Monday, 25th November 2024

Ratan Tata: ರತನ್‌ ಟಾಟಾ ಆಸ್ತಿಯಲ್ಲಿ ಪ್ರೀತಿಯ ಶ್ವಾನಕ್ಕೂ ಪಾಲು; 10000 ಕೋಟಿ ರೂ. ವಿಲ್‌ನಲ್ಲಿ ಏನೇನಿದೆ?

tata

ನವದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ಉದ್ಯಮ ಜಗತ್ತಿನ ದಿಗ್ಗಜ ರತನ್‌ ಟಾಟಾ(Ratan Tata) ಅವರು ವಿಧಿವಶರಾಗಿದ್ದರು. ಅವರ ಅಗಲಿಕೆ ನಂತರ ಅವರ ಬೃಹತ್‌ ಉದ್ಯಮವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಭುಗಿಲೆದ್ದಿತ್ತು. ಅವರ ಸೋದರ ಸಂಬಂಧಿ ನೋಯಲ್‌ ಟಾಟಾ ಮುಖ್ಯಸ್ಥರಾಗಿ ಆಯ್ಕೆಯಾಗುವ ಮೂಲಕ ಆ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಇದರ ನಂತ ರತನ್ ಟಾಟಾ ಆಸ್ತಿ, ಆದಾಯಗಳಿಗೆ ಯಾರು ವಾರಸ್ದಾರ ಯಾರೆಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಗೊಂದಲಕ್ಕೂ ಇದೀಗ ತೆರೆ ಬಿದ್ದಿದೆ. ಸಾವಿಗೂ ಮುನ್ನ ವಿಲ್‌ ಬರೆದಿರುವ ರತನ್ ಟಾಟಾ, ತಮ್ಮ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಯಾರೆಗೆಲ್ಲಾ ಎಷ್ಟು ಪಾಲು ನೀಡಬೇಕು ಅನ್ನೋದನ್ನು ಸೂಚಿಸಿದ್ದಾರೆ. ಅಲ್ಲದೇ ಇದರಲ್ಲಿ ವಿಶೇಷವಾಗಿ ಅವರ ಮುದ್ದಿನ ನಾಯಿಗೂ ಬಹು ದೊಡ್ಡ ಪಾಲನ್ನೇ ಮೀಸಲಿಟ್ಟಿದ್ದಾರೆ. ಆಮೂಲಕ ತಾವೊಬ್ಬ ವಿಶೇಷ ವ್ಯಕ್ತಿಯೆಂಬುದನ್ನು ತೋರಿಸಿಕೊಟ್ಟಿದ್ದಾರೆ.

10,000 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ರತನ್ ಟಾಟಾ ತಮ್ಮ ಸಂಪತ್ತನ್ನು ತಮ್ಮ ಫೌಂಡೇಶನ್, ಸಹೋದರ, ಮಲಸಹೋದರಿಯರು, ಮನೆ ಸಿಬ್ಬಂದಿ ಮತ್ತು ಇತರರಿಗೆ ಹಂಚಿದ್ದಾರೆ. ರತನ್ ಟಾಟಾ ಅವರ ಆಸ್ತಿಗಳ ಪೈಕಿ ಮುಂಬೈನ ಆಲಿಬಾಗ್‌ನಲ್ಲಿರುವ 2000 ಚದರ ಅಡಿಯ ಬೀಚ್ ಬಂಗಲೆ, ಜುಹು ತಾರಾ ರಸ್ತೆಯಲ್ಲಿರುವ 2 ಮಹಡಿಗಳ ಕಟ್ಟಡ. 350 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಹಲವು ಆಸ್ತಿಗಳನ್ನು ಹೊಂದಿದ್ದಾರೆ.

ರತನ್ ಟಾಟಾ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿದ್ದಾರೆ ಮತ್ತು 7,900 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇನ್ನು 20 ರಿಂದ 30 ದುಬಾರಿ ಹಾಗೂ ಐಷಾರಾಮಿ ಕಾರುಗಳು ರತನ್ ಟಾಟಾ ಬಳಿ ಇವೆ. ರತನ್ ಟಾಟಾ ತಮ್ಮ ಕೊನೆಯ ದಿನಗಳನ್ನು ಕಳೆದ ಕೊಲಾಬದಲ್ಲಿರುವ ಹ್ಯಾಲೆಕೈ ನಿವಾಸ ಕೂಡ ಹಂಚಿದ್ದಾರೆ. 165 ಬಿಲಿಯನ್ ಡಾಲರ್‌ಗಳ ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿರುವ ರತನ್ ಟಾಟಾ ಅವರ ಆಸ್ತಿಗಳನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (RTEF) ಗೆ ವರ್ಗಾಯಿಸಲಾಗುತ್ತದೆ. ಎಲ್ಲಾ ಸ್ಪಷ್ಟ ನಿರ್ದೇಶನಗಳನ್ನು ರತನ್ ಟಾಟಾ ವಿಲ್ ಮೂಲಕ ನೀಡಿದ್ದಾರೆ.

