Friday, 25th October 2024

Children Kidnap: ಬೆಳಗಾವಿಯ ಮಕ್ಕಳ ಕಳ್ಳರ ಕಾಲಿಗೆ ಗುಂಡು ಹಾರಿಸಿ ಸೆರೆ, ಮಕ್ಕಳ ರಕ್ಷಣೆ

Belagavi children kidnap

ಬೆಳಗಾವಿ: ಹಾಡಹಗಲೇ ಮಕ್ಕಳನ್ನು ಅಪಹರಿಸಿದ್ದ (Children kidnap) ದುಷ್ಕರ್ಮಿಗಳ ಕಾಲಿಗೆ ಗುಂಡು ಹಾರಿಸಿ (police firing) ಪೋಲಿಸರು ಬಂಧಿಸಿದ್ದಾರೆ. ಅಪಹೃತಗೊಂಡಿದ್ದ ಇಬ್ಬರು ಬಾಲಕರನ್ನು ರಕ್ಷಿಸಲಾಗಿದೆ. ಈ ಘಟನೆ ಬೆಳಗಾವಿ (Belagavi news) ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರವಲಯದ ಮಹಾರಾಷ್ಟ್ರ ಗಡಿಯಲ್ಲಿ ಘಟನೆ ನಡೆದಿದೆ. ಮಕ್ಕಳ ಕಳ್ಳರನ್ನು ತಡೆಯಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಓರ್ವ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುವನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುವಾರ ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಬಡಾವಣೆಯ ವಿಜಯ್ ದೇಸಾಯಿ ಎಂಬವರ ಮನೆಗೆ ಹೊಕ್ಕು ಅವರ ಇಬ್ಬರು ಮಕ್ಕಳಾದ ಸ್ವಸ್ತಿ ವಿಜಯ್ ದೇಸಾಯಿ (4) ಮತ್ತು ವಿಯೋಮ್ ವಿಜಯ ದೇಸಾಯಿ (3) ಇವರನ್ನು ಈ ದುಷ್ಟರು ಅಪಹರಿಸಿ ಪರಾರಿಯಾಗಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಮಕ್ಕಳ ಕಳ್ಳರನ್ನು ಪೊಲೀಸರು ತಡೆಗಟ್ಟಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಪೊಲೀಸರು ಕೊಲ್ಲಾಪುರ ಜಿಲ್ಲೆ ಹಾತ್ ಕನಗಲಾ ಗ್ರಾಮದ ಆರೋಪಿ ಸಂಬಾಜಿ ರಾವಸಾಬ ಕಾಂಬಳೆಯ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆತನನ್ನು ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೆದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿಯಾದ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಗಾಯಗೊಂಡಿದ್ದು ಅವರನ್ನು ಅಥಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Children Kidnap: ಬೆಳಗಾವಿಯಲ್ಲಿ ಹಾಡ ಹಗಲೇ ಇಬ್ಬರು ಮಕ್ಕಳ ಕಿಡ್ನಾಪ್;‌ ವಿಡಿಯೋ ವೈರಲ್‌