Saturday, 23rd November 2024

ಮೂಷಿಕ ಎಂಬ ಒಂದು ಆಸೆಬುರುಕ ಇಲಿ

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಮಳೆ ಬರುವಂತೆ ಆಕಾಶದಲ್ಲಿ ಕಪ್ಪಾದ ಮೋಡಗಳು ಕಂಡವು. ಹೊರಗೆ ಒಣಹಾಕಿದ್ದ ಬಟ್ಟೆಗಳನ್ನು ಮಳೆ ಬರುವ ಮುನ್ನವೇ ತೆಗೆಯಬೇಕೆಂದು ಅಜ್ಜ ರಘುವನ್ನು ಕರೆದು ‘‘ ರಘು ಬೇಗನೇ ಓಡಿಹೋಗಿ ಬಟ್ಟೆಗಳ  ಒಳಗೆ ತೆಗೆದುಕೊಂಡು ಬಾ’’ ಎಂದರು, ಕಂಪ್ಯೂಟರ್ ಮುಂದೆ ಕುಳಿತ ರಘು ಎಳದೇ ಆಲಸ್ಯದಿಂದ, ತುಂಟತನದಿಂದ ಅಜ್ಜ, ಬಟ್ಟೆ ತಂದರೆ ನನಗೇನು ಕೊಡುತ್ತಿ? ಏನೂ ಕೊಡುವುದಿಲ್ಲ. ನೀನು ನನ್ನ ಮೊಮ್ಮಗ.

ನಮ್ಮ ಕುಟುಂಬದವನು, ಹೊರಗಿನವನೇನಲ್ಲ ಎಂದರು. ನಮ್ಮ ಮನೆಯಲ್ಲಿ ನಮ್ಮಪ್ಪ ಏನಾದರೂ ಕೆಲಸಹೇಳಿದರೆ, ಅದನ್ನು ಮಾಡಿದರೆ ಏನಾದರೂ ಗಿಫ್ಟ್ ಕೊಟ್ಟೇ ಕೊಡುತ್ತಾರೆ, ಅದಕ್ಕೆ ಕೇಳಿದೆ. ಅದು ತಪ್ಪು. ಮತ್ತೊಬ್ಬರಿಗೆ ಸಹಾಯ ಮಾಡುವಾಗ
ನಮಗೆ ಸಂತೋಷ ಬರಬೇಕು, ಅದುವೆ ಗಿಫ್ಟ್‌ ಎಂದರು ಅಜ್ಜ. ಅಷ್ಟರಲ್ಲಿ ಒಳಗಿನಿಂದ ಬಂದ ಅಜ್ಜಿ ‘‘ ಹೌದೌದು, ಅಜ್ಜ ಹೇಳಿದ್ದು ನಿಜ. ನಿಮ್ಮ ತಂದೆಗೆ ನಾನು ಹೇಳುತ್ತೇನೆ. ಇಲ್ಲಾದ್ರೆ ನಿನ್ನ ಜೀವನ ಮೂಷಿಕ ಥರ ಆಗುತ್ತದೆ ’’ ಎಂದಳು.

ಯಾರು ಮೂಷಿಕ? ಇದು ಹೊಸ ಕಥೆಯಾ? ರಘು ಕೇಳಿದ. ಕಥೆಯ ಸುದ್ದಿ ಕೇಳಿ ಮಕ್ಕಳೆಲ್ಲಾ ಅಜ್ಜಿಯ ಸೆರಗು ಎಳೆದು, ಅಜ್ಜಿ ಕಥೆ ಹೇಳು ಎಂದರು. ಮೂಷಿಕ ಒಂದು ಆಸೆಬುರುಕ, ಸುಂದರವಾದ ಇಲಿ. ಸಂತೋಷವಾಗಿ ಹಾಡು ಹೇಳುತ್ತ ಹೊರಟಿತ್ತು. ಅಷ್ಟರಲ್ಲಿ ಜೋರಾಗಿ ಸುಂಟರಗಾಳಿ ಬೀಸುತ್ತ ಬಂದಿತು. ಆ ಗಾಳಿಯನ್ನು ತಪ್ಪಿಸಲು ಮೂಷಿಕ ಗಿಡದ ಕೆಳಗೆ ನಿಂತಿತು. ಮೇಲಿನಿಂದ ಚಿಕ್ಕ ಒಣಗಿದ ಟೊಂಗೆಯೊಂದು ಕೆಳಗೆ ಬಿದ್ದಿತು. ಮೂಷಿಕ ತನ್ನ ಸೊಂಡಿಲಿನಿಂದ ಆ ಒಣಟೊಂಗೆಯನ್ನು ಎಳೆಯುತ್ತ ಮುಂದೆ
ನಡೆಯಿತು. ಆ ಊರ ಹೊರಗೆ ಕುಂಬಾರನೊಬ್ಬ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಬಿರುಗಾಳಿಗೆ ಅವನ ಎಲ್ಲ ಒಣ ಕಟ್ಟಿಗೆ ಹಾರಿ ಹೋಗಿದ್ದವು.

