ಹಿಂಗಾರು ಮಳೆಯ ಹೊಡೆತಕ್ಕೆ ನಲುಗಿದೆ ಹಣ್ಣು ಬೆಳೆಗಾರರ ಬದುಕು ; ನೆರವಿಗೆ ನಿಲ್ಲಬೇಕಿದೆ ಸರಕಾರ
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ಉತ್ತಮ ಇಳುವರಿಯೊಂದಿಗೆ ಗುಣಮಟ್ಟದಲ್ಲಿ ಬೆಳೆ ಬೆಳೆದಿದ್ದ ದಾಳಿಂಬೆ ಬೆಳೆಗಾರರಿಗೆ ಈಬಾರಿ ಸಂಕಷ್ಟ ಎದುರಾಗಿದೆ.ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಹಿಂಗಾರು ಮಳೆ ನಷ್ಟವನ್ನು ತಂದಿದ್ದು ಹೂಡಿದ ಬಂಡವಾಳವೂ ಬರದಂತಾಗಿದೆ.ಕಟಾವಿಗೆ ಬಂದಿದ್ದ ಹಣ್ಣು ತೋಟದಲ್ಲಿಯೇ ಕೊಳೆಯುವಂತಾಗಿರುವುದರಿAದ ಬೆಳೆಗಾರ ತಲೆಯ ಮೇಲೆ ಕೈಹೊತ್ತು ಕೂತಿದ್ದು ಸರಕಾರ ನೆರವಿಗೆ ಬರಬೇಕಿದೆ.
ಹೌದು ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ ಬೇಸಾಯ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರನ್ನು ಆಕರ್ಷಿಸಿದ್ದು, ಆರ್ಥಿಕ ಚೈತನ್ಯಕ್ಕೆ ಕಾರಣವಾದ ಕಾರಣ ದೊಡ್ಡ ದೊಡ್ಡ ರೈತರು ದ್ರಾಕ್ಷಿಗೆ ಗುಡ್ಬೈ ಹೇಳಿ ದಾಳಿಂಬೆಯತ್ತ ಮುಖ ಮಾಡಿದ್ದರು.
ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಫಸಲು ಮತ್ತು ಬೆಲೆಯ ಕಾರಣ ರೈತರ ಬದುಕು ಸುಧಾರಿಸಿತ್ತು. ಇದೇ ಭರವಸೆಯಲ್ಲಿದ್ದ ದಾಳಿಂಬೆ ಬೆಳೆಗಾರರು ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಬೆಳೆಯನ್ನು ಕಾಪಾಡಿಕೊಂಡಿದ್ದರು. ದಸರಾ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ 100 ರಿಂದ 150, 180ರತನಕ ಕೆ.ಜಿಯೊಂದಕ್ಕೆ ಬೆಲೆಯಿತ್ತು. ಆದರೆ ದಸರಾ ಹಬ್ಬದೊಂದಿಗೆ ಸುರಿದ ನಿರಂತರ ಮಳೆಗೆ ಸಿಕ್ಕಿದ ದಾಳಿಂಬೆ ಬೆಳೆ ನೀರು ಹೆಚ್ಚಾಗಿ ಬದುಗಳಲ್ಲಿ ನಿಂತ ಪರಿಣಾಮ ಕೊಳೆಯುವ ರೋಗಕ್ಕೆ ತುತ್ತಾಗಿದೆ.ಸಾವಿರಾರು ಕನಸುಹೊತ್ತು ಬೆಳೆದಿದ್ದ ಬೆಳೆ ಕಣ್ಣಮುಂದೆಯೇ ಕೊಳೆಯುತ್ತಿರುವುದನ್ನು ನೋಡಿದ ಹಣ್ಣು ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.
ಮೇಲಾಗಿ ನಿರಂತರ ಮಳೆಯಿಂದಾಗಿ ದಾಳಿಂಬೆಗೆ ಕಾಣಿಸಿಕೊಂಡಿರುವ ಎಣ್ಣೆಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಬೆಲೆ ಸಿಗದಂತೆ ಮಾಡಿದೆ. ದಾಳಿಂಬೆ ಬೆಳೆ ಜುಲೈ-ಸೆಪ್ಟಂಬರ್ ನಡುವೆ ಫಸಲಿಗೆ ಬರುತ್ತದೆ ಸಾಮಾನ್ಯವಾಗಿ ಜಿಲ್ಲೆಯಲ್ಲಿ ರಫ್ತು ಮಾಡುವ ಸೀನನ್ ಅಕ್ಟೋಬರ್ ನವೆಂಬರ್ನಲ್ಲಿ ಪ್ರಾರಂಭವಾಗುತ್ತದೆ ಮಾಚ್ವರೆಗೂ ಸಾಗುತ್ತದೆ. ಹೀಗಾಗಿ ಸೀಸನ್ ಪ್ರಾರಂಭವಾಗುವ ಮೊದಲೇ ರೋಗ ಮತ್ತು ಮಳೆಯ ಹೊಡೆತ ಹಣ್ಣುಬೆಳೆಗಾರರ ಬೆನ್ನು ಮೂಳೆ ಮುರಿದಿವೆ.
