Saturday, 26th October 2024

Areca nut: ಅಡಿಕೆ ಎಲೆಚುಕ್ಕಿ ರೋಗ; ಮತ್ತೊಂದು ಅಲೆಗೆ ಬೆಚ್ಚಿ ಬಿದ್ದಿದೆ ಮಲೆನಾಡು-ಕರಾವಳಿ!

Areca nut

| ಅರವಿಂದ ಸಿಗದಾಳ್, ಮೇಲುಕೊಪ್ಪ
ಮುಗಿಯದ ಮಳೆಗಾಲ, ಸದಾ ಮೋಡ ಕವಿದ ವಾತಾವರಣ, ಅಡಿಕೆ ತೋಟದಲ್ಲಿ ಹೆಚ್ಚಿದ ತೇವಾಂಶಗಳಿಂದ ಮಲೆನಾಡಿನ ಅಡಿಕೆ ತೋಟದಲ್ಲಿ (Areca nut) ಈ ಬಾರಿ ಅಡಿಕೆ ಎಲೆ ಚುಕ್ಕಿ ಭೀಕರವಾಗಿ ವಿಸ್ತಾರ ಪಡೆದುಕೊಳ್ಳುತ್ತಿದೆ. ಕಳೆದ ಬೇಸಿಗೆಯಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದ ಕೊಬ್ಬಿದ ಉಗ್ರಾಗಾಮಿ ಕೊಲೆಟೋಟ್ರೈಕಮ್ ಫಂಗಸ್‌ಗಳು, ಈ ಬಾರಿ ಅಡಿಕೆ ತೋಟವನ್ನೇ ರಂಣರಂಗವಾಗಿಸಿದೆ!

ಕೋವಿಡ್ 19, ಒಮಿಕ್ರಾನ್ ರೂಪಾಂತರಿ, ಅಪ್ಪಳಿಸಿದ ಕೊರೋನಾ ಮೂರನೇ ಅಲೆ ಅಂತೆಲ್ಲ ಸುದ್ದಿಯಾಗುತ್ತ ಇಡೀ ಜಗತ್ತಿಗೇ ಬಣ್ಣ ಬಣ್ಣದ ಅಲಾರ್ಟ್ ಕೊಟ್ಟಂತೆ, ಕಳೆದ ನಾಲ್ಕು ವರ್ಷಗಳಿಂದ ಅಲೆ ಅಲೆಗಳಾಗಿ ಬಂದ ಅಡಿಕೆ ಎಲೆ ಚುಕ್ಕಿ ರೋಗವೂ ಮಲೆನಾಡು, ಕರಾವಳಿಗಳಲ್ಲಿ ಬಣ್ಣದ ಅಲಾರ್ಟ್‌ಕೊಟ್ಟು, ಆತಂಕಕಾರಿಯಾಗಿ ಹರಡುತ್ತಿದೆ. ಅಡಿಕೆ ಮರದ ಗರಿಗಳು ಹಳದಿ ಬಣ್ಣದ ಚುಕ್ಕಿ ಪಡೆದು, ಕ್ರಮೇಣ ಗರಿಗಳು ಒಣಗಿ ಗ್ರೇ ಬಣ್ಣಕ್ಕೆ ಬಂದು ಬಾಗುತ್ತಿವೆ. ಫಸಲಿಗೆ ಬಂದ, ಆದರೆ ಕಟಾವಿಗೆ ಪಕ್ವವಾಗಿರದ ಅಡಿಕೆ ಕಾಯಿಗಳು ಧರೆಗೆ ಉದುರುತ್ತಿದೆ.