ನೆಚ್ಚಿನ ಗೆಳೆಯನ ಸಾಲ ಮನ್ನಾ

ಕುತೂಹಲಕಾರಿಯಾಗಿ, ಟಾಟಾ ಅವರು ತಮ್ಮ ಸಹಾಯಕ ಶಂತನು ನಾಯ್ಡು ಅವರ ಮೇಲೆ ಅತೀವ ಪ್ರೀತಿ ಕಾಳಜಿಯನ್ನು ಹೊಂದಿದ್ದರು. ಕೆಲವು ವರದಿಗಳ ಪ್ರಕಾರ, ಬೀದಿನಾಯಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ರಿಫ್ಲೆಕ್ಟರ್ ಹೊಂದಿರುವ ನಾಯಿಯ ಕಾಲರ್ ಕುರಿತು ನಾಯ್ಡು ಒಮ್ಮೆ ಟಾಟಾಗೆ ಪತ್ರ ಬರೆದಿದ್ದರು. ಬೀದಿ ನಾಯಿಗಳಿಗೆ ಬೀದಿಗಳನ್ನು ಸುರಕ್ಷಿತವಾಗಿಸಲು ಪ್ರಾಣಿ ಕಲ್ಯಾಣ ಎನ್‌ಜಿಒ ಮೋಟೋಪಾಸ್‌ನಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು. ಇದೀಗ ಅವರಿಗೂ ತಮ್ಮ ಆಸ್ತಿಯಲ್ಲಿ ಪಾಲು ನೀಡಿರುವ ಟಾಟಾ, ಅವರ ಪಡೆದಿದ್ದ ವೈಯಕ್ತಿಕ ಸಾಲವನ್ನು ಮನ್ನಾ ಮಾಡಿದ್ದಾರೆ.

ಡಿಸೆಂಬರ್ 28, 1937 ರಂದು ಜನಿಸಿದ ರತನ್ ಟಾಟಾ ಅವರು 2024 ಅಕ್ಟೋಬರ್ 9 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ವೈದ್ಯರ ಪ್ರಾಥಮಿಕ ವರದಿ ಪ್ರಕಾರ, ಟಾಟಾ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ತಕ್ಷಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು‌. ಇದಾದ ನಂತರ ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವು ಊಹಾಪೋಹಗಳು ಭುಗಿಲೆದ್ದಿದ್ದವು. ಅದಕ್ಕೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಇದಾರ ಎರಡು ದಿನಗಳಲ್ಲಿ ಮತ್ತೆ ಟಾಟಾ ಆರೋಗ್ಯ ಸ್ಥಿತಿ ಗಂಭೀರಾವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು. ಇದೀಗ ರತನ್ ಟಾಟಾ ಅವರ ಹಠಾತ್ ನಿಧನಕ್ಕೆ ನಿಖರವಾಗಿ ಕಾರಣವೇನು ಎಂಬುದನ್ನು ಖಚಿತಪಡಿಸಲು ಕುಟುಂಬಸ್ಥರು ವೈದ್ಯರಿಂದ ಅಧಿಕೃತ ವರದಿಗಾಗಿಕಾಯುತ್ತಿರುವ ನಡುವೆಯೇ ಕಡಿಮೆ ರಕ್ತದೊತ್ತಡ, ವಯೋ ಸಹಜ ಕ್ಷೀಣತೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾರಣಗಳಲ್ಲಿ ಸೇರಿವೆ ಎಂದು ತಜ್ಞರು ಊಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ratan tata: ರತನ್‌ ಟಾಟಾ ಸಾವಿಗೆ ನಿಜವಾದ ಕಾರಣ ಏನು? ವೈದ್ಯರು ಹೇಳಿದಿಷ್ಟು!