ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ, ವಸಂತರಾವ್ ನಾಯಕ್ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾಗಿದ್ದರು. ಅವರು ಆ ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಅಂದರೆ ಹನ್ನೆರಡು ವರ್ಷಗಳ ಕಾಲ (1963ರಿಂದ 1975) ಅಧಿಕಾರದಲ್ಲಿದ್ದರು.
ಒಮ್ಮೆ ಅವರು ಶಾಸ್ತ್ರಿಯವರನ್ನು ದಿಲ್ಲಿಯಲ್ಲಿ ಭೇಟಿಯಾದಾಗ ಅನೌಪಚಾರಿಕವಾಗಿ ಮಾತಾಡುತ್ತಾ, ‘ನೀವು ಮುಂಬೈಗೆ ಬಂದಾಗ ನಿಮ್ಮನ್ನು ಸಿನಿಮಾ ಶೂಟಿಂಗ್ ನಡೆಯುವ ತಾಣಕ್ಕೆ ಕರೆದುಕೊಂಡು ಹೋಗುತ್ತೇನೆ. ನೀವು ಅದನ್ನು ನೋಡಬೇಕು’ ಎಂದು ಹೇಳಿದರು. ಅದಕ್ಕೆ ಶಾಸ್ತ್ರಿಯವರು ಒಪ್ಪಿಕೊಂಡರು. ಅದಾಗಿ ನಾಲ್ಕು ತಿಂಗಳ ಬಳಿಕ, ಮೀನಾಕುಮಾರಿ, ಅಶೋಕ್ ಕುಮಾರ್, ರಾಜ್‌ಕುಮಾರ್ ಅಭಿನಯದ, ಕಮಲ್ ಅಮ್ರೋಹಿ ನಿರ್ದೇಶನದ ‘ಪಾಕೀಜಾ’ ಸಿನಿಮಾದ ಶೂಟಿಂಗ್ ನಡೆಯುತ್ತಿರುವುದು ವಸಂತರಾವ್ ನಾಯಕ್ ಅವರ ಗಮನಕ್ಕೆ ಬಂದಿತು.
ಆ ದಿನಗಳಲ್ಲಿ ಮೀನಾಕುಮಾರಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಆಕೆಯ ಅಭಿನಯದ ಸಿನಿಮಾ ಚಿತ್ರೀಕರಣ ವನ್ನು ಪ್ರಧಾನಿಯವರು ವೀಕ್ಷಿಸಲಿ ಎಂದು ನಾಯಕ್ ಅವರಿಗೆ ಅನಿಸಿತು. ನಾಯಕ್ ಅವರ ಒತ್ತಾಯಕ್ಕೆ ಪ್ರಧಾನಿಯವರು ಸಮ್ಮತಿಸಿದರು.
ದೇಶದ ಪ್ರಧಾನಿ ಸಿನಿಮಾ ಶೂಟಿಂಗ್ ವೀಕ್ಷಿಸಲು ಬರುತ್ತಾರೆಂದರೆ ಕೇಳಬೇಕೆ? ಹಿಂದಿ ಚಿತ್ರರಂಗದ ದಿಗ್ಗಜರು,
ಗಣ್ಯರು, ಪ್ರತಿಷ್ಠಿತ ವ್ಯಕ್ತಿಗಳೆಲ್ಲ ಹಾಜರಿದ್ದರು. ‘ಪಾಕೀಜಾ’ ಚಿತ್ರದ ನಾಯಕಿ ಮೀನಾಕುಮಾರಿ ಬಂದು, ಶಾಸ್ತ್ರಿಯವರಿಗೆ ಮಾಲಾರ್ಪಣೆ ಮಾಡಿದರು. ಅವರ ಪಕ್ಕದಲ್ಲಿ ಶಾಸ್ತ್ರಿಯವರ ಪತ್ರಿಕಾ ಕಾರ್ಯದರ್ಶಿ ಕುಲದೀಪ್ ನಯ್ಯರ್ ಇದ್ದರು. ಶಾಸ್ತ್ರಿಯವರು ನಯ್ಯರ್ ಅವರ ಕಿವಿಯಲ್ಲಿ, ‘ನನಗೆ ಮಾಲಾರ್ಪಣೆ ಮಾಡಿದ ಯುವತಿ ಯಾರು?’ ಎಂದು ಕೇಳಿದರು.
