Saturday, 26th October 2024

MLA Satish Sail: ಬೇಲೆಕೇರಿ ಅದಿರು ನಾಪತ್ತೆ ಕೇಸ್; ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ

MLA Satish Sail

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ (Illegal mining case) ಸಂಬಂಧಿಸಿ ದಾಖಲಾಗಿದ್ದ ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್‌ ಸೈಲ್‌ ಸೇರಿ ಏಳು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ನಗರದ ಜನಪ್ರತಿನಿಧಿಗಳ ಕೋರ್ಟ್‌ ತೀರ್ಪು ನೀಡಿದೆ. ಶಾಸಕನಿಗೆ ಮೊದಲ ಪ್ರಕರಣದಲ್ಲಿ 7 ವರ್ಷ, ಎರಡನೇ ಪ್ರಕರಣದಲ್ಲಿ 5 ವರ್ಷ, ಮೂರನೇ ಪ್ರಕರಣದಲ್ಲೂ 7 ವರ್ಷ, ನಾಲ್ಕನೇ ಕೇಸ್‌ನಲ್ಲಿ 5 ವರ್ಷ, ಐದನೇ ಕೇಸ್‌ನಲ್ಲಿ 3 ವರ್ಷ ಹಾಗೂ 6ನೇ ಕೇಸ್‌ನಲ್ಲಿ 7 ವರ್ಷ ಜೈಲು ಶಿಕ್ಷೆಯಾಗಿದೆ.

ಇನ್ನು ಮತ್ತೊಬ್ಬ ಆರೋಪಿ, ಅರಣ್ಯಾಧಿಕಾರಿ ಮಹೇಶ್‌ ಬಿಲಿಯಾಗೆ ಕೂಡ 7 ವರ್ಷ ಜೈಲು ಶಿಕ್ಷೆಯಾಗಿದೆ. ನ್ಯಾಯಮೂರ್ತಿ ಗಜಾನನ ಭಟ್ ಅವರು ಈ ಮಹತ್ವದ ತೀರ್ಪನ್ನು ನೀಡಿದ್ದು, ಮೊದಲ ಪ್ರಕರಣದ ಎಲ್ಲ ಆರೋಪಿಗಳಿಗೆ 9.60 ಕೋಟಿ ದಂಡ, ಎರಡನೇ ಕೇಸ್‌ನಲ್ಲಿ 6 ಕೋಟಿ ದಂಡ ಹಾಗೂ ಮೂರನೇ ಕೇಸ್‌ನಲ್ಲಿ 9.36 ಕೋಟಿ, ನಾಲ್ಕನೇ ಕೇಸ್‌ನಲ್ಲಿ 9.52 ಕೋಟಿ, ಐದನೇ ಕೇಸ್‌ನಲ್ಲಿ 9.25 ಕೋಟಿ ಹಾಗೂ
ಆರನೇ ಕೇಸ್‌ನಲ್ಲಿ 90 ಲಕ್ಷ ದಂಡ ವಿಧಿಸಲಾಗಿದೆ.

ಆರೋಪಿಗಳಿಗೆ ಒಟ್ಟು 44 ಕೋಟಿಗೂ ಅಧಿಕ ದಂಡ ವಿಧಿಸಲಾಗಿದ್ದು, ದಂಡ ಕಟ್ಟದಿದ್ದರೆ 1 ವರ್ಷ ಹೆಚ್ಚವರಿ ಜೈಲು ಶಿಕ್ಷೆಯಾಗಲಿದೆ. 6 ಪ್ರಕರಣಗಳಲ್ಲಿ 7 ವರ್ಷ ಜೈಲು ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ ಶಾಸಕನಿಗೆ ಅನರ್ಹತೆ ಭೀತಿ ಎದುರಾಗಿದೆ.

ಸಿಬಿಐನಿಂದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದಂತ ನ್ಯಾಯಾಲಯವು ಇಂದು ಶಾಸಕ ಸತೀಶ್ ಸೈಲ್ ಸೇರಿ ಎಲ್ಲಾ ಆರೋಪಿಗಳು ದೋಷಿ ಎಂಬುದಾಗಿ ತೀರ್ಪು ನೀಡಿತ್ತು. ಇದೀಗ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ.

ಏನಿದು ಪ್ರಕರಣ?

2010ರಲ್ಲಿ ಬೇಲೆಕೇರಿ ಬಂದರಿನಲ್ಲಿ ಸೀಜ್ ಆಗಿದ್ದಂತಹ 11,312 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಶಾಸಕ ಸತೀಶ್‌ ಸೈಲ್‌, ಅರಣ್ಯಾಧಿಕಾರಿ ಮಹೇಶ್ ಬಿಳಿಯ, ಮಲ್ಲಿಕಾರ್ಜುನ ಶಿಪ್ಪಿಂಗ್ ಸೇರಿ ಹಲವರ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು.‌ ಪ್ರಕರಣದ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿವಾದವನ್ನು ಆಲಿಸಿ, ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ ಬಂಧನಕ್ಕೆ ಕೋರ್ಟ್‌ ಸೂಚಿಸಿದ್ದರಿಂದ ಅ.24ರಂದು ಶಾಸಕನ ಬಂಧನವಾಗಿತ್ತು.

