ಚೆನ್ನೈ: ʼಘಜಿನಿʼ ಭಾರತದಲ್ಲಿ ಸಂಚಲನ ಮೂಡಿಸಿದ ಚಿತ್ರ. ತಮಿಳು ಮತ್ತು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಚಿತ್ರದ ಸೀಕ್ವೆಲ್‌ಗಾಗಿ ಕಾದು ಕುಳಿತವರಿಗೆ ಇಲ್ಲಿದೆ ಗುಡ್‌ನ್ಯೂಸ್. ಶೀಘ್ರದಲ್ಲಿಯೇ ಈ ಚಿತ್ರದ ಎರಡನೇ ಭಾಗ ಸೆಟ್ಟೇರಲಿದೆಯಂತೆ (Ghajini 2). ಹೌದು, ಕಾಲಿವುಡ್ ಸ್ಟಾರ್ ನಿರ್ದೇಶಕ ಎ.ಆರ್.ಮುರುಗದಾಸ್ (AR Murugadoss) ತಮಿಳು ಮತ್ತು ಹಿಂದಿಯಲ್ಲಿ ಆ್ಯಕ್ಷನ್ ಕಟ್ ಹೇಳಿದ್ದ ʼಘಜಿನಿʼ ಚಿತ್ರದ ಸೆಕೆಂಡ್ ಪಾರ್ಟ್ ತಯಾರಾಗುವ ಹಂತದಲ್ಲಿದೆ. ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ತಮಿಳಿನಲ್ಲಿ ಸೂರ್ಯ (Suriya) ಮತ್ತು ಹಿಂದಿಯಲ್ಲಿ ಆಮೀರ್ ಖಾನ್ (Aamir Khan) ನಾಯಕರಾಗಿ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ.
2005ರಲ್ಲಿ ತೆರೆ ಕಂಡ ಎ.ಆರ್.ಮುರುಗದಾಸ್ ನಿರ್ದೇಶನದ ತಮಿಳಿನ ʼಘಜಿನಿʼ ಸೂರ್ಯ ಅವರ ಕೆರಿಯರ್‌ಗೆ ಹೊಸ ಮೈಲೇಜ್ ನೀಡಿದ ಚಿತ್ರ. ಸೂರ್ಯ ಜತೆಗೆ ಆಸಿನ್, ನಯನತಾರಾ, ಪ್ರದೀಪ್ ರಾವತ್ ಅಭಿನಯಿಸಿದ ಈ ಸಿನಿಮಾ 7 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 50 ಕೋಟಿ ರೂ. ಗಳಿಸಿತ್ತು. ಈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಮರೆಗುಳಿ ಬ್ಯುಸಿನೆಸ್ ಮ್ಯಾನ್ ಪಾತ್ರದಲ್ಲಿ ಸೂರ್ಯ ಮಿಂಚಿದ್ದರು. ಜತೆಗೆ ಹ್ಯಾರಿಸ್ ಜಯರಾಜ್ ಅವರ ಸಂಗೀತವೂ ಗಮನ ಸೆಳೆದಿತ್ತು.
ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆದ ಈ ಚಿತ್ರವನ್ನು ಬಳಿಕ ಬಾಲಿವುಡ್‌ಗೆ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿಯೂ ಈ ಚಿತ್ರವನ್ನು ಎ.ಆರ್.ಮುರುಗದಾಸ್ ಅವರೇ ನಿರ್ದೇಶಿಸಿದ್ದರು. ಆಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಆಸಿನ್ ಮುಂದುವರಿದಿದ್ದರು. ಜಿಯಾ ಖಾನ್, ಪ್ರದೀಪ್ ರಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ 232 ಕೋಟಿ ರೂ. ಈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು. ಹೀಗೆ ಎರಡೂ ಭಾಷೆಗಳಲ್ಲಿ ಸಂಚಲನ ಮೂಡಿಸಿದ ʼಘಜಿನಿʼ ಸೀಕ್ವೆಲ್ ಆರಂಭವಾಗಲಿದೆ ಎನ್ನುವ ಸುದ್ದಿ ಸದ್ಯ ಭಾರಿ ಸದ್ದು ಮಾಡುತ್ತಿದೆ.
ಫ್ಯಾನ್ಸ್ ಬೇಡಿಕೆ
ʼಘಜಿನಿʼ ಸೀಕ್ವೆಲ್ ಬರಬೇಕು ಎನ್ನುವುದು ಅದೇಷ್ಟೋ ಸಿನಿರಸಿಕರ ಬೇಡಿಕೆಯೂ ಹೌದು. ಅದೀಗ ನನಸಾಗುವ ಹಂತದಲ್ಲಿದೆ. ಈ ಬಗ್ಗೆ ಸ್ವತಃ ಕಾಲಿವುಡ್ ಸ್ಟಾರ್ ಸೂರ್ಯ ಸೂಚನೆ ನೀಡಿದ್ದಾರೆ. ತೆಲುಗಿನ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂಟೇನಾ ಜತೆಗೆ ಸೇರಿ ʼಘಜಿನಿ 2ʼ ನಿರ್ಮಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಸೂರ್ಯ ಹಾಗೂ ನಿರ್ಮಾಪಕ ಅಲ್ಲು ಅರವಿಂದ್ ಅವರೊಂದಿಗೆ ‘ಘಜನಿ 2’ ಬಗ್ಗೆ ಮಾತುಕತೆ ನಡೆದಿದೆಯಂತೆ. ಈ ಬಗ್ಗೆ ಮಾತನಾಡಿದ ಸೂರ್ಯ, ‘ಘಜನಿ 2’ ಸಿನಿಮಾದಲ್ಲಿ ನಟಿಸುವುದಕ್ಕೆ ಸಾಧ್ಯವಿದೆಯಾ? ಎಂದು ನಿರ್ಮಾಪಕ ಅಲ್ಲು ಅರವಿಂದ್ ಕೇಳಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ಏಕಕಾಲಕ್ಕೆ ಚಿತ್ರೀಕರಣ
ಎ.ಆರ್.ಮುರುಗದಾಸ್ ಅವರೇ ಸೀಕ್ವೆಲ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅತ್ತ ಆಮೀರ್ ಖಾನ್ ಜತೆಗೂ ಈ ಬಗ್ಗೆ ಚರ್ಚೆ ನಡೆಸಲಾಗಿದೆಯಂತೆ. ಏಕಕಾಲಕ್ಕೆ ಈ ಚಿತ್ರ ತಮಿಳು ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ಈಗಾಗಲೇ ಕಥೆಯ ಒಂದೆಳೆ ತಯಾರಾಗಿದ್ದು, ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ. ಸೂರ್ಯ ಮತ್ತು ಆಮೀರ್ ಖಾನ್ ಇಬ್ಬರಿಗೂ ತಮ್ಮ ಚಿತ್ರ ರಿಮೇಕ್ ಎಂದೆನಿಸಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಜತೆಯಲ್ಲಿಯೇ ಚಿತ್ರೀಕರಣ ನಡೆಸಿ, ಒಂದೇ ದಿನ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Kanguva First Review: ಬಿಡುಗಡೆ ಮುನ್ನವೇ ಹೊರಬಿತ್ತು ʼಕಂಗುವಾʼ ರಿವ್ಯೂ; ಹೇಗಿದೆ ಕಾಲಿವುಡ್ ಸ್ಟಾರ್ ಸೂರ್ಯ ಸಿನಿಮಾ?