Friday, 25th October 2024

Building Demolition: ಬೆಂಗಳೂರಲ್ಲಿ ಬೀದಿಗಿಳಿದ ಬಿಬಿಎಂಪಿ ಬುಲ್ಡೋಜರ್, ಅಕ್ರಮ ಮನೆಗಳಿಗೆ ನಡುಕ

dk shivakumar

ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ (Bengaluru Building collapse) ಮೇಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ (BBMP), ಅಕ್ರಮ ಕಟ್ಟಡ ಕೆಡವಲು (Building Demolition) ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಗುರುವಾರ ಬುಲ್ಡೋಜರ್‌ಗಳು ಬೀದಿಗಿಳಿದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ (DCM DK Shivakumar) ಆದೇಶಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸರ್ವೇ ನಡೆಸಿದ್ದು, ತೆರವು ಕಾರ್ಯಾಚರಣೆ ನಡೆಸಲಿದ್ದಾರೆ.

ತೆರವು ಕಾರ್ಯಾಚರಣೆ ಭಾಗವಾಗಿ ಮಹದೇವಪುರ ವಲಯ ಹೊರಮಾವು ವ್ಯಾಪ್ತಿಯ ನಂಜಪ್ಪ ಗಾರ್ಡನ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವನ್ನು ಒಡೆದು ತೆಗೆಯಲಾಗಿದೆ. ಪುಟ್ಟಪ್ಪ ಎಂಬವರಿಗೆ ಸೇರಿದ, 10 X 25 ಜಾಗದಲ್ಲಿ ಕಟ್ಟಲಾಗುತ್ತಿದ್ದ 5 ಅಂತಸ್ತಿನ ಕಟ್ಟಡವನ್ನು ಕೆಡವಲಾಯಿತು. ಹೆಚ್ಎಎಲ್ ವಾರ್ಡ್ ಇಸ್ಲಾಂಪುರದಲ್ಲಿ ಶ್ರೀರಾಂ ಎಂಬ ಮಾಲೀಕರಿಗೆ ಸೇರಿದ, ಎರಡು ಮಹಡಿಗಳ ಹಳೆಯ ಶಿಥಿಲ ಕಟ್ಟಡವನ್ನೂ ತೆಗೆಯಲಾಗಿದೆ.

ಇದೇ ರೀತಿ ಬೆಂಗಳೂರಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ಕಟ್ಟಡಗಳನ್ನು ಪಟ್ಟಿ ಮಾಡಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಡಿ.ಕೆ ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ ಅಡಿ, ಈ ರೀತಿಯ ತಪ್ಪುಗಳು ನಡೆದರೆ, ಕ್ರಮ ತೆಗೆದುಕೊಳ್ಳಲು ನಮಗೆ ಸಂಪೂರ್ಣ ಅಧಿಕಾರವಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಬಹುದು. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್ ಡಿಎಗೆ ಕೆಲವು ತಿದ್ದುಪಡಿ ತಂದು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದಿದ್ದಾರೆ.

ಈ ಹಿಂದೆಯೂ ಅಧಿಕಾರವನ್ನು ಈ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ 2020-21ರ ಸಮಯದಲ್ಲಿ ಅದನ್ನು ಹಿಂಪಡೆಯಲಾಗಿದೆ. ಇದೀಗ ಮತ್ತೆ ಆ ಅಧಿಕಾರ ಕೊಡ್ತೀವಿ. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಡ್ತೀವಿ. ಆಗ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಸೋಮವಾರದಿಂದ ಕಟ್ಟಡಗಳ ಸಮೀಕ್ಷೆ ಶುರು: ಬೆಂಗಳೂರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಸೋಮವಾರದಿಂದಲೇ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಯಲಿದೆ. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆ ಮಾಡ್ತೀವಿ. ಅಕ್ರಮ ಕಟ್ಟಡ ನಿರ್ಮಾಣ ತಡೆಯಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಮೂಲಕ ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಬಿಎಂಆರ್ ಡಿಎ ಹಾಗೂ ಬಿಎಂಟಿಎಫ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಲಿದ್ದು, ಈ ಪ್ರದೇಶಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Bengaluru Building Collapse: ಕಟ್ಟಡ ದುರಂತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿಎಂ ಘೋಷಣೆ