆ ಮಾಡಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನಗಾಣಿಸಿದ ಪರಿಣಾಮ ನ್ಯಾ,ದೇವದಾಸ್ ವಿಭಜನೆ ನ್ಯಾಯೋಚಿತವಾಗಿ ಮಾಡಿಲ್ಲ ಎಂದು ಹೇಳಿ ನಮಗೆ ಅಧಿಕಾರದಲ್ಲಿ ಮುಂದವರೆಯಲು ಅವಕಾಶ ಮಾಡಿಕೊಟ್ಟಿದ್ದರು.ನಮ್ಮ ಅಧಿಕಾರ ಪುನಃಪ್ರತಿಷ್ಟಾಪನೆ ಆದ ನಂತರ ಜಿಲ್ಲಾ ಉಸ್ತುವಾರಿ ಸಚಿವರು,ಸಹಕಾರಿ ಸಚಿವರು ಮುಖ್ಯಮಂತ್ರಿಗಳ ನೆರವಿನಿಂದ ಜಿಲ್ಲೆಯಲ್ಲಿ ಹೈನೋಧ್ಯಮ ಬೆಳೆಯಲು ೩೫೦ಕೋಟಿಗೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.ಹೈಕೋರ್ಟ್ ವಿಭಜನೆ ಮಾಡಿರುವ ಕಾರಣ ಜಿಲ್ಲೆಯ ಹೈನೋಧ್ಯಮ ಅಭಿವೃದ್ಧಿ ಕಾಣಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರಾದ ಶ್ರೀನಿವಾಸ್,ನಾಮನಿರ್ದೇಶಿತ ಸದಸ್ಯ ಊಲವಾಡಿ ಅಶ್ವತ್ಥನಾರಾಯಣ, ಆದಿನಾರಾಯಣರೆಡ್ಡಿ ಮತ್ತಿತರರು ಇದ್ದರು.
ಕೋರ್ಟ್ ತೀರ್ಪಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಸಂಸದ ಸುಧಾಕರ್ ಪ್ರತ್ಯೇಕ ಹಾಲು ಒಕ್ಕೂಟ ಸತ್ಯಕ್ಕೆ ಸಂದ ಜಯ.ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಸರಕಾರ ವಿಭಜನೆ ಮಾಡಿದ್ದ ಆದೇಶವನ್ನು ಮರುಸ್ಥಾಪನೆ ಮಾಡುವಂತೆ ಹೈಕೋರ್ಟ್ ತೀರ್ಪು ನೀಡಿದ್ದು, ಇದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಕಾಂಗ್ರೆಸ್ ಸರಕಾರದ ದ್ವೇಷ ರಾಜಕಾರಣ,ಎಡೆಬಿಡಂಗಿ ನಡೆಯಿಂದಾಗಿ 17 ತಿಂಗಳ ಕಾಲ ಕೋಚಿಮುಲ್ ಅಭಿವೃದ್ಧಿ ಕುಂಠಿತ ವಾಗುವಂತೆ ಆಗಿದೆ.ಈನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಅವರು, ಕೋರ್ಟ್ ತೀರ್ಪು ಕಾಂಗ್ರೆಸ್ ನಾಯಕರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ.ಇನ್ನಾದರೂ ಜಿಲ್ಲೆಯ ಅಭಿವೃದ್ದಿಯ ವಿಷಯದಲ್ಲಿ ರಾಜಕೀಯ ಮಾಡದೆ, ಜನಪರವಾಗಿ ಕೆಲಸ ಮಾಡಲಿ ಎಂದು ಆಶಿಸಿದ್ದಾರೆ.