ಸದ್ಯದ ಪರಿಸ್ಥಿತಿಯಲ್ಲಿ ಬಜಾರಿನಲ್ಲಿ ಡ್ಯಾಮೇಜ್ ಇಲ್ಲದ ಹಣ್ಣು ಒಂದುನ ಕೆ.ಜಿಗೆ 50 ರೂಪಾಯಿಯಂತೆ ಬಿಕರಿ ಯಾಗುತ್ತಿದೆ. ಬಜಾರಿನಲ್ಲಿಯೇ ಈ ಬೆಲೆಯಿದ್ದರೆ ತೋಟದಲ್ಲಿ 20. ಮುವತ್ತು ರೂಪಾಯಿಗೆ ಮಾರುವ ಸ್ಥಿತಿ ನಿರ್ಮಾಣ ವಾಗಿದೆ.
ಕೊರೋನಾ ಮಹಾಮಾರಿ ಬಂದು ದೇಶವನ್ನು ಕಂಗೆಡಿಸಿದ್ದ ಅವಧಿಯಲ್ಲಿ ಪೇಟೆಬಿಟ್ಟು ಹಳ್ಳಿ ಸೇರಿದ್ದ ಸಾವಿರಾರು ಯುವಕರು ಹಳ್ಳಿಗಳಲ್ಲೇ ನೆಲೆಕಂಡುಕೊಂಡು ಕೃಷಿಯತ್ತ ವಾಲಿದ್ದರು. ಪರಿಣಾಮ, ತೋಟಗಾರಿಕೆ ಬೆಳೆಗಳು, ವಾಣಿಜ್ಯ ಬೆಳೆಗಳನ್ನು ಬೆಳೆದು ಇದ್ದಲ್ಲಿಯೇ ಆರ್ಥಿಕವಾಗಿ ಸಬಲರಾಗುವ ಮಾರ್ಗಗಳನ್ನು ಹುಡುಕೊಂಡಿದ್ದರು. ಇಂತಹ ಮಾರ್ಗಗಳಲ್ಲಿ ಗೋಡಂಬಿ, ದ್ರಾಕ್ಷಿ, ಹೂವು ಬೆಳೆಗಳು ಕೂಡ ಮುಖ್ಯವಾಗಿವೆ.
ಜಿಲ್ಲೆಯ ಮಟ್ಟಿಗೆ ನೂರಾರು ಮಂದಿ ಯುವ ರೈತರು ತಮ್ಮ ಸಾಫ್ಟ್ವೇರ್ ಉದ್ಯೋಗವನ್ನು ತೊರೆದು ಹಳ್ಳಿಗಳಿಗೆ ಬಂದು ಕೃಷಿಗೆ ಇಳಿದಿದ್ದರು.ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಅವರ ಮಗ ಮೋಹನ್ ಎಂಬ ಯುವಕ ಸಾಫ್ಟ್ವೇರ್ ಉದ್ಯೋಗ ಬಿಟ್ಟು ತಂದೆಯ ಜತೆ ಸೇರಿ ದಾಳಿಂಬೆ ಬೆಳೆ ಬೆಳೆಯಲು ನಿಂತಿದ್ದನು.ಮೂರು ಎಕರೆ ತೋಟದಲ್ಲಿ ಹದಿನೈದು ಲಕ್ಷ ರೂಪಾಯಿ ಖರ್ಚು ಮಾಡಿ ಈ ಬಾರಿ ದಾಳಿಂಬೆ ಬೆಳೆದಿದ್ದು ಉತ್ತಮವಾಗಿ ಬೆಳೆ ಬಂದಿತ್ತು. ಆದರೆ ಹಿಂಗಾರು ಮಳೆಯ ರೋಗದ ಕಾರಣ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಂತಾಗಿದೆ.ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ತೋಟದಲ್ಲಿ ಹಣ್ಣು ಕೊಳೆಯುವಂತೆ ಮಾಡುವ ಮೂಲಕ ವಿಧಿ ರೈತನ ಬದುಕನ್ನು ಅಣಕಿಸಿ ಕೇಕೆಹಾಕಿರುವುದು ಕಲ್ಲೆದೆಯನ್ನು ಕೂಡ ಕರಗಿಸುವಂತಿದೆ.
