Friday, 25th October 2024

Bomb Threat: ಮುಂದುವರಿದ ಬಾಂಬ್‌ ಬೆದರಿಕೆ; ಇಂದು 25 ವಿಮಾನ ಟಾರ್ಗೆಟ್‌

Bomb Threat

ಹೊಸದಿಲ್ಲಿ: ದೇಶದಲ್ಲಿ ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್‌ ಬೆದರಿಕೆ (Bomb Threat) ಹಾಕುವ ಪ್ರವೃತ್ತಿ ಮುಂದುವರಿದಿದೆ. ಶುಕ್ರವಾರ (ಅ. 25) 25ಕ್ಕಿಂತ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನ ತಲಾ 7 ಮತ್ತು ಏರ್‌ ಇಂಡಿಯಾದ 6 ವಿಮಾನಗಳನ್ನು ಗುರಿಯಾಗಿಸಿಕೊಂಡು ಈ ಬೆದರಿಕೆ ಬಂದಿದೆ.

ಇಂಡಿಗೊ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿ, ʼʼ6ಇ 87 (ಕೋಝಿಕೋಡ್ – ದಮ್ಮಾಮ್), 6ಇ 2099 (ಉದಯಪುರ – ದಿಲ್ಲಿ), 6ಇ 11 (ದಿಲ್ಲಿ – ಇಸ್ತಾಂಬುಲ್), 6ಇ 58 (ಜೆಡ್ಡಾ – ಮುಂಬೈ), 6ಇ 17 (ಮುಂಬೈ – ಇಸ್ತಾಂಬುಲ್), 6ಇ 108 (ಹೈದರಾಬಾದ್ – ಚಂಡೀಗಢ) ಮತ್ತು 6ಇ 133 (ಪುಣೆ – ಜೋಧಪುರ) ವಿಮಾನಗಳು ಬಾಂಬ್‌ ಬೆದರಿಕೆ ಎದುರಿಸಿವೆʼʼ ಎಂದು ತಿಳಿಸಿದ್ದಾರೆ.

ʼʼಉದಯಪುರದಿಂದ ದಿಲ್ಲಿಗೆ ತೆರಳುತ್ತಿದ್ದ 6ಇ 2099 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಭದ್ರತಾ ಏಜೆನ್ಸಿಯ ಮಾರ್ಗಸೂಚಿಗಳನ್ನು ಅನುಸರಿಸಿ, ಟೇಕ್ ಆಫ್ ಆಗುವ ಮೊದಲು ವಿಮಾನವನ್ನು ಪರಿಶೀಲಿಸಲಾಯಿತು ಮತ್ತು ಎಲ್ಲ ಪ್ರೋಟೋಕಾಲ್‌ ಅನ್ನು ಅನುಸರಿಸಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ” ಎಂದು ವಿವರಿಸಿದ್ದಾರೆ.

12 ದಿನಗಳಲ್ಲಿ 275 ವಿಮಾನಗಳಿಗೆ ಬೆದರಿಕೆ

ಕಳೆದ 12 ದಿನಗಳಲ್ಲಿ ಸುಮಾರು 275ಕ್ಕಿಂತ ಹೆಚ್ಚು ಭಾರತೀಯ ಮೂಲದ ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿವೆ. ಈ ಪೈಕಿ ಬಹುತೇಕ ಬೆದರಿಕೆಗಳು ಸೋಷಿಯಲ್‌ ಮೀಡಿಯಾ ಮೂಲಕವೇ ರವಾನೆಯಾಗಿದೆ. ಗುರುವಾರ ಕೇಂದ್ರ ಸರ್ಕಾರ ಸೋಷಿಯಲ್‌ ಮೀಡಿಯಾಗಳಾದ ಮೆಟಾ ಮತ್ತು ಎಕ್ಸ್‌ಗೆ ಪತ್ರ ಬರೆದು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕುವ ಖಾತೆಗಳ ಬಗ್ಗೆ ವಿವರ ಹಂಚಿಕೊಳ್ಳುವಂತೆ ಕೇಳಿದೆ.

“ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ತ್ವರಿತವಾಗಿ ನೀಡುವಂತೆ ಐಟಿ ಸಚಿವಾಲಯವು ಸೋಷಿಯಲ್‌ ಮೀಡಿಯಾ ಕಂಪೆನಿಗಳಿಗೆ ಸೂಚಿಸಿದೆ. ಹುಸಿ ಸಂದೇಶವನ್ನು ಪೋಸ್ಟ್ ಮಾಡುವ ವ್ಯಕ್ತಿಯ ವಿವರಗಳನ್ನು ಒಳಗೊಂಡ ಸಂಪೂರ್ಣ ವಿವರ ನೀಡುವಂತೆ ಕೋರಿದೆʼʼ ಎಂದು ಮೂಲಗಳು ತಿಳಿಸಿವೆ.

ಗುರುವಾರ (ಅ. 24) ಒಂದೇ ದಿನ ದೇಶದ 70ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿತ್ತು. ಏರ್‌ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೋ ವಿಮಾನ ಯಾನ ಸಂಸ್ಥೆಗಳಿಗೆ ತಲಾ 20 ಬೆದರಿಕೆ ಬಂದರೆ, ಆಕಾಸ ಏರ್‌ 14ಕ್ಕಿಂತ ಹೆಚ್ಚು ಬೆದರಿಕೆಯನ್ನು ಎದುರಿಸಿತ್ತು. ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದರೂ ಈ ಪ್ರವೃತ್ತಿಗೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್‌ 14ರಿಂದ ಈವರೆಗೆ ನಿರಂತರ ಬಾಂಬ್‌ ಬೆದರಿಕೆಯ ಹುಸಿ ಕರೆಗಳು ಬಂದಿವೆ. ಇದರಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಸುದ್ದಿಯನ್ನೂ ಓದಿ: Bomb Threats: ಒಂದೇ ದಿನ 70ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