Friday, 25th October 2024

Deepavali Jewel Fashion: ದೀಪಾವಳಿ ದೇಸಿ ಲುಕ್‌ಗೆ ಬಂತು ಡಿಸೈನರ್‌ ಕ್ಲಿಪಾನ್‌ ಮೂಗುತಿ

Deepavali Jewel Fashion

-ಶೀಲಾ ಸಿ. ಶೆಟ್ಟಿ, ಫ್ಯಾಷನ್‌ ಪತ್ರಕರ್ತೆ

ದೀಪಾವಳಿ ಹಬ್ಬದ ಸೀಸನ್‌ನಲ್ಲಿ (Deepavali Jewel Fashion), ಜ್ಯುವೆಲ್‌ ಲೋಕದಲ್ಲಿ ನಾನಾ ಬಗೆಯ ಆಭರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ ಇದೀಗ ಮೂಗಿನ ಸೌಂದರ್ಯ ಹೆಚ್ಚಿಸುವ ವೈವಿಧ್ಯಮಯ ಕ್ಲಿಪಾನ್ಸ್ ಅಥವಾ ಮೂಗಿಗೆ ಧರಿಸುವ ಸ್ಟಡ್ಸ್ ಪಾಪುಲರ್‌ ಆಗಿವೆ. ಹಬ್ಬದ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವಂತಹ, ಅದರಲ್ಲೂ ಮೂಗು ಚುಚ್ಚಿಸದವರೂ ಕೂಡ ಅತಿ ಸುಲಭವಾಗಿ ಪ್ರೆಸ್‌ ಮಾಡುವ ಮೂಲಕ ಧರಿಸಬಹುದಾದ ಈ ಇನ್‌ಸ್ಟಂಟ್‌ ಮೂಗುತಿಗಳು, ನಾನಾ ಡಿಸೈನ್‌ನಲ್ಲಿ ಆಭರಣಗಳ ಅಂಗಡಿಗೆ ಲಗ್ಗೆ ಇಟ್ಟಿವೆ.

ನಾನಾ ಮೆಟಲ್‌ನಲ್ಲಿ ಲಭ್ಯ

ಅಂದಹಾಗೆ, ಇದೀಗ ಬಂಗಾರದ ಕ್ಲಿಪಾನ್‌ಗಳಿಗೆ ಬೇಡಿಕೆಯಿಲ್ಲ! ಬದಲಿಗೆ ನಾನಾ ಬಗೆಯ ಮೆಟಲ್‌ಗಳಾದ ವನ್‌ ಗ್ರಾಮ್‌ ಗೋಲ್ಡ್, ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌, ಸಿಲ್ವರ್‌ ಹಾಗೂ ಆಕ್ಸಿಡೈಸ್ಡ್ ಸಿಲ್ವರ್‌ನಲ್ಲಿ ಈ ಶೈಲಿಯ ಮೂಗುತಿಗಳು ಬಂದಿವೆ. ಇನ್‌ಸ್ಟಂಟ್‌ ಆಗಿ ದೇಸಿ ಲುಕ್‌ ನೀಡಲು ಬಯಸುವಂತಹ ಮಾನಿನಿಯರನ್ನು ಹಾಗೂ ಯುವತಿಯರನ್ನು ಸೆಳೆದಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ದೇವಾ.

ಚಿತ್ರಗಳು: ಪಿಕ್ಸೆಲ್‌

ವೈವಿಧ್ಯಮಯ ವಿನ್ಯಾಸ

ತಾವರೆ, ಸೇವಂತಿಗೆ, ಮಲ್ಲಿಗೆ, ಗುಲಾಬಿ ಸೇರಿದಂತೆ ನಾನಾ ಬಗೆಯ ಹೂವುಗಳ ಚಿತ್ತಾರದವು, ನಕ್ಷತ್ರ, ಚಂದ್ರ ಸೂರ್ಯ, ನಾಗರಹಾವು, ಬಗೆಬಗೆಯ ಪ್ರಾಣಿ-ಪಕ್ಷಿಯ ಚಿತ್ತಾರದವು, ತ್ರಿಶೂಲ, ಓಂ, ಶಿವನ ಮುಖ, ಸ್ವಸ್ತಿಕ್‌ ಸಿಂಬಲ್‌, ದುರ್ಗೆ ಸೇರಿದಂತೆ ಎಥ್ನಿಕ್‌ ಲುಕ್‌ ಹಾಗೂ ಸ್ಪಿರಿಚ್ಯುಯಲ್‌ ಸಿಂಬಲ್‌ನ ಮೂಗಿನ ಬಗೆಬಗೆಯ ಸ್ಟಡ್ಸ್ ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ರೇಣು.

