Friday, 22nd November 2024

Viral News: ಅಪಘಾತದಲ್ಲಿ ಕಾಲು ಮುರಿದುಕೊಂಡು 6 ವರ್ಷ ಹಾಸಿಗೆ ಹಿಡಿದಾಗ ಆರೈಕೆ ಮಾಡಿ ಪತ್ನಿಗೇ ವಿಚ್ಛೇದನ ಕೊಟ್ಟ!

Viral News

ಮಲೇಷ್ಯಾ: ಹೆತ್ತರವರಾಗಲಿ, ಸಂಗಾತಿಯಾಗಲಿ ದೀರ್ಘ ಕಾಲ ಹಾಸಿಗೆ ಹಿಡಿದರೆ ಅವರನ್ನು ನೋಡಿಕೊಳ್ಳುವುದಕ್ಕೆ ಎಲ್ಲರೂ ಹಿಂಜರಿಯುತ್ತಾರೆ. ಒಂದು ವೇಳೆ ಮುಕ್ತ ಮನಸ್ಸಿನಿಂದ ಆರೈಕೆ ಮಾಡಿದರೆ ಅವರಿಗೆ ನಾವು ಋಣಿಯಾಗಿರಬೇಕು. ಅಂಥವರಿಗೆ ನೆರವಾಗದೇ ಹೋದರೆ ಅವರನ್ನು ಮನುಷ್ಯ ಎಂದು ಕರೆಯುವುದು ಅಸಾಧ್ಯ. ಆದರೆ ಇಲ್ಲೊಬ್ಬ ತನ್ನನ್ನು ಆರು ವರ್ಷಗಳ ಕಾಲ ನೋಡಿಕೊಂಡ ಪತ್ನಿಗೆ ವಿಚ್ಛೇಧನ ನೀಡಿರುವ ಪ್ರಸಂಗ ನಡೆದಿದೆ. ಇದು ನಡೆದಿರುವುದು ಮಲೇಷ್ಯಾದಲ್ಲಿ. ನಿಷ್ಠೆ ತೋರಿದ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಅಷ್ಟೇ ಅಲ್ಲದೇ ನಂತರ ಆತ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ. ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ವರದಿ ಪ್ರಕಾರ, ವಿವಾಹವಾಗಿ ಎರಡು ವರ್ಷಗಳ ನಂತರ ಗಂಭೀರ ಕಾರು ಅಪಘಾತದಿಂದ ಗಂಡನ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಆರು ವರ್ಷಗಳ ಕಾಲ ನಡೆದಾಡಲು ಆಗದೆ ಹಾಸಿಗೆಯ ಮೇಲೆ ಮಲಗಿದ್ದನಂತೆ. ಆ ಸಮಯದಲ್ಲಿ ಪತ್ನಿ ಅವನ ಆರೈಕೆ ಮಾಡಿ ಕಾಳಜಿ ತೋರಿದ್ದಳು.

ಮಹಿಳೆಯು ಇತ್ತೀಚೆಗೆ ತನ್ನ ಪತಿ ಮತ್ತು ಆತನ ಹೊಸ ಪತ್ನಿಯ ವಿವಾಹದ ಫೋಟೋವನ್ನು ಪೋಸ್ಟ್ ಮಾಡಿ ಅಭಿನಂದಿಸಿದ್ದಾರೆ. ನೀವು ಆಯ್ಕೆ ಮಾಡಿಕೊಂಡವರೊಂದಿಗೆ ಸಂತೋಷವಾಗಿರಿ ಎಂದು ಹಾರೈಸಿದಲ್ಲದೇ  “ ದಯವಿಟ್ಟು ನನ್ನಂತೆಯೇ ಪತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವರೊಂದಿಗಿನ ನನ್ನ ಜೀವನ ಮುಗಿದಿದೆ. ಈಗ ನೋಡಿಕೊಳ್ಳುವ ಸರದಿ ನಿಮ್ಮದಾಗಿದೆ” ಎಂದು ಬರೆದಿದ್ದಾರೆ.  ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಆಕೆಯ ಪತಿಯ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ

ಅಕ್ಟೋಬರ್ 6 ರಂದು ಈ ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.”ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ” ಎಂದು ಹೇಳಿದ ಮಹಿಳೆ ಈ ವಿಚಾರದಲ್ಲಿ ಮಾಜಿ ಪತಿಯನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಸೋಶಿಯಲ್‌ ಮೀಡಿಯಾದ ಫಾಲೋವರ್‌ಗಳಲ್ಲಿ ಮನವಿ ಮಾಡಿದ್ದಾರೆ. ಆದರೂ ಅನೇಕರು ಈ ವಿಚಾರದಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, “ಅವರು ಪತಿಯಾಗಿ ತಮ್ಮ ಕರ್ತವ್ಯಗಳನ್ನು ಪೂರೈಸಿದ್ದಾರೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಯಾರಾದರೂ ಇಷ್ಟು ಕೃತಜ್ಞರಾಗಿರಲು ಹೇಗೆ ಸಾಧ್ಯ?” ಎಂದಿದ್ದಾರೆ.  “ನಿಮ್ಮಂತಹ ಒಳ್ಳೆಯ ಮಹಿಳೆ ಅವನಂತಹ ಪುರುಷನಿಗೆ ಅರ್ಹಳಲ್ಲ. ನಿಮ್ಮನ್ನು ನಿಜವಾಗಿಯೂ ಮೆಚ್ಚುವವರು ನಿಮಗೆ ಸಿಗುತ್ತಾರೆ” ಎಂದು ಮತ್ತೊಬ್ಬರು  ಕಾಮೆಂಟ್ ಮಾಡಿದ್ದಾರೆ.