ಪೂಜಾ ಸಾಮಗ್ರಿಯೊಂದಿಗೆ ತೋಟಕ್ಕೆ ಹೋಗಿ, ಭೂಮಿ ಹುಣ್ಣಿಮೆಯ ಭೂಮಿ ಪೂಜೆ ಮಾಡಿ, ಬೆರೆಕೆ ಸೊಪ್ಪಿನ ಪಲ್ಯವನ್ನು ಭೂ ತಾಯಿಯ ಮಡಿಲಿಗೆ ಅರ್ಪಿಸಿದ ರೈತ, ಎದೆ ಸೀಳಿ ಬೀಳುತ್ತಿರುವ ಅಡಿಕೆ ಕಾಯಿಗಳನ್ನು ನೋಡಿ ಕಣ್ಣೀರಿಡುತ್ತಿದ್ದಾನೆ. ಕಾರ್ಮೋಡದೊಂದಿಗೆ ಆಟವಾಡುತ್ತಿರುವ ಚಿತ್ತಾ ಮಳೆ ಅಡಿಕೆ ಬೆಳೆಗಾರನ ಚಿತ್ತ ಕೆಡಿಸಿದೆ.
ಜುಲೈ-ಆಗಷ್ಟ್‌ನಲ್ಲಿ ಬಿದ್ದ ಪುನರ್ವಸು, ಪುಷ್ಯ, ಆಶ್ಲೇಷಾ ಮಳೆಗಳು, ಬೋರ್ಡೋ ಸ್ಪ್ರೇ ಮಾಡಲೂ ಅವಕಾಶ ಕೊಡದಂತೆ ಬಂದು ಅಡಿಕೆಗೆ ಕೊಳೆ ರೋಗವನ್ನು ಹೆಚ್ಚಿಸಿತ್ತು. “ಮಘೆ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೆದು” ಎಂಬುದು ಮಲೆನಾಡಿನ ಗಾದೆ. ಈ ಬಾರಿ ಮಘೆ ಮಳೆ ಸರಾಸರಿಗಿಂತ ಹೆಚ್ಚು ಬಂದರೂ, ಒಳ್ಳೇದಾಗುವ ಬದಲು, ಕೊಳೆರೋಗ ಹೆಚ್ಚಾಗಿ, ಚಿಗುರು ಅಡಿಕೆ ಕಾಯಿಗಳು ಮಳೆ ಹನಿ ಬೀಳುವಂತೆ ಬೀಳುವುದಕ್ಕೆ ಶುರು ಮಾಡಿಸಿದೆ. ಅನೇಕ ರೈತರು ಮಳೆಯಲ್ಲಿ ಔಷಧಿ ಸ್ಪ್ರೇ ಮಾಡಿ, ಬೋರ್ಡೋ ದ್ರಾವಣದಲ್ಲಿ ಕೊಳೆ ಬಂದಿದ್ದ ಅಡಿಕೆ ಕೊನೆಗಳನ್ನು ಸ್ಯಾನಿಟೈಸ್ ಮಾಡುವ ಪ್ರಯತ್ನ ಮಾಡಿದರು!

ದಿನಾ ಜಿಬುಡು ಮಳೆ:

ಹೀಗೆ ಔಷಧಿ ಹೊಡೆದು, ಅನೇಕ ಅಡಿಕೆ ಬೆಳೆಗಾರರು ತೋಟದಲ್ಲಿ ‘ಮನೆ ಮಕ್ಕಳು ಉಣ್ಣೋದಕ್ಕೆ’ ಅಂತ ನಾಲ್ಕು ಅಡಿಕೆ ಕಾಯಿ ಉಳಿಸಿಕೊಂಡರು. ಆದರೆ ದುರಂತ, ಸೆಪ್ಟೆಂಬರ್‌ಗೆ ಮುಗಿಯಬೇಕಿದ್ದ ಮುಂಗಾರು ಮಳೆ ಮತ್ತೆರಡು ದಿನ ಇದ್ದು ಹೋಗುವ ಮನಸ್ಸು ಮಾಡಿದೆ. ನಿತ್ಯ ಮೋಡದ ವಾತಾವರಣ, ದಿನಾ ಜಿಬುಡು ಮಳೆ, ಆಗಾಗ ಮಂಜು-ಇಬ್ಬನಿ ಬೀಳುವಿಕೆಯಿಂದ ಅಡಿಕೆ ಎಲೆ ಚುಕ್ಕಿಯ ನಾಲ್ಕನೆ ಅಲೆ ಹೆಮ್ಮಾರಿಯಂತೆ ಮಲೆನಾಡು-ಕರಾವಳಿಯ ಅಡಿಕೆ ತೋಟಗಳಿಗೆ ಅಪ್ಪಳಿಸುತ್ತಿದೆ. ಅಡಿಕೆ ಕಾಯಿಗಳು ಉದುರುತ್ತಿದೆ. ರೈತರು ಕಂಗಾಲಾಗುತ್ತಿದ್ದಾರೆ. ಅಡಿಕೆ ತೋಟಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಎಲೆಚುಕ್ಕಿ ರೋಗ ಕಳೆದ ಮೂರು ವರ್ಷಗಳಿಗಿಂತ ಈ ವರ್ಷ ಈಗಾಗಲೇ ಹೆಚ್ಚಿನ ಡ್ಯಾಮೇಜ್ ಮಾಡಿದೆ. ಪತ್ರಿಕೆ, ಮಾಧ್ಯಮಗಳಲ್ಲಿ ಪ್ರತೀ ದಿನವೂ “ಇನ್ನೂ ಐದು ದಿನ ಸಾಧಾರಣ ಅಥವಾ ಬಾರೀ ಮಳೆ” ಎಂದು ಐದೈದು ದಿನದ ನಿರಂತರ ಮುನ್ಸೂಚನೆ ಕೊಡಲಾಗುತ್ತಿದೆ!

ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಸ್ತಿದ್ದನಂತೆ!

2022ರಲ್ಲಿ ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಇಸ್ರೇಲ್‌ನಿಂದ ವಿಜ್ಞಾನಿಗಳನ್ನು ಕರೆಸುತ್ತೇವೆ ಅಂತ ಕಾಗೆ ಹಾರಿಸಿದ್ದ ಅಂದಿನ ಸಚಿವರು, ಮೈ ಮೇಲೆ ಕ್ರಿಮಿನಲ್ ಕೆಸ್‌ಗಳ ಕಪ್ಪು ಚುಕ್ಕಿ ಹಾಕಿಕೊಂಡು ಬೆಯಿಲ್ ಮೇಲ್ ಇದಾರೆ! ಇವತ್ತು ಮಲೆನಾಡು-ಕರಾವಳಿಗಳಲ್ಲಿ ಕೊಲೆಟೋಟ್ರೈಕಮ್ ಫಂಗಸ್‌ಗಳು ತೋಟವನ್ನು ರಣರಂಗ ಮಾಡಿಕೊಂಡು, ತೋಟವನ್ನು ಎಲೆ ಚುಕ್ಕಿ ರೋಗದಿಂದ ರೋಮ್ ನಗರದ ರೀತಿ ಹತ್ತಿ ಉರಿಯುವಂತೆ ಮಾಡ್ತಾ ಇದ್ರೂ, ಕ್ಷೇತ್ರದ ಜನಪ್ರತಿನಿಧಿ ದೊರೆಗಳು ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಆಸಕ್ತಿ ತೋರದೆ (ಸಾಧ್ಯವೂ ಆಗದೆ) ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಊರು ಬಿಟ್ಟಂತೆ ಕಾಣಿಸುತ್ತಿದೆ. ರೈತರಿಗೆ ಪರಿಹಾರ, ಜನ ಸಂಪರ್ಕ-ಸಾಂತ್ವನ ಯಾವುದೂ ಇಲ್ಲ.

ಈ ಸುದ್ದಿಯನ್ನೈ ಓದಿ | Western Ghats: ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಭೂ ಕುಸಿತಕ್ಕೆ ಪಶ್ಚಿಮಘಟ್ಟದ ರೈತರು ಕಾರಣರೇ?

ಅಡಿಕೆ ಬೆಲೆ ಕುಸಿತ, ಅತಿವೃಷ್ಟಿ, ಕೊಳೆರೋಗ, ವಿದೇಶಿ ಅಕ್ರಮ ಅಡಿಕೆ ಆಮದು, ಅಡಿಕೆ ಹಳದಿ ರೋಗ, ಒತ್ತುವರಿ ತೆರವು ಭೂತ, ಕಸ್ತೂರಿ ರಂಗನ್ ವರದಿ ಜಾರಿ ಆತಂಕ, ಅಡಿಕೆ ಹಾನಿಕಾರಕ ಎಂಬಂತಹ ಎಲ್ಲ ಸಮಸ್ಯೆಗಳು ಪರಿಹಾರವಿಲ್ಲದೆ ನಿರಂತರ ಚಾಲ್ತಿಯಲ್ಲಿರುವಾಗ, ಈಗ ರೂಪಾಂತರಗೊಂಡ ಅಡಿಕೆ ಎಲೆಚುಕ್ಕಿ ರೋಗದ ಭೀಕರ ಅಲೆ, ಬಾಧೆ. ಶೃಂಗೇರಿ, ಕೊಪ್ಪ ಪ್ರಾಂತ್ಯಗಳಲ್ಲಿ ನಾಲ್ಕನೆ ಅಲೆಯ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಅಡಿಕೆ ಬೆಳೆಯ ಮೊರ್ಟಾಲಿಟಿ ರೇಟ್ (ಮರಣ ಪ್ರಮಾಣ) 60% ದಾಟಿದೆ ಅಂತ ವರದಿಯಾಗಿದೆ. ಒಟ್ಟಿನಲ್ಲಿ ಅಡಿಕೆ ಎಲೆಚುಕ್ಕಿ ರೋಗದ ಮತ್ತೊಂದು ಅಲೆಗೆ ಬೆಚ್ಚಿ ಬೀಳುತ್ತಿದೆ ಮಲೆನಾಡು-ಕರಾವಳಿ!