ಮೂಷಿಕನನ್ನು ನೋಡಿ. ಇಲಿರಾಯ ನನಗೆ ದಯವಿಟ್ಟು ನಿನ್ನ ಸೊಂಡಿಲಿನಲ್ಲಿ ಇರುವ ಸೌದೆಯ ತುಣುಕು ಕೊಡುತ್ತಿಯ? ಎಂದ. ಮೂಷಿಕ ಕೆಲ ಕ್ಷಣ ವಿಚಾರಮಾಡಿ ‘‘ಹಾ! ಕೊಡುತ್ತೇನೆ. ಆದರೆ ನೀನು ನನಗೇನು ಕೊಡುತ್ತಿ?’’ ಎಂದಿತು. ‘‘ನಿನಗೇನು ಬೇಕು ಅದು ಕೊಡುತ್ತೇನೆ. ಒಣಟೊಂಗೆಯಿಂದ ಒಲೆ ಹೊತ್ತಿಸಿ, ಬೆಂಕಿಯಿಂದ ಗಡಿಗೆಗಳನ್ನು ಸುಡುತ್ತೇನೆ ಎಂದ.

ಮೂಷಿಕನ ಲಕ್ಷ್ಯ ಬೇರೆ ಕಡೆಗೆ ಹೋಯಿತು. ಅವರ ಮನೆಯಲ್ಲಿ ಒಂದು ದೊಡ್ಡ ಕುಂಬಳಕಾಯಿ ಇಟ್ಟಿದ್ದರು. ಸರಿ ಈ ಟೊಂಗೆ ತೆಗೆದುಕೊ ಆದರೆ ನನಗೆ ಆ ಕುಂಬಳಕಾಯಿ ಕೊಡು’’. ‘‘ಇಷ್ಟು ದೊಡ್ಡ ಕುಂಬಳಕಾಯಿ ನಿನು ಹೊರುತ್ತೀಯಾ?’’ ಎಂದು ಅಚ್ಚರಿ ಯಿಂದ ಕೇಳಿದ ಕುಂಬಾರ. ಮನೆಯಲ್ಲಿ ಅದನ್ನು ಸಾಂಬಾರಿಗೆ ಎಂದು ಇಟ್ಟುಕೊಂಡಿದ್ದ.

‘‘ಅದರ ಬಗ್ಗೆ ನಿನಗೇಕೆ ಯೋಚನೆ?’’ ‘‘ನಿನಗೆ ಅದರ ಬದಲು ಅವಲಕ್ಕಿ ಕೊಡುತ್ತೇನೆ’’ ಎಂದು ಕುಂಬಾರ ಮನವನ್ನು ಒಲಿಸಲು ನೋಡಿದ. ಮೂಷಿಕ ಒಪ್ಪಲೇ ಇಲ್ಲ. ನಿರ್ವಾಹವಿಲ್ಲದೇ ಕುಂಬಾರ ದೊಡ್ಡ ಕುಂಬಾಳಕಾಯಿ ಕೊಟ್ಟ. ಮೂಷಿಕ ಅದರ ಮೆಲಿನ ದೇಟನ್ನು ಎಳೆದುಕೊಂಡು ಉಲ್ಲಾಸದಿಂದ ಮುಂದೆ ಹೊರಟಿತು. ದಾರಿಯಲ್ಲಿ ಗೊಲ್ಲನೊಬ್ಬನು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ.

ಮೂಷಿಕನ ಜೊತೆ ಇದ್ದ ಕುಂಬಳಕಾಯಿಯನ್ನು ನೋಡಿ ‘‘ ಅಯ್ಯಾ ಇಲಿರಾಜ, ನನಗೆ ಕುಂಬಳಕಾಯಿಯನ್ನು ಕೊಡ್ತೀಯಾ?’’
‘‘ಯಾಕೆ?’’ ‘‘ ಸುಂಟರಗಾಳಿಯಲ್ಲಿ ನಮ್ಮ ಮನೆಯ ಅಡಿಗೆಯ ತರಕಾರಿಗಳು ಹಾರಿಹೋದವು. ಹೊಟ್ಟೆ ಹಸಿದಿದೆ’’ ‘‘ ನನಗೆ ಅದರ ಬದಲು ಏನು ಕೊಡ್ತಿಯಾ? ‘‘ ಏನು ಬೇಕಾದರೂ ಕೊಡ್ತೀನಿ. ಮೊದಲು ಈ ಕುಂಬಳಕಾಯಿ ಕೊಡು’’. ಮೂಷಿಕನ ಗಮನಕ್ಕೆ ಎದುರಿಗಿದ್ದ ಹಸು ಕಾಣಿಸಿತು.