ಈ ಸುದ್ದಿಯನ್ನೂ ಓದಿ | Yamuna Pollution : ಕಲುಷಿತ ಯಮುನೆಯಲ್ಲಿ ಸ್ನಾನ: ದೆಹಲಿ ಬಿಜೆಪಿ ಮುಖಂಡ ಆಸ್ಪತ್ರೆಗೆ ದಾಖಲು

ಅ.24 ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಅಪರಾಧಿ ಎಂಬುದಾಗಿ ತನ್ನ ತೀರ್ಪಿನಲ್ಲಿ ಕೋರ್ಟ್ ಪ್ರಕಟಿಸಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ವಾದ-ಪ್ರತಿವಾದ ಆಲಿಸಿ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಸೇರಿ ಹಲವರನ್ನು ದೋಷಿಗಳು ಎಂಬುದಾಗಿ ತೀರ್ಪು ನೀಡಿತ್ತು.

ಪ್ರಕರಣ ಬೆಳಕಿಗೆ ತಂದಿದ್ದ ಸಂತೋಷ್ ಹೆಗ್ಡೆ

2010ರ ಮಾರ್ಚ್​​ನಲ್ಲಿ ಅಂದಿನ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಪ್ರಕರಣವನ್ನು ಬಯಲಿಗೆಳೆದಿದ್ದರು. ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಈ ಅಕ್ರಮ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ಶಾಸಕ ಸತೀಶ್​ ಸೈಲ್ ಅದಿರನ್ನು ಖರೀದಿ ಮಾಡುತ್ತಿದ್ದರು. ಕಾನೂನು ಬಾಹಿರವಾಗಿ, ಅಂದರೆ, ಗುತ್ತಿಗೆ ಪಡೆಯದೇ ತೆಗೆದ ಅದಿರು ಖರೀದಿಸುತ್ತಿದ್ದರು. ಬಳ್ಳಾರಿ ಮತ್ತು ಹೊಸಪೇಟೆ ಸೇರಿ ಇತರೆ ಅರಣ್ಯದಲ್ಲಿ ತೆಗೆದಿದ್ದ ಅದಿರು ಕೊಂಡುಕೊಳ್ಳುತ್ತಿದ್ದರು. ಖರೀದಿ ಮಾಡಿದ್ದ ಅದಿರನ್ನು ಸರ್ಕಾರದ ಅನುಮತಿ ಪಡೆಯದೇ ಸ್ಥಳಾಂತರ ಮಾಡುತ್ತಿದ್ದರು. ಹೀಗೆ ತೆರಿಗೆ ವಂಚನೆ ಮಾಡಿ ಬೇಲೆಕೇರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಲಾಗುತ್ತಿತ್ತು.

ಫ್ಲ್ಯಾಟ್​ನಲ್ಲಿ ಅಕ್ರಮವಾಗಿ ಅದಿರು ಸಂಗ್ರಹ

ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಅದಿರನ್ನು ಸತೀಶ್ ಸೈಲ್ ತಮ್ಮ ಫ್ಲ್ಯಾಟ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ದಾಸ್ತಾನು ಮಾಡಿದ ಅದಿರನ್ನು 17 ತಿಂಗಳಲ್ಲಿ ಸಂಪೂರ್ಣವಾಗಿ ರಫ್ತು ಮಾಡಲಾಗಿತ್ತು. ಇನ್ನು ಪೊಲೀಸರು ಅದಿರು ಸೀಜ್ ಮಾಡಿದ್ದರೂ ತಲೆಕೆಡಿಸಿಕೊಳ್ಳದೇ ಸತೀಶ್ ರಪ್ತು ಕಾರ್ಯ ಮುಂದುವರಿಸಿದ್ದರು ಎನ್ನಲಾಗಿದೆ. ಯಾವಾಗ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರಿನ ಅಕ್ರಮ ಬಯಲಾಯಿತೋ, ಆಗ 5 ಲಕ್ಷ ಮೆಟ್ರಿಕ್ ಟನ್ ಅದಿರು ಸೀಜ್ ಮಾಡಲಾಗಿತ್ತು. ಅಧಿಕಾರಿಗಳ ಕ್ರಮಕ್ಕೂ ಸುಮ್ಮನಾಗದ ಸತೀಶ್ ಸೈಲ್, ಮುಟ್ಟುಗೋಲು ಹಾಕಿದ್ದ ಅದಿರನ್ನೂ ಗೊತ್ತಿಲ್ಲದಂತೆ ರಫ್ತು ಮಾಡಿಸಿದ್ದರು.

2012ರ ಸೆ. 16ರಂದು ಸಿಬಿಐ ಸತೀಶ್ ಸೈಲ್ ಮನೆ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಇದಾದ ಬಳಿಕ 2013ರ ಸೆ. 20ರಂದು ಸೈಲ್ ಅರೆಸ್ಟ್ ಕೂಡ ಆಗಿದ್ದರು. ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಬೇಕಾಯಿತು. ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದುಹೊರ ಬಂದಿದ್ದರು.