Monday, 25th November 2024

DMK MP Abdulla :ನನಗೆ ಹಿಂದಿ ಅರ್ಥ ಆಗೋದಿಲ್ಲ… ಕೇಂದ್ರ ಸಚಿವರ ಪತ್ರಕ್ಕೆ ತಮಿಳಿನಲ್ಲೇ ಉತ್ತರ ಬರೆದ DMK ಸಂಸದ

Dmk Mp Tweet

ಚೆನೈ: ಡಿಎಂಕೆ (DMK) ನಾಯಕ ಮತ್ತು ರಾಜ್ಯಸಭಾ ಸಂಸದ ಎಂಎಂ ಅಬ್ದುಲ್ಲಾ(Pudukkottai MM Abdulla) ಅವರು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು(Union Minister Ravneet Singh Bittu) ಅವರ ಹಿಂದಿಯಲ್ಲಿ ಬರೆದ ಪತ್ರಕ್ಕೆ ತಮಿಳಿನಲ್ಲಿ ಪ್ರತಿಕ್ರಿಯಿಸಿದ್ದು, ನನಗೆ ಹಿಂದಿ ಅರ್ಥವಾಗುತ್ತಿಲ್ಲ ಮತ್ತು ಅಧಿಕೃತ ಸಂವಹನಗಳನ್ನು ಇಂಗ್ಲಿಷ್‌ನಲ್ಲಿ ಕಳುಹಿಸುವಂತೆ ವಿನಂತಿಸಿರುವ ಘಟನೆ ವರದಿಯಾಗಿದೆ.

ಡಿಎಂಕೆ ಸಂಸದ ಬರೆದ ಪತ್ರದಲ್ಲಿ ಕೇಂದ್ರ ರೈಲ್ವೇ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟುಗೆ ರೈಲಿನಲ್ಲಿ ಒದಗಿಸುವ ಆಹಾರದ ಗುಣಮಟ್ಟ ಮತ್ತು ಶುಚಿತ್ವ ಹಾಗೂ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಅನಧಿಕೃತ ಮಾರಾಟವನ್ನು ನಿಲ್ಲಿಸುವ ಬಗ್ಗೆ ಈ ಮೊದಲು ನೀವು ಮಾತನಾಡಿದ್ದೀರಿ, ಈಗ ಅದು ನಿಮಗೆ ನೆನಪಿದೆ ಎಂದು ಭಾವಿಸಿದ್ದೇನೆ. ಇದಕ್ಕೆ ಹಿಂದಿಯಲ್ಲಿ ಉತ್ತರಿಸಿದ್ದೀರಿ. ಅದು ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಉತ್ತರವನ್ನು ಇಂಗ್ಲೀಷ್‌ನಲ್ಲಿ ಕಳುಹಿಸಿ ಎಂದು ತಮಿಳಿನಲ್ಲಿ ಬರೆದು ಕಳಿಸಿದ್ದಾರೆ.

ಇನ್ನು ಎರಡೂ ಪತ್ರಗಳ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅಬ್ದುಲ್ಲಾ ಅವರು, ಕೇಂದ್ರ ರಾಜ್ಯ ಸಚಿವರ ಕಚೇರಿಯ ಅಧಿಕಾರಿಗಳಿಗೆ ಹಿಂದಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ, ಸಂವಹನಗಳನ್ನು ಇನ್ನೂ ಅದೇ ಭಾಷೆಯಲ್ಲಿ ಕಳುಹಿಸಲಾಗುತ್ತಿದೆ ಎಂದು ಹೇಳಿದರು. “ರೈಲ್ವೆ ಖಾತೆ ರಾಜ್ಯ ಸಚಿವರ ಕಚೇರಿಯ ಪತ್ರವು ಯಾವಾಗಲೂ ಹಿಂದಿಯಲ್ಲಿರುತ್ತದೆ. ನಾನು ಅವರ ಕಚೇರಿಯಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿ ನನಗೆ ಹಿಂದಿ ಗೊತ್ತಿಲ್ಲ, ದಯವಿಟ್ಟು ಇಂಗ್ಲಿಷ್‌ನಲ್ಲಿ ಪತ್ರವನ್ನು ಕಳುಹಿಸಿ ಎಂದು ಮನವಿ ಮಾಡಿದ್ದೆ. ಆದರೂ ಅವರು ಮತ್ತೆ ಅದನ್ನೇ ಪುನರಾವರ್ತಿಸುತ್ತಿದ್ದಾರೆ ಎಂದು ಡಿಎಂಕೆ ಎಂ.ಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

2022 ರಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿಯನ್ನು ಹೇರುತ್ತಿದೆ ಎಂದು ಡಿ.ಎಂ.ಕೆ ನಾಯಕರು ವಾಗ್ದಾಳಿ ನಡೆಸಿದ್ದರು. ಸ್ಥಳೀಯ ಭಾಷೆಗಳಿಗೆ ಬದಲಾಗಿ ಹಿಂದಿಯನ್ನುಬಳಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇದು ರಾಷ್ಟ್ರದ ಸಮಗ್ರತೆಯನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಹಾಗೂ ಡಿ.ಎಂ.ಕೆ ನಾಯಕ ಉದಯನಿಧಿ ಸ್ಟಾಲಿನ್‌ ತಮಿಳುನಾಡಿನ ಜನರ ಮಕ್ಕಳಿಗೆ ತಮಿಳಿನ ಹೆಸರಿಡಿ ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ Udhayanidhi Stalin: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಲ್ಲ ಎಂದ ಉದಯನಿಧಿ ಸ್ಟಾಲಿನ್