Friday, 22nd November 2024

Shiggaon By Election: ಶಿಗ್ಗಾಂವಿಯಲ್ಲಿ ಬಿಜೆಪಿ ನಮಗೆ ಎದುರಾಳಿಯೇ ಅಲ್ಲ ಎಂದ ಸಿದ್ದರಾಮಯ್ಯ

Shiggaon By Election

ಬೆಂಗಳೂರು: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದು, ಬಿಜೆಪಿ ನಮಗೆ ಸೂಕ್ತ ಎದುರಾಳಿಯಲ್ಲ. ಶಿಗ್ಗಾಂವಿಯ ಉಪಚುನಾವಣೆಯಲ್ಲಿ (Shiggaon By Election) ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಉಪಚುನಾವಣೆಗೆ ಸನ್ನದ್ಧವಾಗಿದ್ದು, ಮೂರು ಕ್ಷೇತ್ರಗಳಿಗೆ ಸಮರ್ಥರಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ; ಸಿದ್ದರಾಮಯ್ಯ ವ್ಯಾಖ್ಯಾನ

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಭಾವನಾತ್ಮಕ ಚುನಾವಣಾ ಭಾಷಣ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರ ಭಾವನಾತ್ಮಕ ಭಾಷಣ, ಕಣ್ಣೀರುಗಳಿಗೆ ಜನರು ಮಾರುಹೋಗುವುದಿಲ್ಲ ಎಂದರು. ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ, ಅವರಿಗೇ ಈ ಬಾರಿ ಅವಕಾಶ ನೀಡಲಾಗಿದೆ. ಇದೇ ಪ್ರದೇಶದ ಸೈಯದ್ ಅಜೀಂಪೀರ್ ಖಾದ್ರಿಯವರು ಸಮರ್ಥ ನಾಯಕರಿದ್ದು, ಅವರು ಸಲ್ಲಿಸಿರುವ ನಾಮಪತ್ರವನ್ನು ವಾಪಸ್ಸು ಪಡೆಯುವಂತೆ ಮನವೊಲಿಸಲಾಗುವುದು ಎಂದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅ.27 ರಿಂದ 30ರವರೆಗೆ ವಿದ್ಯುತ್‌ ವ್ಯತ್ಯಯ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪ್ರತಿಸ್ಪರ್ಧಿ, ವ್ಯಕ್ತಿ ಅಲ್ಲ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಠಾನ್ ಅವರು ಎದುರಾಳಿಯಾಗಿಲ್ಲದಿದ್ದಲ್ಲಿ ಕಳೆದ ಚುನಾವಣೆಯಲ್ಲಿ 60 ಸಾವಿರ ಮತಗಳನ್ನು ಪಡೆಯುತ್ತಿದ್ದರೇ? ಕಳೆದ ಬಾರಿ ಶಿಗ್ಗಾಂವಿಯಲ್ಲಿ ಬಿಜೆಪಿ ಜಯ ಸಾಧಿಸಿದ್ದರೂ, ಕಾಂಗ್ರೆಸ್ ಒಳ್ಳೆಯ ಸ್ಪರ್ಧೆಯನ್ನು ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 8000 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಸಾಧಿಸಿತ್ತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.