Saturday, 26th October 2024

Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ

israel

ಬೈರುತ್‌: ಅಕ್ಟೋಬರ್ 1ರಂದು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಸೇನೆ(Israel Army) ಇರಾನ್‌ ಮೇಲೆ ಮತ್ತೆ ವೈಮಾನಿಕ ದಾಳಿ(Israel Airstrike) ನಡೆಸಿದೆ. ಈ ಭೀಕರ ದಾಳಿಯಲ್ಲಿ ಸಾವು-ನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ. ಇನ್ನು ಈ ಬಗ್ಗೆ ಇಸ್ರೇಲ್‌ ಸೇನೆ ವಕ್ತಾರ ಡೇನಿಯಲ್ ಹಗರಿ ಪ್ರತಿಕ್ರಿಯಿಸಿದ್ದು, ಇಸ್ರೇಲ್ ವಿರುದ್ಧ ಇರಾನ್‌ ನಡೆಸುತ್ತಿರುವ ನಿರಂತರ ದಾಳಿಗಳಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಇರಾನ್‌ನಲ್ಲಿನ ಆಡಳಿತ ಮತ್ತು ಪ್ರದೇಶದಲ್ಲಿನ ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇಸ್ರೇಲ್‌ನ ಮೇಲೆ ಪಟ್ಟುಬಿಡದೆ ಇರಾನ್‌ ದಾಳಿ ಮಾಡುತ್ತಿವೆ. ಪ್ರಪಂಚದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ಇಸ್ರೇಲ್ ಪ್ರತಿಕ್ರಿಯಿಸುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ. ನಾವು ಇಸ್ರೇಲ್ ಮತ್ತು ಅದರ ಜನರನ್ನು ರಕ್ಷಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.

ರಾಜಧಾನಿ ಟೆಹ್ರಾನ್ ಸುತ್ತಲೂ ಹಲವಾರು ಪ್ರಬಲ ಸ್ಫೋಟಗಳು ಸಂಭವಿಸಿವೆ. ಸಮೀಪದ ಕರಾಜ್ ನಗರದಲ್ಲಿಯೂ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇರಾನ್ ನ ಅರೆ ಅಧಿಕೃತ ಮಾಧ್ಯಮ ತಿಳಿಸಿದೆ. ತಸ್ನಿಮ್ ಸುದ್ದಿ ಸಂಸ್ಥೆಯು ಇಲ್ಲಿಯವರೆಗೆ ಟೆಹ್ರಾನ್‌ನ ಆಕಾಶದಲ್ಲಿ ರಾಕೆಟ್ ಅಥವಾ ವಿಮಾನಗಳ ಸದ್ದು ಕೇಳಿದ ಬಗ್ಗೆ ಏನೂ ವರದಿಯಾಗಿಲ್ಲ ಎಂದು ಹೇಳಿದೆ.

ಇರಾನ್‌ ವಿಮಾನಗಳು ರದ್ದು

ಇನ್ನು ಇರಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿರುವುದ ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರರು ಮುಂದಿನ ಸೂಚನೆ ಬರುವವರೆಗೂ ಇರಾನ್‌ನ ಎಲ್ಲಾ ಮಾರ್ಗಗಳಲ್ಲಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶನಿವಾರ ಮುಂಜಾನೆ ಇರಾನ್‌ನ ರಾಜಧಾನಿ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ವೈಮಾನಿಕ ದಾಳಿ ನಡೆಸಿದ ನಂತರ ಇರಾನ್‌ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ರದ್ದುಗೊಳಿಸಿತು. ಇಸ್ರೇಲ್ ಆಕ್ರಮಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇರಾನ್ ಭರವಸೆ ನೀಡಿದೆ.

ಕಳೆದ ಭಾನುವಾರಷ್ಟೇ ಉತ್ತರ ಗಾಜಾದ ಬೀಟ್‌ ಲಾಹಿಯಾ ನಗರದ ಮೇಲೆ ಇಸ್ರೇಲ್‌ ಪಡೆಗಳು ಕಳೆದ ಶನಿವಾರ ತಡರಾತ್ರಿ ಭಾರಿ ವೈಮಾನಿಕ ದಾಳಿ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 73 ಮಂದಿ ಪ್ಯಾಲಸ್ತೀನಿಯರು ಮೃತಪಟ್ಟಿದ್ದರು. ದಾಳಿಯಿಂದ ಬಹುಮಹಡಿ ವಸತಿ ಕಟ್ಟಡ ಮತ್ತು ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿತ್ತು.

ಈ ಸುದ್ದಿಯನ್ನೂ ಓದಿ: Israeli Airstrike: ಇಸ್ರೇಲ್‌ ಪಡೆಗಳಿಂದ ಉತ್ತರ ಗಾಜಾದ ಮೇಲೆ ದಾಳಿ; ಕನಿಷ್ಠ 73 ಮಂದಿ ಸಾವು