ನೋಯ್ಡಾ: ನಾಯಿಯ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಸಹೋದರಿಯರಿಬ್ಬರು ವೃದ್ಧ ದಂಪತಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನೋಯ್ಡಾದಲ್ಲಿ (Noida) ಗುರುವಾರ ರಾತ್ರಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಸಹೋದರಿಯರು ವೃದ್ಧ ದಂಪತಿಯೊಂದಿಗೆ ಜಗಳವಾಡುವುದನ್ನು ಕಾಣಬಹುದು. ಈ ನಡುವೆ ಮಧ್ಯಪ್ರವೇಶಿಸಿರುವ ಇತರ ಸ್ಥಳೀಯರು ಹಿರಿಯ ನಾಗರಿಕರ ಮೇಲೆ ಹಲ್ಲೆ ಮಾಡದಂತೆ ಅವರನ್ನು ತಡೆದಿದ್ದಾರೆ.
ನೋಯ್ಡಾದ ಸೆಕ್ಟರ್ 78 ರಲ್ಲಿ ಹೈಡ್ ಪಾರ್ಕ್ ಸೊಸೈಟಿಯಲ್ಲಿ ಗುರುವಾರ ರಾತ್ರಿ ತಮ್ಮ ನಾಯಿಯ ವಿಚಾರದಲ್ಲಿ ಇಬ್ಬರು ಸಹೋದರಿಯರು ವೃದ್ಧ ದಂಪತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರ ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ನೋಡುಗರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರೂ ಒಬ್ಬ ಮಹಿಳೆ ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದಾಳೆ.
ಈ ಕುರಿತು ವೃದ್ಧ ದಂಪತಿಯ ದೂರಿನ ಮೇರೆಗೆ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಆಟದ ಮೈದಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಸಹೋದರಿ ತನ್ನ ನಾಯಿಯನ್ನು ಹಗ್ಗದಿಂದ ಬಿಚ್ಚಿದ್ದು, ನಾಯಿ ಆಟದ ಮೈದಾನದಲ್ಲಿ ಮುಕ್ತವಾಗಿ ತಿರುಗುತ್ತಿತ್ತು. ಇದನ್ನು ನೋಡಿ ವೃದ್ಧ ದಂಪತಿ ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಗಲಾಟೆ ಉದ್ಭವವಾಗಿದೆ ಎನ್ನಲಾಗಿದೆ. ಸಹೋದರಿಯರನ್ನು ಹೈಡ್ ಪಾರ್ಕ್ ಕಾಂಪ್ಲೆಕ್ಸ್‌ನ ಎಕ್ಸ್ ಟವರ್ ನಿವಾಸಿಗಳೆಂದು ಗುರುತಿಸಲಾಗಿದೆ.
Argument between elderly couple and two girls over allegedly walking the dog in society w/o leash
— amittripathi2k2 (@amittripathi2k2) October 25, 2024
Girls slapped elderly couple who objected to it.
Case of Hyde Park Society, Sector-78, Noida
Join | https://t.co/Tg7RDXlYaY pic.twitter.com/7GsbMjiyQl
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸೆಕ್ಟರ್ 113 ಪೊಲೀಸ್ ತಂಡವು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳು ಮತ್ತು ನಿವಾಸಿಗಳು ರೆಕಾರ್ಡ್ ಮಾಡಿದ ವಿಡಿಯೋವನ್ನು ನೋಡಿ ತನಿಖೆ ನಡೆಸಲಾಗಿದೆ. ಸಹೋದರಿಯರು ದಂಪತಿಯ ಬಳಿ ಕ್ಷಮೆ ಕೇಳಿದ್ದರಿಂದ ಶುಕ್ರವಾರ ಬೆಳಗ್ಗೆ ಪ್ರಕರಣ ಇತ್ಯರ್ಥವಾಗಿದೆ ಎಂದು ಹೈಡ್ ಪಾರ್ಕ್ ಎಒಎ ಕಾರ್ಯದರ್ಶಿ ಅಮಿತ್ ಗುಪ್ತಾ ಹೇಳಿದರು.
ನಾಯಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಮಕ್ಕಳಿಗೆ, ವೃದ್ಧರಿಗೆ ಅಪಾಯವನ್ನುಂಟು ಮಾಡುತ್ತದೆ. ಸಹೋದರಿಯರು ಬಾಡಿಗೆ ಘಟಕದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ತಕ್ಷಣ ಫ್ಲಾಟ್ ಖಾಲಿ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಹೋದರಿಯರ ಈ ವರ್ತನೆ ಸ್ವೀಕಾರಾರ್ಹವಲ್ಲ. ಹಿರಿಯ ನಾಗರಿಕ ಕುಟುಂಬಕ್ಕೆ ಇವರು ತೊಂದರೆಯನ್ನುಂಟು ಮಾಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ಕಟ್ಟುನಿಟ್ಟಾದ ನಿಯಮ ರೂಪಿಸಲಾಗುವುದು. ಈಗಾಗಲೇ ಫ್ಲ್ಯಾಟ್ ಖಾಲಿ ಮಾಡಲು ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ.