Saturday, 26th October 2024

MLA Satish Sail : ಶಾಸಕ ಸತೀಶ್‌ ಸೈಲ್‌ರನ್ನು ಜೈಲಿಗಟ್ಟಿದ ಅದಿರು ಪ್ರಕರಣ; ಅದುರಿದ ಶಾಸಕ ಸ್ಥಾನ! ಅನರ್ಹತೆ ಖಚಿತ

MLA Satish Sail

ಬೆಂಗಳೂರು: ಬೇಲೇಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್‌ ಸೈಲ್‌ಗೆ (MLA Satish Sail) ಜನಪ್ರತಿನಿಧಿಗಳ ಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಅವರು ಜನಪ್ರತಿನಿಧಿಗಳ ಕಾಯಿದೆ ಪ್ರಕಾರ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅವರು ಸೇರಿದಂತೆ ಒಟ್ಟು ಆರು ಮಂದಿ ಈ ಪ್ರಕರಣದಲ್ಲಿ ದೋಷಿ ಎಂದು ಅಕ್ಟೋಬರ್‌ 24ರಂದು ಕೋರ್ಟ್‌ ತೀರ್ಪು ಪ್ರಕಟಿಸಿತ್ತು. ಅಂದೇ ಅವರನ್ನು ಜೈಲಿಗೆ ಕಳುಹಿಸುವಂತೆ ಕೋರ್ಟ್ ಹೇಳಿತ್ತು. ಇದೀಗ ಶನಿವಾರ ಇಬ್ಬರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಅದರಲ್ಲಿ ಸೈಲ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಸಿ, 44.55 ಕೋಟಿ ರೂ. ದಂಡ ವಿಧಿಸಲಾಗಿದೆ.

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ದಾಖಲಾಗಿ 14 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರಬಿದ್ದಿತ್ತು. ಇದೀಗ ಜೈಲು ಶಿಕ್ಷೆಯೂ ಪ್ರಕಟಗೊಂಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾ. ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದಾರೆ. ಸೈಲ್ ಜತೆಗೆ ಅರಣ್ಯ ಅಧಿಕಾರಿ ಮಹೇಶ್ ಬಿಳಿಯಾ ಸೇರಿದಂತೆ ಅದಿರು ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಲಾಗಿದೆ. ಅದರಲ್ಲಿಎಲ್ಲ ಪ್ರಕರಣದ ಎ1 ಮಹೇಶ್ ಬಿಳಿಯಾ ಮತ್ತು ಸತೀಶ್‌ ಸೈಲ್‌ಗೆ ಶನಿವಾರ ಶಿಕ್ಷೆ ಪ್ರಕಟಿಸಲಾಗಿದೆ. ಅಂದ ಹಾಗೆ ಆರು ಪ್ರಕರಣದಲ್ಲೂ ದೋಷಿಯಾಗಿರುವ ಆಡಳಿತರೂಢ ಕಾಂಗ್ರೆಸ್​ ಪಕ್ಷದ ಶಾಸಕ ಸತೀಶ್ ಸೈಲ್ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅವರನ್ನು ಸ್ಪೀಕರ್‌ ಯು.ಟಿ ಖಾದರ್‌ ಅವರು ಅನರ್ಹಗೊಳಿಸಬೇಕಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರಕರಣ ಹಿನ್ನಡೆ ಖಚಿತ. ಚನ್ನಪಟ್ಟ, ಸಂಡೂರು, ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ನಡುವೆ ಈ ಪ್ರಕರಣದ ಕಾಂಗ್ರೆಸ್‌ಗೆ ದೊಡ್ಡ ಮುಟ್ಟದ ಮುಖಭಂಗವಾಗಲಿದೆ.

ಸತೀಶ್ ಸೈಲ್‌ಗೆ ಜೈಲ್

ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಶಾಸಕ ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯ, ಮಹೇಶ್ ಕುಮಾರ್ ಕೆ, ಪ್ರೇಮ್ ಚಂದ್ ಗರ್ಗ್, ಸುಶೀಲ್ ಕುಮಾರ್ ವಲೇಚ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರೆಲ್ಲರನ್ನೂ ದೋಷಿ ಎಂದು ಘೋಷಿಸಲಾಗಿದೆ. ಅಪರಾಧಿಗಳು ಎಂದು ಪ್ರಕಟಿಸಿದ ತಕ್ಷಣವೇ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳುವಂತೆ ಕೋರ್ಟ್ ಆದೇಶಿತ್ತು. ಸಿಬಿಐ ಅಧಿಕಾರಿಗಳು ಎಲ್ಲ ಅಪರಾಧಿಗಳು ಕೋರ್ಟ್​ನಲ್ಲೇ ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು.

