Sunday, 24th November 2024

Self Harming: ಗಂಡ ಕಪ್ಪೆಂದು ನೇಣಿಗೆ ಕೊರಳೊಡ್ಡಿದಳು ನವ ವಿವಾಹಿತೆ!

Self Harming

ಉತ್ತರ ಪ್ರದೇಶ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಗಂಡನ ಮೈ ಬಣ್ಣ ಕಪ್ಪೆಂದು ಮನನೊಂದು ಹೆಂಡತಿ ಆತ್ಮಹತ್ಯೆ (Self Harming) ಮಾಡಿಕೊಂಡ ದಾರುಣ ಘಟನೆಯೊಂದು ನಡೆದಿದೆ. ಕಪ್ಪಗಿರುವ ಹುಡುಗನನ್ನು ಮದುವೆಯಾದ ಕಾರಣಕ್ಕೆ ಮಹಿಳೆಗೆ ಬೇಸರವಿದ್ದಿತ್ತು ಹಾಗಾಗಿ ಮದುವೆಯಾದ ಕೇವಲ ನಾಲ್ಕು ತಿಂಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಹಾಗೂ ಪತಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೂಡಲೇ, ಪೊಲೀಸರು  ಸ್ಥಳಕ್ಕೆ ಬಂದಿದ್ದಾರೆ. ಆನಂತರ ಮಹಿಳೆಯ ಪತಿ ಹಾಗೂ  ಕುಟುಂಬದವರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನವವಿವಾಹಿತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಪ್ರಕರಣವು ಹತ್ರಾಸ್ ನಗರದಲ್ಲಿ ನಡೆದಿದೆ. ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದ ಹತ್ರಾಸ್‌ನ ಸಿಯಾಲ್ ಖೇಡಾ ಮೊಹಲ್ಲಾದ ನಿವಾಸಿ ತೌಫೀಕ್ ಎಂಬುವವರು ನಾಲ್ಕು ತಿಂಗಳ ಹಿಂದೆ ಅಲಿಗಢದ ಬರೌಲಾ ಜಫ್ರಾಬಾದ್ ನಿವಾಸಿ ಸಿಮ್ರಾನ್ ಎಂಬಾಕೆಯನ್ನು ಮದುವೆಯಾಗಿದ್ದರು. ಸಿಮ್ರಾನ್‍ಗೆ ತಾನು ಮದುವೆಯಾಗುವ ಹುಡುಗ ಬಿಳಿ ಬಣ್ಣದಲ್ಲಿರಬೇಕು ಎಂಬ ಬಯಕೆ ಇದ್ದಿತ್ತು. ಆದರೆ ಪತಿ ತೌಫಿಕ್‍ ಕಪ್ಪು ಮೈಬಣ್ಣ ಹೊಂದಿರುವ ಕಾರಣದಿಂದ ಸಿಮ್ರಾನ್‌ ಅಸಮಾಧಾನಗೊಂಡಿದ್ದರು. ಇದರಿಂದ ಮನನೊಂದ ಸಿಮ್ರಾನ್‌ ಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೊ ಇದೆ

ಇತ್ತೀಚೆಗಷ್ಟೇ ಕರ್ವಾ ಚೌತ್ ರಾತ್ರಿ ಪತಿ ತಡವಾಗಿ ಬಂದ ಎಂಬ ಕಾರಣಕ್ಕೆ ಪತಿಯೊಂದಿಗೆ ಜಗಳವಾಡಿದ ಪತ್ನಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯೂ ನಡೆಯಿತು. ಪತ್ನಿಯ ಸಾವಿನಿಂದ ಆಘಾತಗೊಂಡ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬುದಾಗಿ ತಿಳಿದುಬಂದಿದೆ. ಈ ಘಟನೆ ಜೈಪುರದ ಹರ್ಮಾರಾ ಪ್ರದೇಶದಲ್ಲಿ ನಡೆದಿದೆ.