Friday, 25th October 2024

Farooq Abdullah: ಎಷ್ಟೇ ದಾಳಿ ನಡೆಸಿದರೂ ಕಾಶ್ಮೀರ‌ ಎಂದಿಗೂ ಪಾಕ್‌ನ ಭಾಗ ಆಗೋದಿಲ್ಲ; ಫಾರೂಕ್‌ ಅಬ್ದುಲ್ಲಾ

Farooq abulllah

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಸರಣಿ ಉಗ್ರರ ದಾಳಿ ನಡೆಯುತ್ತಿರುವ ಬೆನ್ನಲ್ಲೇ ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌(National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ(Farooq Abdullah) ಗುಡುಗಿದ್ದಾರೆ. ನಿನ್ನೆ ಗುಲ್ಮಾರ್ಗ್‌ನಲ್ಲಿ ನಡೆದ ಉಗ್ರ ದಾಳಿ(Gulmarg terror attack)ಯಲ್ಲಿ ಒಟ್ಟು ಮೂವರು ಯೋಧರು ಮತ್ತು ಇಬ್ಬರು ನಾಗರಿಕರು ಬಲಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಫಾರೂಕ್‌ ಅಬ್ದುಲ್ಲಾ, ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಶ್ಮೀರದಲ್ಲಿ ಅಮಾಯಕ ಜನರನ್ನು ಹತ್ಯೆ ಮಾಡಲಾಗುತ್ತಿದೆ. ಅದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಎಂದಿಗೂ ಪಾಕಿಸ್ತಾನದ ಭಾಗವಾಗುವುದಿಲ್ಲ. ಹಾಗಿದ್ದ ಮೇಲೆ ನಮ್ಮ ಮೇಲೆ ಏಕೆ ದಾಳಿ ನಡೆಸುತ್ತಿದ್ದೀರಿ? ಇದು ನಮ್ಮ ಭವಿಷ್ಯವನ್ನು ಹಾಳುಮಾಡುವ ಪ್ರಯತ್ನವೇ? ಎಂದು ಫಾರೂಕ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ತನ್ನದೇ ದೇಶದತ್ತ ಗಮನ ಹರಿಸಬೇಕು, ತನ್ನದೇ ಆದ ಅಭಿವೃದ್ಧಿಯನ್ನು ನೋಡಬೇಕು ಮತ್ತು ಅದನ್ನು ಸುಧಾರಿಸಲು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಪಾಕಿಸ್ತಾನ ಸ್ವತಃ ಅವನತಿಯತ್ತ ಸಾಗುತ್ತಿದೆ. ಅದರ ನಡುವೆ ನಮ್ಮನ್ನು ಅತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಈ ಭಯೋತ್ಪಾದನೆಯನ್ನು ನಿಲ್ಲಿಸಿ ಸ್ನೇಹದ ಹಾದಿಯನ್ನು ಹುಡುಕುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ. ಅವರು ಇದನ್ನು ಮಾಡದಿದ್ದರೆ, ಅವರಿಗೆ ತುಂಬಾ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಳೆದ ಹದಿನೈದು ದಿನಗಳಲ್ಲಿ, ನಾಗರಿಕರು, ಕಾರ್ಮಿಕರು, ಅನಿವಾಸಿಗಳು, ವೈದ್ಯರು ಮತ್ತು ಸೇನಾ ಪೋರ್ಟರ್‌ಗಳು ಸೇರಿದಂತೆ 20 ಜೀವಗಳನ್ನು ಕಳೆದುಕೊಂಡಿದ್ದಾರೆ. ನಿನ್ನೆ ಸಂಜೆ ಗುಲ್ಮಾರ್ಗ್‌ನಲ್ಲಿ ಉಗ್ರರ ದಾಳಿ ನಡೆಸಿದ್ದು, ಇದರ ಪರಿಣಾಮವಾಗಿ ಮೂವರು ಸೈನಿಕರು ಮತ್ತು ಇಬ್ಬರು ಭಾರತೀಯ ಸೇನಾ ಪೋರ್ಟರ್‌ಗಳು ಸಾವನ್ನಪ್ಪಿದ್ದಾರೆ. ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಿಂದ ಸುಮಾರು 6 ಕಿಮೀ ದೂರದಲ್ಲಿರುವ ಬೋಟಪತ್ರಿಯಲ್ಲಿ ಎರಡು ಸೇನಾ ಟ್ರಕ್‌ಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ; 4 ಮಂದಿ ಬಲಿ