ಜನಪ್ರತಿನಿಧಿಗಳ ಕಾಯಿದೆ ಏನು ಹೇಳುತ್ತದೆ?

ಜನಪ್ರತಿನಿಧಿಗಳ ಕಾಯಿದೆಯಂತೆ ಜನಪ್ರತಿನಿಧಿಗಳು ಎರಡು ನಿದರ್ಶನಗಳಲ್ಲಿ ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಬಹುದು. ಮೊದಲು ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು) ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದರೆ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Pralhad Joshi: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಗೆ ಸಾಕ್ಷಿ; ಜೋಶಿ ವಾಗ್ದಾಳಿ

ಎರಡನೇಯದಾಗಿ ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ 2 ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದರೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ಇದೇ ನಿಯಮ ಸೈಲ್‌ಗೆ ಅನ್ವಯವಾಗಲಿದೆ. ಅವರು ಕಾರವಾರ ಕ್ಷೇತ್ರದಲ್ಲಿನ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

ಸಿಎಂ ಸಿದ್ದರಾಮಯ್ಯ ಹೋರಾಟ ಮಾಡಿದ ಪ್ರಕರಣದಲ್ಲಿ ಅವರ ಪಕ್ಷದ ಶಾಸಕ ಜೈಲಿಗೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆಗಿನ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್​ನ ಘಟಾನುಘಟಿ ನಾಯಕರೆಲ್ಲರೂ ಆಗ ಪ್ರತಿಭಟನೆ ನಡೆಸಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಗಣಿ ಧಣಿಗಳ ವಿರುದ್ಧ ತೊಡೆತಟ್ಟಿದ್ದರು. ಇದೀಗ ಕಾಂಗ್ರೆಸ್​ನ ಶಾಸಕ ಆಗಿರುವ ಸತೀಶ್ ಸೈಲ್​ ಈಗ ಬೇಲೆಕೇರಿ ಅದಿರು ಪಕರಣದಲ್ಲಿ ಅಪರಾಧಿಯಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಪಕ್ಷದ ನಾಯಕರೊಬ್ಬರು ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಕೆಲವು ತಿಂಗಳುಗಳ ಬಳಿಕ ಇಲ್ಲಿ ಉಪಚುನಾಣೆ ನಡೆಯುವುದು ಖಚಿತ.

ಏನಿದು ಬೇಲೇಕೇರಿ ಪ್ರಕರಣ?

ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರನ್ನು ಸಂಗ್ರಹಿಸಿ ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. 2010ರಲ್ಲಿಅಕ್ರಮ ಎನಿಸಿದ್ದ 5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜಪ್ತಿ ಮಾಡಲಾಗಿತ್ತು. ಆದರೆ ಜಪ್ತಿಯಾದ ಅದಿರನ್ನನು ಕಳ್ಳತನ ಮಾಡಿ ಸಾಗಾಟ ಮಾಡಿದ ಆರೋಪ ಸತೀಶ್ ಸೈಲ್ ಮೇಲಿತ್ತು. ಈ ಪ್ರಕರಣವನ್ನು ಅಂದಿನ ಕರ್ನಾಟಕ ಲೋಕಾಯುಕ್ತರಾದ ನ್ಯಾ. ಎನ್. ಸಂತೋಷ್‌ ಹೆಗ್ಡೆ ಬೆಳಕಿಗೆ ತಂದಿದ್ದರು. ಅದರನ್ವಯ 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. 2006-07 ಹಾಗೂ 2010-11ರ ನಡುವೆ ಭಾರೀ ಪ್ರಮಾಣದ ಅದಿರು ವಿದೇಶಕ್ಕೆ ರಫ್ತಾಗಿದ್ದು ಸರಕಾರದ ಖಜಾನೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು.

ಮೊದಲು ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿದ್ದರು. ನಂತರ ಸಿಬಿಐಗೆ ಈ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ವಿರುದ್ಧ ಕ್ರಿಮಿನಲ್ ಪಿತೂರಿ, ಮೋಸ , ಪೋರ್ಜರಿ, ಅಕ್ರಮ ಪ್ರವೇಶ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ 2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ಅಂದಿನ ಬಿಎಸ್‌ಆರ್ ಕಾಂಗ್ರೆಸ್ ಕಂಪ್ಲಿ ಶಾಸಕ ಸುರೇಶ್ ಬಾಬು ಕೂಡ ಜೈಲು ಸೇರಿದ್ದರು.