Thursday, 21st November 2024

Shiggaon By Election: ಕಾಂಗ್ರೆಸ್‌ ದುರಾಡಳಿತದಿಂದ ರಾಜ್ಯವನ್ನು ರಕ್ಷಿಸಲು ನನ್ನ ಮಗನನ್ನು ಗೆಲ್ಲಿಸಿ; ಬೊಮ್ಮಾಯಿ ಮನವಿ

Basavaraja Bommai

ಶಿಗ್ಗಾವಿ: ಕಾಂಗ್ರೆಸ್‌ನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಭರತ್ ಬೊಮ್ಮಾಯಿಯವರನ್ನು (Bharat Bommai) ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ‌. ಶಿಗ್ಗಾವಿಯಲ್ಲಿ (Shiggaon By Election) ಇಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆಗೂ ಮುನ್ನ ಶಿಗ್ಗಾವಿ ಪಟ್ಟಣದಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ಪಾಲ್ಗೊಂಡು ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಭರತ್ ಬೊಮ್ಮಾಯಿವರಿಗೆ ಇಷ್ಟು ದೊಡ್ಡ ಶಕ್ತಿ ನೀಡಿದ್ದೀರಿ ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನನ್ನ ಚುನಾವಣೆಗೆ ನಾಲ್ಕು ಬಾರಿ ಶಿಗ್ಗಾವಿಗೆ ಬಂದಿದ್ದಾರೆ. ಅವರು ಶಿಗ್ಗಾವಿಗೆ ಕಾಲಿಟ್ಟಾಗಲೆಲ್ಲಾ ಬಿಜೆಪಿ ಇಲ್ಲಿ ಗೆದ್ದಿದೆ. ಯಡಿಯೂರಪ್ಪ ಅವರ ಆಶೀರ್ವಾದ ಎಷ್ಟಿದೆ ಎಂದರೆ ನನಗಿಂತ ಹೆಚ್ಚಿನ ಅಂತರದಿಂದ ಭರತ್‌ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ |Reliance: ಕೃತಕ ಬುದ್ಧಿಮತ್ತೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ ರಿಲಯನ್ಸ್- ಎನ್‌ವಿಡಿಯಾ

ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಬಿಜೆಪಿ ಕಟ್ಟಿದ್ದಾರೆ ಅವರ ಶ್ರಮದಿಂದ ಶಿಗ್ಗಾವಿಯಲ್ಲಿ ಐಟಿಐ, ಮೆಡಿಕಲ್ ಕಾಲೇಜು, ಆಸ್ಪತ್ರೆ ಬಂದಿದೆ. ಕ್ಷೇತ್ರದಲ್ಲಿ ಗಾರ್ಮೆಂಟ್ ಕಾರ್ಖಾನೆಯಿಂದ ಸುಮಾರು ಐದು ಸಾವಿರ ಹೆಣ್ಣು ಮಕ್ಕಳು ಉದ್ಯೋಗ ಪಡೆದಿದ್ದಾರೆ. ಕಾಂಗ್ರೆಸ್‌ನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಬೇಕು. ಅದಕ್ಕಾಗಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ರೈತರು, ಹಿಂದುಳಿದವರು, ಮಹಿಳೆಯರು, ಯುವಕರ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಭರತ್ ಗೆ ಆದೇಶ ಮಾಡುತ್ತೇನೆ. ನಾನು ನಿಮ್ಮ ಜತೆಗೆ ಇರುತ್ತೇನೆ. ಚುನಾವಣೆಯಲ್ಲಿ ಯಾರೂ ಮೈಮರೆಯಬಾರದು, ಹತ್ತು ದಿನ ಎಲ್ಲರೂ ಬೂತ್‌ಮಟ್ಟದಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಹೆಚ್ಚಿನ ಮತದ ಅಂತರದಲ್ಲಿ ಭರತ್‌ನನ್ನು ಗೆಲ್ಲಿಸಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಚುನಾವಣೆಯ ದಿನ ನಿಮ್ಮೆಲ್ಲ ಬಂಧುಗಳ ಜತೆ ಬಂದು ಭರತ್ ಬೊಮ್ಮಾಯಿಗೆ ಮತ ನೀಡಿ ಗೆಲ್ಲಿಸಬೇಕು. ಬಸವರಾಜ ಬೊಮ್ಮಾಯಿಯವರಿಗಿಂತ ಹೆಚ್ಚಿನ ಮತದ ಅಂತರದಲ್ಲಿ ಭರತ್‌ನನ್ನು ಗೆಲ್ಲಿಸಬೇಕು. ಇಂತಹ ಉರಿ ಬಿಸಿಲಿನಲ್ಲಿ ನೀವೆಲ್ಲ ಬಂದು ಬೆಂಬಲ ಸೂಚಿಸಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತ ವಿರೋಧಿ ಸರ್ಕಾರ ನಮಗೆ ಬೇಡ, ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿದ ಸರ್ಕಾರ ನಮಗೆ ಬೇಕಾ, ಇಂತ ಸರ್ಕಾರ ಹೋಗಬೇಕೆಂದರೆ ಭರತ್ ಬೊಮ್ಮಾಯಿ ಗೆಲ್ಲಬೇಕು. ನೀವು ತೋರಿಸುತ್ತಿರುವ ಪ್ರೀತಿಯಿಂದ ಭರತ್ ಬೊಮ್ಮಾಯಿ ಗೆಲ್ಲುತ್ತಾರೆ‌. ಕಾಂಗ್ರೆಸ್ ದಲಿತ ವಿರೋಧಿ ಪಕ್ಷ, ಅದಕ್ಕೆ ಪಾಠ ಕಲಿಸಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Job Guide: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿಯ 500 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾಜಿ ಸಚಿವ ಬೈರತಿ ಬಸವರಾಜ ಮಾತನಾಡಿ, ಭರತ್ ಬೊಮ್ಮಾಯಿ ಒಬ್ಬ ಯುವಕ ಇದ್ದಾನೆ ಅವನು ಇನ್ನೂ ಇಪ್ಪತೈದು ವರ್ಷ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾನೆ. ಹಾಲುಮತದ ಸಮಾಜದ ಜನರು ಒಂದು ಓಟನ್ನೂ ಕಾಂಗ್ರೆಸ್‌ಗೆ ಹಾಕದೇ ಬಿಜೆಪಿಗೆ ಬೆಂಬಲಿಸಬೇಕು. ನಾನು ಸದಾ ನಿಮ್ಮ ಜತೆಗೆ ಇರುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಭರತ್ ಬೊಮ್ಮಾಯಿಯವರು ಸುಮಾರು 50 ಸಾವಿರಕ್ಕೂ‌ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಯುವ ನಾಯಕ. ನಿಮ್ಮ ಮತದ ಜತೆಗೆ ಮಹಿಳೆಯರು ಹಾಗೂ ಎಲ್ಲರ ಮತಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಸವಣೂರು ಶಾಸಕರಾಗುವ ಮುನ್ನ ಶಿಗ್ಗಾವಿ ಸವಣೂರು ಹೆಸರೇ ಗೊತ್ತಿರಲಿಲ್ಲ. ಬಸವರಾಜ ಬೊಮ್ಮಾಯಿಯವರು ಈ ಕ್ಷೇತ್ರದ ಚಿತ್ರಣ ಬದಲಾಯಿಸಿದರು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನೀರಾವರಿ ಕ್ರಾಂತಿ ಮಾಡಿದರು. ಭರತ್ ಬೊಮ್ಮಾಯಿಯವರು ಇವತ್ತು ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. 17% ಎಸ್ಸಿ ಜನಾಂಗಕ್ಕೆ, 7% ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಭರತ್ ಬೊಮ್ಮಾಯಿಯವರನ್ನು ಗೆಲ್ಲಿಸಿ ಕಳುಹಿಸಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.

ತಂದೆಯ ಅಭಿವೃದ್ಧಿ ಕನಸು ನನಸು ಮಾಡುತ್ತೇನೆ

ನಮ್ಮ ಪಕ್ಷದ ನಾಯಕರ ಆಸೆಯಂತೆ ತಂದೆಯ ಅಭಿವೃದ್ಧಿ ಕನಸು ನನಸು ಮಾಡುತ್ತೇನೆ ಎಂದು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಶಿಗ್ಗಾವಿಯಲ್ಲಿ ಪಟ್ಟಣದಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದರು.

ಇಷ್ಟು ದೊಡ್ಡ ಸಂಖ್ಯೆಯಲ್ಕಿ ಬಂದಿದ್ದೀರಿ ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲ್ಲ. ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ತಂದೆಯವರು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ.‌ ಕೆರೆ ತುಂಬಿಸಿದ್ದಾರೆ‌, ಆಸ್ಪತ್ರೆ ತಂದಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ ದೀನ ದಲಿತರು, ಎಸ್ಸಿ ಎಸ್ಟಿ, ರೈತರು, ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡುತ್ತೇನೆ. ನಿಮ್ಮ ತಮ್ಮನಾಗಿ ನಿಮ್ಮೆಲ್ಲರ ರಕ್ಷಣೆ ಮಾಡುತ್ತೇನೆ‌. ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಆಗಮಿರುವುದಕ್ಕೆ ನಿಮಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಭರತ್ ಬೊಮ್ಮಾಯಿ ಹೇಳಿದರು.

ಈ ಸುದ್ದಿಯನ್ನೂ ಓದಿ | Deepavali Shopping 2024: ವೀಕೆಂಡ್‌‌‌ಗೆ ಮುನ್ನವೇ ಶುರುವಾಯ್ತು ದೀಪಾವಳಿ ಹಬ್ಬದ ಶಾಪಿಂಗ್‌

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಸಿ. ಪಾಟೀಲ್, ಶಂಕರ ಪಾಟೀಲ್ ಮುನೇನಕೊಪ್ಪ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.