Friday, 25th October 2024

Assault Case: ಸಂಚಾರ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್‌ಗೆ ಒದ್ದು ಮಹಿಳೆ ರಂಪಾಟ! ವಿಡಿಯೊ ವೈರಲ್‌

Assault Case

ಬೆಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ‌ ಘಟನೆ (Assault Case) ಇಂದಿರಾನಗರದಲ್ಲಿ ನಡೆದಿದೆ. ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡ ಮಹಿಳೆ, ಪೊಲೀಸ್‌ಗೆ ಒದ್ದು, ಕಾಲರ್‌ ಪಟ್ಟಿ ಹಿಡಿದು ಹಿಂದಿಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾಳೆ. ಹಿಡಿದು ರಸ್ತೆಯಲ್ಲಿ ರಂಪಾಟ ಮಾಡಿದ್ದಾಳೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೋನಮ್‌ ಎಂಬ ಮಹಿಳೆಯನ್ನು ಸಂಚಾರ ಪೊಲೀಸ್ ಪೇದೆ ನಿಲ್ಲಿಸಿ ಪ್ರಶ್ನಿದಾಗ ಆಕೆ ಜಗಳಕ್ಕೆ ಇಳಿದಿದ್ದಾಳೆ. ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಾಲಿನಿಂದ ಒದ್ದು, ಕಾಲರ್ ಪಟ್ಟಿ ಹಿಡಿದು ನಿನ್ನ ಕೆಲಸ ಹೋಗುತ್ತೆ ಎಂದು ಎಚ್ಚರಿಕೆ ನೀಡಿದ್ದಾಳೆ.

ಮಹಿಳೆ ರಂಪಾಟದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಪೊಲೀಸ್ ಮೇಲೆ ಮಹಿಳೆ ಹಲ್ಲೆ ಮಾಡುವ ವೇಳೆ ಇಬ್ಬರು ಪೊಲೀಸರು ಹಾಗೂ ಒಂದು ಹೊಯ್ಸಳ ವಾಹನ ಕೂಡ ಇದೆ. ಆದರೂ ಯಾರೂ ಕೂಡ ಮಹಿಳೆಯನ್ನು ತಡೆಯುವ ಕೆಲಸ ಮಾಡಿಲ್ಲ.

ಈ ಸುದ್ದಿಯನ್ನೂ ಓದಿ | Murder Case: ರೀಲ್ಸ್‌ನಲ್ಲಿ ಕರಿಮಣಿ ಮಾಲೀಕ ನೀನಲ್ಲ ಅಂದಳು, ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದಳು!

ಕರ್ತವ್ಯನಿರತ ಪೊಲೀಸ್‌ ಮೇಲೆ ಹಲ್ಲೆ ಮಾಡಿದ್ದರಿಂದ ಉತ್ತರ ಭಾರತದ ನಿವಾಸಿ ಸೋನಮ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೊ ವೈರಲ್‌ ಆಗಿದ್ದರಿಂದ ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ಉದ್ವೇಗದಲ್ಲಿದ್ದ ಮಹಿಳೆಯ ಮುಂದೆ ಪೊಲೀಸರ ಶಾಂತ ವರ್ತನೆ ಆಶ್ಚರ್ಯ ತರಿಸಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಕನ್ನಡಿಗನೊಬ್ಬ ಈ ರೀತಿ ಕಿರುಚಿದ್ದರೆ ಪೊಲೀಸರ ವರ್ತನೆಯೇ ಬೇರೆ ರೀತಿಯಲ್ಲಿರುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.