ನನಗೆ ಹಾಲು ಕರೆಯುವ ಹಸುವನ್ನು ಕೊಡು ‘‘ ಕುಂಬಳಕಾಯಿಗೆ ಹಸುವೇ?’’ ಸಾಧ್ಯವಿಲ್ಲ ಎಂದ. ಗೌಳಿಗ ‘‘ ಸರಿ ಹಾಗಾದರೆ ನಾನು ಹೊರಟೆ’’ ಎಂದ ಮೂಷಿಕ. ಒಳಗಿನಿಂದ ಗೌಡತಿ ಕೂಗಿದಳು ‘‘ ಮಕ್ಕಳು ರಚ್ಚೆ ಹಿಡಿದು ಅಳುತ್ತಿದ್ದಾರೆ. ಹಸುವನ್ನು ಕೊಟ್ಟು ಬಿಡಿ. ಅದರ ಹಾಲು ಕೊಟ್ಟರು ಮಕ್ಕಳು ಕೇಳುತ್ತಿಲ್ಲ. ಮಕ್ಕಳಿಗಿಂತ ಹಸು ದೊಡ್ಡದಲ್ಲ. ’’ ನಿರ್ವಾಹವಿಲ್ಲದೇ ಗೊಲ್ಲ ಹಸುವನ್ನು ಅಸಮಾಧಾನದಿಂದ ಕೊಟ್ಟ. ಬದಲು ಕೊಂಬಳಕಾಯಿ ಪಡೆ. ಈಗ ಮೂಷಿಕಕ್ಕೆ ಆನಂದವೋ ಆನಂದ.

ಹಸುವಿನ ಎರಡು ಕೊಂಬೆಯ ಮಧ್ಯೆ ಕುಳಿತು ಸವಾರಿ ಮುಂದೆ ನಡೆಯಿತು. ದಾರಿಯಲ್ಲಿ ಮದುವೆಯ ದಿಬ್ಬಣವನ್ನು ನೋಡಿದ.
ಎಲ್ಲರ ಮುಖ ಕಳೆಗುಂದಿದ್ದವು. ಹಸುವನ್ನು ನೋಡಿ ಆ ದಿಬ್ಬಣದ ಹಿರಿಯ ಮುಂದೆ ಬಂದ. ‘‘ನಮಗೆ ಹಸುವಿನ ಹಾಲು ಬೇಕಾ ಗಿದೆ. ಎಲ್ಲವು ಸಿದ್ಧವಿದ್ದರೂ ಹಾಲು ಮರೆತು ಬಂದಿದ್ದೇವೆ. ಪಾಯಸಕ್ಕೆ ಹಾಲು ಬೇಕು’’ ‘‘ನನಗೇನು ಕೊಡುತ್ತೀರಾ?’’ ‘‘ನಿನಗೇನು ಬೇಕು ಅದು ಕೊಡ್ತಿವಿ’’ ಎಂದ ಆ ಹಿರಿಯ.

ಮದುವೆಯ ಮನೆಯಲ್ಲಿ ಕರಿದ ತಿಂಡಿಯ ಬುಟ್ಟಿಗಳು, ಮಿಠಾಯಿ ಡಬ್ಬಿಗಳು ಇದ್ದವು. ಆ ಮೂಷಿಕಕ್ಕೆ ಅದರ ಕಡೆ ಗಮನ ಹೋಗಲೇ ಇಲ್ಲ. ಬದಲು ಸುಂದರವಾದ ಸೀರೆಯನ್ನು ಉಟ್ಟ ಚಿನ್ನದ ಆಭರಣ ಧರಿಸಿದ ಮುದುವೆಯ ಹುಡುಗಿ ಕಣ್ಣಿಗೆ ಬಿದ್ದಳು.
‘‘ಸರಿ ಹಸು ಕೊಡುತ್ತೇನೆ. ಆದರೆ ನೀವು ನನಗೆ ಮದುವೆಯ ಹುಡುಗಿಯನ್ನು ಕೊಡುತ್ತೀರಾ?’’ ವರ ಕೋಪದಿಂದ ಮೂಷಿಕನನ್ನು ಕೊಲ್ಲಲು ಕೋಲು ಎತ್ತಿದ. ಆದರೆ ಮದುವೆಯು ಹುಡುಗಿ ಮುಂದೆ ಬಂದಳು. ಹುಡುಗನನ್ನು ಕರೆದು ‘‘ ನೀವು ಹೂಂ ಅನ್ನಿರಿ.