ಇದು ಒಬ್ಬ ರೈತನ ಗೋಳು ಮಾತ್ರವಲ್ಲ, ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಬೆಳೆದಿರುವ ನೂರಾರು ರೈತರು ಎದುರಿಸುತ್ತಿರುವ ಸಮಸ್ಯೆಯಾಗಿದೆ.ಹದಿನೈದು ದಿನಗಳ ಕೆಳಗೆ ದಾಳಿಂಬೆ ಬೆಳೆಗಾರರ ಒಕ್ಕೂಟ ಜಿಲ್ಲಾಕೇಂದ್ರದಲ್ಲಿಯೇ ದಾಳಿಂಬೆ ಬೆಳೆಗಾರರ ಮಹಾಸಮ್ಮೇಳನ ನಡೆಸಿ ದಾಳಿಂಬೆ ಬೆಳೆಗೆ ಬರುವ ರೋಗ, ಔಷಧೋಪಚಾರ, ಮಾರುಕಟ್ಟೆ, ನಾಟಿ, ಆರೈಕೆ, ಇತ್ಯಾದಿಗಳ ಬಗ್ಗೆ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಿಂದ ತರಬೇತಿ ಕೊಡಿಸಿದ್ದನ್ನು ಇಲ್ಲಿ ನೆನೆಯಬೇಕು.
ನದಿನಾಲೆಗಳ ಆಸರೆ ಇಲ್ಲದಿದ್ದರೂ ಕೊಳವೆ ಬಾವಿ ನೀರನ್ನು ಆಶ್ರಯಿಸಿಯೇ ವಾಣಿಜ್ಯ ಬೆಳೆಗಳನ್ನು ಬೆಳೆದು ಲಾಭದತ್ತ ಕೃಷಿಯನ್ನು ತೆಗೆದುಕೊಂಡು ಹೋಗಿರುವ ಜಿಲ್ಲೆಯ ಸಾವಿರಾರು ಪ್ರಗತಿಪರ ರೈತರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತೋಟಗಾರಿಕೆ ಬೆಳೆಗಳಿರಲಿ, ವಾಣಿಜ್ಯ ಬೆಳೆಗಳಿರಲಿ, ಪ್ಲೋರಿಕಲ್ಚರ್ ಇರಲಿ, ರೇಷ್ಮೆ, ಹೈನುಗಾರಿಕೆಯಿರಲಿ ತಮ್ಮದೇ ಆದ ವಿಶೇಷತೆಯನ್ನು ಉಳಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ರೈತರು ಬೆಳೆದ ದಾಳಿಂಬೆ ಬೆಳೆ ಮಾತ್ರ ಈಬಾರಿ ಮಳೆಯ ಹೊಡೆತಕ್ಕೆ ಸಿಕ್ಕಿ ಭಾರೀ ನಷ್ಟವನ್ನು ತಂದಿದೆ.
ತೋಟಗಾರಿಕೆ ಬೆಳೆಯಾದ ದಾಳಿಂಬೆ ಹಣ್ಣು ಬೆಳೆಗಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಕೂಡಲೇ ಸರಕಾರ ಮುಂದಾಗುವ ಮೂಲಕ ಸಾಲಸೋಲ ಮಾಡಿ ಬೆಳೆಯಿಟ್ಟಿರುವ ರೈತರ ಕೈಹಿಡಿಯುವ ಮೂಲಕ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎನ್ನುವುದು ರೈತಾಪಿ ವರ್ಗದ ಆಗ್ರಹವಾಗಿದೆ.ಈ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸರಕಾರ ಯಾವ ಕ್ರಮ ಅನುಸರಿಸುವುದೋ ಕಾದು ನೋಡಬೇಕಿದೆ.
ಇದನ್ನೂ ಓದಿ: Chikkaballapur News: ಎಸ್.ಅರ್.ಕೆ ಎಸ್ಟೇಟ್ ಅಂಡ್ ರೆಸಾರ್ಟ್ ಮಾಲಿಕರ ಅನ್ಯಾಯಕ್ಕೆ ಶಿಕ್ಷೆ ಆಗಬೇಕು; ಸಂಜಯ್ ಆಗ್ರಹ