Friday, 25th October 2024

ಉತ್ತರ ಪ್ರದೇಶದಲ್ಲಿ ಶಾಲಾ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ

Amroha

ಲಖನೌ: ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಖಾಸಗಿ ಶಾಲೆಯ ವಾಹನದ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ಶುಕ್ರವಾರ (ಅ. 25) ಉತ್ತರ ಪ್ರದೇಶ (Uttar Pradesh)ದ ಅಮ್ರೋಹಾ (Amroha)ದಲ್ಲಿ ನಡೆದಿದೆ. 28 ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್‌ ಮೇಲೆ ಈ ದಾಳಿ ನಡೆದಿದ್ದು, ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ ಎಂದು ಪೊಲೀಸರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಸುಕುಧಾರಿ ವ್ಯಕ್ತಿಗಳು ಎಸ್ಆರ್‌ಎಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಮೂವರು ಶಂಕಿತರ ವಿರುದ್ಧ ಎಫ್‌ಐಆರ್‌

ಘಟನೆ ಸಂಬಂಧ ಮೂವರು ಶಂಕಿತರ ವಿರುದ್ಧ ಗಜ್ರೌಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅವರಲ್ಲಿ ಒಬ್ಬನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಲ್ ಆಫೀಸರ್ ಶ್ವೇತಾಭ್ ಭಾಸ್ಕರ್, “ವ್ಯಾನ್ ಚಾಲಕನನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಚಾಲಕ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆʼʼ ಎಂದು ವಿವರಿಸಿದ್ದಾರೆ.

ʼʼಇಂದು ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಬಸ್ ಮೇಲೆ ಇಬ್ಬರು-ಮೂವರು ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಅವರು ಮೊದಲು ಚಾಲಕನ ಕಡೆಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದರಿಂದ ಚಾಲಕನನ್ನು ಗುರಿಯಾಗಿಸಿಕೊಂಡಿದ್ದರುʼʼ ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುನ್ವರ್ ಅನುಪಮ್ ಸಿಂಗ್ ಮಾಹಿತಿ ನೀಡಿದ್ದಾರೆ. 4 ದಿನಗಳ ಹಿಂದೆ ನಡೆದ ವಿವಾದದಿಂದಾಗಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ತನ್ನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಚಾಲಕ ಆರೋಪಿಸಿದ್ದಾನೆ. ಸ್ಕೂಟಿ ಬಸ್‌ಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ವ್ಯಾನ್ ಚಾಲಕ ಮತ್ತು ಸ್ಕೂಟಿ ಮಾಲೀಕರ ನಡುವೆ ಜಗಳ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿರುವ ಸಾಧ್ಯತೆ ಇದೆ.

ಚಾಲಕನ ಹೇಳಿಕೆಯನ್ನು ದಾಖಲಿಸಲಾಗಿದೆ ಮತ್ತು ಪೊಲೀಸರು ವಿವಾದದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಸುಕುಧಾರಿ ವ್ಯಕ್ತಿಗಳು ಗುಂಡು ಹಾರಿಸಿದ್ದರಿಂದ ಭಯಭೀತರಾದ ಶಾಲಾ ಮಕ್ಕಳು ತಮ್ಮ ಆಸನಗಳ ಕೆಳಗೆ ಅಡಗಿಕೊಂಡಿದ್ದರು. ದಾಳಿ ನಡೆದ ತಕ್ಷಣ ಚಾಲಕ ವ್ಯಾನ್‌ ಅನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ಇದರಿಂದ ಬಹು ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಮೂಲಗಳು ತಿಳಿಸಿವೆ. ಬಳಿಕ ಶಾಲಾ ಅಧಿಕಾರಿಗಳು ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Terror attack : ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ : ಯುಪಿ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