ನಾನು ಇನ್ನೆರೆಡು ಗಂಟೆಯಲ್ಲಿಯೇ ಮನೆಗೆ ಬರುತ್ತೇನೆ. ಗಾಬರಿಯಾಗಬೇಡಿ’’ ಎಂದು ಧೈರ್ಯ ತುಂಬಿದಳು. ಒಲ್ಲದ ಮನಸ್ಸಿನಿಂದ ಮನೆಯವರು ಒಪ್ಪಿದರು. ವಧು ಮೂಷಿಕನ ಹಿಂದೆ ಹೊರಟಳು. ಹಸು ಮದುವೆಯ ಮನೆ ಸೇರಿತು. ಅರ್ಧಗಂಟೆ ನಡೆದು ವಧು ದಾರಿಯಲ್ಲಿ ಕುಳಿತಳು. ಮೂಷಿಕರಾಯ ನೀನಂತೂ ಬೇಗನೇ ಓಡುತ್ತಿ. ನಾನು ಮಾನವಳು, ಓಡಲಾರೆ. ಕಾಲು ನೋಯುತ್ತಿದೆ.’’
‘‘ಸರಿ ಹಾಗಾದ್ರೆೆ ಇಲ್ಲಿಯೇ ನನ್ನ ಸ್ನೇಹಿತನ ಮನೆ ಇದೆ. ಅಲ್ಲಿ ಬಂದು ದಣಿವು ಆರಿಸಿಕೊ’’ ‘‘ ಇಲಿರಾಯ ಇದೊಂದು ಬಿಲ, ನೀನೋ ಇಲಿ ಸರಾಗವಾಗಿ ಹೋಗುತ್ತೀಯಾ., ನಾನು ಮಾನವಳು.

ಒಳಗೆ ಹೇಗೆ ಹೋಗಲಿ? ಆಗ ಮೂಷಿಕಕ್ಕೆ ಮೊದಲ ಬಾರಿಗೆ ತಾನು ಇಲಿ ಎನ್ನುವ ಅರಿವು ಬಂದಿತು. ‘‘ಹಾಗಾದರೆ ಏನು ಮಾಡು ತ್ತಿ?’’ ‘‘ ನನ್ನನ್ನು ಕರೆದುಕೊಂಡು ಬಂದವನು ನೀನು. ನೀನೆ ಹೇಳು’’ ಎಂದಳು ವಧು. ‘‘ ಇಲ್ಲಿಯೆ ಗಿಡದ ಕೆಳಗೆ ಕುಳಿತುಕೋ’’ ಎಂದಿತು ಮೂಷಿಕ.

‘‘ನನಗೆ ಒಬ್ಬಳೇ ಇರಲು ಹೆದರಿಕೆ ಆಗ್ತದೆ. ನನ್ನ ಮೈಮೇಲೆ ಚಿನ್ನದ ಆಭರಣ ಇದೆ. ಯಾರಾದರೂ ಕಳ್ಳರು ಬಂದರೆ ಏನು ಮಾಡಲಿ? ’’ ಮೂಷಿಕ ತಿಳಿಯದೇ ನಿಂತಿತು. ವಧು ಮಾತು ಮುಂದುವರಿಸಿ ‘‘ ನನಗೆ ರಾಮು ಮತ್ತು ಶಾಮು ಅನ್ನೋ  ಸಂಬಂಧಿಕ ರಿದ್ದಾರೆ. ಅವರನ್ನು ಕರೆದ್ರೆ ನನಗೆ ಅವರು ಕಾಪಾಡ್ತಾರೆ. ಕರೀಲಾ?’’ ಎಂದಳು.

‘‘ ಕರಿ, ಬೇಗನೇ ಕರಿ’’ ಎಂದ ಮೂಷಿಕ. ‘‘ರಾಮು ಶಾಮು ಬನ್ನಿರಿ’’ ಎಂದಳು ವಧು. ಎತ್ತರವಾದ, ಬಲಶಾಲಿಯಾದ, ಎರಡು ನಾಯಿಗಳು ಓಡಿಬಂದವು. ಮೊದಲು ಮೂಷಿಕನನ್ನು ನೋಡಿ ಹಿಡಿಯಲು ಬೆನ್ನು ಹತ್ತಿದರು. ಮೂಷಿಕ ಪ್ರಾಣ ಉಳಿಸಲು ವೇಗ ವಾಗಿ ಓಡಿ ಹೋಯಿತು. ವಧು ಸಾಗುತ್ತ ಬಂದ ದಾರಿಯಲ್ಲಿ ನಾಯಿಗಳ ಜೊತೆ ಹೊರಟುಹೋದಳು. ಯಾರಿಗೂ ಸಹಾಯ ಮಾಡದ ಮೂಷಿಕ ವಿಲಿವಿಲಿ ಒದ್ದಾಡಿತು.