Saturday, 26th October 2024

Yamuna Pollution : ಕಲುಷಿತ ಯಮುನೆಯಲ್ಲಿ ಸ್ನಾನ: ದೆಹಲಿ ಬಿಜೆಪಿ ಮುಖಂಡ ಆಸ್ಪತ್ರೆಗೆ ದಾಖಲು

Yamuna Pollution

ದೆಹಲಿ: ಯಮುನಾ ನದಿಯ (Yamuna river Pollution) ಕಲುಷಿತ ನೀರಿನಲ್ಲಿ ಸ್ನಾನ ಮಾಡಿದ ಸುಮಾರು ಎರಡು ದಿನಗಳ ನಂತರ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ (Delhi BJP chief) ಅವರು ಉಸಿರಾಟದ ತೊಂದರೆ ಮತ್ತು ಚರ್ಮದ ತುರಿಕೆ ಸಂಬಂಧ ಸಮಸ್ಯೆಯಿಂದಾಗಿ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚ್‌ದೇವ ಅವರನ್ನು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಅವರನ್ನು ಆರ್‌ಎಂಎಲ್‌ ಆಸ್ಪತ್ರೆಯ ವೈದ್ಯರು ತಪಾಸಣೆಗೊಳಪಡಿಸಿ ಮೂರು ದಿನಗಳ ಔಷಧ ನೀಡಿದ್ದರು . ಆದರೆ ಉಸಿರಾಟದ ತೊಂದರೆ ಹಾಗೂ ತುರಿಕೆ ಜಾಸ್ತಿ ಆಗಿದ್ದರಿಂದ ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಜೆಪಿ ನಾಯಕ ಗುರುವಾರ ಯಮುನಾ ನದಿಯ ಕಲುಷಿತ ನೀರಿನಲ್ಲಿ ಸ್ನಾನ ಮಾಡಿದ್ದರು. ಇದೀಗ ಅವರು ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ನೀಡಿದ ಹಣವನ್ನು ದೆಹಲಿ ಸರ್ಕಾರ ಸರಿಯಾಗಿ ಬಳಕೆ ಮಾಡಿಲ್ಲ ಎಂದು . ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ದೆಹಲಿ ಸರ್ಕಾರಕ್ಕೆ ಒಟ್ಟು 8500 ಕೋಟಿ ರೂಪಾಯಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ

ಗುರುವಾರ ವೀರೇಂದ್ರ ಸಚ್‌ದೇವ ಯಮುನೆಯಲ್ಲಿ ಸ್ನಾನ ಮಾಡಿ ಕೇಜ್ರಿವಾಲ್‌ಗೂ ಇದನ್ನೇ ಮಾಡಲಿ ಎಂದು ಸವಾಲು ಹಾಕಿದ್ದರು. ಸ್ನಾನದ ಕೆಲ ಹೊತ್ತಿನ ನಂತರ ಅವರಿಗೆ ಈ ಸಮಸ್ಯೆಗಳು ಕಾಣಿಸಿಕೊಂಡಿವೆ. ದೆಹಲಿ ಸರ್ಕಾರ ಭ್ರಷ್ಟಸರ್ಕಾರ ಯಮುನೆಯ ಶುದ್ಧೀಕರಣಕ್ಕಾಗಿ ನೀಡಿದ್ದ ಹಣವನ್ನು ಲೂಟಿ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಮುನಾ ಸ್ವಚ್ಛತಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ಅವರು ಭರವಸೆ ನೀಡಿದರು.

ನಗರದಲ್ಲಿ ಚಳಿಗಾಲ ಪ್ರಾರಂಭವಾಗುವ ಮೊದಲೇ ಮಾಲಿನ್ಯ ಹೆಚ್ಚಾಗಿದೆ. ದೆಹಲಿಯಾದ್ಯಂತ ವಾತಾವರಣ ಹದಗೆಟ್ಟಿದ್ದು ಜನರು ಉಸಿರಾಟ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಛತ್‌ ಪೂಜಾ ಪ್ರಾರಂಭವಾಗಲಿದ್ದು ಜನರು ಯಮುನೆಯನ್ನು ಪೂಜಿಸುತ್ತಾರೆ. ಎಲ್ಲಾ ಛತ್‌ ಘಾಟ್‌ಗಳು ಮಾಲಿನ್ಯದಿಂದ ಕೂಡಿವೆ .