ಈ ಸುದ್ದಿಯನ್ನೂ ಓದಿ | Deepavali Shopping 2024: ವೀಕೆಂಡ್‌‌‌ಗೆ ಮುನ್ನವೇ ಶುರುವಾಯ್ತು ದೀಪಾವಳಿ ಹಬ್ಬದ ಶಾಪಿಂಗ್‌

ಆನ್‌ಲೈನ್‌ನಲ್ಲಿ ಕ್ಲಿಪಾನ್‌ ಮೂಗುತಿಗಳ ಸಾಗರ

ಇದೀಗ ಆನ್‌ಲೈನ್‌ ಜ್ಯುವೆಲ್‌ ಶಾಪ್‌ಗಳ ವೆಬ್‌ಸೈಟ್‌ಗಳಲ್ಲಿ ಬೇಕಾದ ವಿನ್ಯಾಸದ ನೋಸ್‌ ಸ್ಟಡ್ಸ್ ಅಥವಾ ಕ್ಲಿಪಾನ್‌ಗಳು ಅತಿ ಸುಲಭವಾಗಿ ದೊರೆಯುತ್ತಿವೆ. ಇನ್ನು, ಉದ್ಯಾನನಗರಿಯ ಸಫೀನಾ ಪ್ಲಾಜಾ, ಕಮರ್ಷಿಯಲ್‌ ಸ್ಟ್ರೀಟ್‌ ಸುತ್ತ-ಮುತ್ತಾ, ಮಲ್ಲೇಶ್ವರ ಶಾಪಿಂಗ್‌ ಏರಿಯಾದಲ್ಲಿ, ಜಯನಗರ 4ನೇ ಬ್ಲಾಕ್‌, ಗಾಂಧಿಬಜಾರ್‌, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ನಾನಾ ಕಡೆಯೂ ಸಾಕಷ್ಟು ಸ್ಟ್ರೀಟ್‌ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ಲಭ್ಯ.

ದೇಸಿ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್‌

ದೀಪಾವಳಿಯಂದು ಧರಿಸುವ ಎಲ್ಲಾ ಬಗೆಯ ಎಥ್ನಿಕ್‌ವೇರ್‌ಗಳೊಂದಿಗೆ ಈ ಮೂಗುತಿಯನ್ನು ಧರಿಸಬಹುದು. ಮೂಗನ್ನು ಪಿಯರ್ಸಿಂಗ್‌ ಮಾಡಿಸದಿದ್ದವರೂ ಕೂಡ ಕೈಯಲ್ಲಿ ಇವನ್ನು ಪ್ರೆಸ್‌ ಮಾಡಿ ಧರಿಸಬಹುದು. ಹಾಗಾಗಿ ಇದು ಮಹಿಳೆಯರ ಹಾಗೂ ಯುವತಿಯರ ಹಬ್ಬದ ಜ್ಯುವೆಲ್‌ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದೀನಾ.

ಈ ಸುದ್ದಿಯನ್ನೂ ಓದಿ | Reliance: ಕೃತಕ ಬುದ್ಧಿಮತ್ತೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ ರಿಲಯನ್ಸ್- ಎನ್‌ವಿಡಿಯಾ

ಸ್ಟೈಲಿಂಗ್‌ ಆಯ್ಕೆ ಹೇಗೆ?

ಎಥ್ನಿಕ್‌ ಔಟ್‌ಫಿಟ್‌ ಜತೆ ಮಾತ್ರವಲ್ಲ, ಮಿಕ್ಸ್‌ ಮ್ಯಾಚ್‌ ಮಾಡಿದ ಡಿಸೈನರ್‌ವೇರ್‌ ಜತೆಗೂ ಧರಿಸಬಹುದು.
ಟ್ಯೂನಿಕ್ಸ್‌, ಫಾರ್ಮಲ್‌ ಪ್ಯಾಂಟ್ಸ್‌ , ಜಂಪ್‌ಸೂಟ್‌ಗೂ ಮ್ಯಾಚ್‌ ಮಾಡಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಬಹುದು.
ಖರೀದಿಸುವ ಮುನ್ನ ಟ್ರಯಲ್‌ ನೋಡಿ, ಕೊಳ್ಳುವುದು ಉತ್ತಮ.
ವಧನದ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಬೆಸ್ಟ್.
ಜೆಮೆಟ್ರಿಕಲ್‌ ಡಿಸೈನ್‌ನವು ವೆಸ್ಟರ್ನ್ ಔಟ್‌ಫಿಟ್‌ಗೆ ಉತ್ತಮ.
ಸ್ಪಿರಿಚ್ಯುವಲ್‌ ಕ್ಲಿಪಾನ್ಸ್‌, ಸೀರೆ, ಲೆಹಂಗಾಗೆ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)