ನಯ್ಯರ್ ಮೆಲ್ಲಗೆ, ‘ಅವರೇ ಮೀನಾಕುಮಾರಿ…. ಮೀನಾಕುಮಾರಿ. ಈ ಚಿತ್ರದ ನಾಯಕಿ. ದೇಶದ ಖ್ಯಾತ
ಅಭಿನೇತ್ರಿ’ ಎಂದು ಉಸುರಿದರು. ಶಾಸ್ತ್ರಿಯವರ ಮುಖದಲ್ಲಿ ಯಾವ ಏರಿಳಿತಗಳೂ ಇರಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ನಯ್ಯರ್, ಮೀನಾಕುಮಾರಿ ನಟಿಸಿದ ಪ್ರಸಿದ್ಧ ಸಿನಿಮಾಗಳ ಹೆಸರುಗಳನ್ನು ಒಂದೊಂದಾಗಿ
ಮೆಲುದನಿಯಲ್ಲಿ ಹೇಳಿದರು.
ಆಗ ಶಾಸ್ತ್ರಿಯವರು, ‘ಸಾರಿ ಕುಲದೀಪ್, ನಾನು ಇಲ್ಲಿ ತನಕ ಯಾವ ಸಿನಿಮಾವನ್ನೂ ನೋಡಿಲ್ಲ. ನಾನು ಮೀನಾಕುಮಾರಿ ಹೆಸರನ್ನೂ ಕೇಳಿಲ್ಲ’ ಎಂದು ಮುಚ್ಚುಮರೆಯಿಲ್ಲದೇ ಹೇಳಿದರು. ಆ ಮಾತನ್ನು ಕೇಳಿ ನಯ್ಯರ್ ಆಶ್ಚರ್ಯಚಕಿತರಾದರು. ಅದಕ್ಕಿಂತ, ‘ನನಗೆ ಮಾಲಾರ್ಪಣೆ ಮಾಡಿದ ಮಹಿಳೆ ಯಾರು?’ ಎಂಬ ಪ್ರಶ್ನೆಯನ್ನು ಶಾಸ್ತ್ರಿಯವರು ಎಲ್ಲರ ಎದುರಿಗೇ ಕೇಳಬಹುದು ಎಂದು ನಯ್ಯರ್ ನಿರೀಕ್ಷಿಸಿರಲಿಲ್ಲ. ನಂತರ ಶಾಸ್ತ್ರಿಯವರ ಭಾಷಣ.
‘ಮೀನಾಕುಮಾರಿ ಅವರೇ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ಹೆಸರನ್ನು ಕೇಳಿದ್ದು ಇದೇ ಮೊದಲು. ನಿಮ್ಮನ್ನು ನೋಡಿದ್ದೂ ಇದೇ ಮೊದಲು. ನಾನು ಇಲ್ಲಿ ತನಕ ನನ್ನ ಜೀವನದಲ್ಲಿ ಒಂದೇ ಒಂದು ಸಿನಿಮಾವನ್ನೂ ನೋಡಿಲ್ಲ. ಮುಖ್ಯಮಂತ್ರಿಯವರ ಆಹ್ವಾನದ ಮೇರೆಗೆ ನಾನು ಚಿತ್ರೀಕರಣವನ್ನು ನೋಡಲು ಬಂದಿದ್ದೇನೆ’ ಎಂದು ಹೇಳಿದರು.
ಆ ದಿನಗಳಲ್ಲಿ ಮನೆಮಾತಾಗಿದ್ದ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಮೀನಾಕುಮಾರಿ,
ಶಾಸ್ತ್ರಿಯವರ ಮಾತಿನಿಂದ ಪೆಚ್ಚಾಗಿ ಹೋದರು. ಅವಮಾನ ದಿಂದ ಅವರ ಮುಖ ಬಿಳುಚಿಕೊಂಡಿತು. ಅದು ಶಾಸ್ತ್ರಿಯವರ ಅಜ್ಞಾನವಿರಬಹುದು, ಆದರೆ ಅವರ ಪ್ರಾಮಾಣಿಕತೆಗೆ ಸಭೆಯಲ್ಲಿದವರೆಲ್ಲ ಪ್ರಶಂಸೆ ವ್ಯಕ್ತಪಡಿಸಿದರು. ಸಾರ್ವಜನಿಕ ವಾಗಿ ಮೀನಾಕುಮಾರಿಗೆ ಕ್ಷಮೆಯಾಚಿಸಿದ ಪರಿ ಇನ್ನೂ ಇಷ್ಟವಾಗಿತ್ತು.
ಈ ವಿಷಯವನ್ನು ನಯ್ಯರ್ ತಮ್ಮ ’On Leaders and Icons: From Jinnah to Modi’’ ಕೃತಿಯಲ್ಲಿ ಬರೆದಿದ್ದಾರೆ. ‘ಶಾಸ್ತ್ರಿಯವರ ಅಜ್ಞಾನ ಮತ್ತು ಪ್ರಾಮಾಣಿಕತೆ ಕಂಡು ನಾನು ಬೆರಗಾದೆ’ ಎಂದೂ ಅವರು ಹೇಳಿದ್ದಾರೆ.
ಕೋಸಂಬರಿ ಕುರಿತು
ವಿಶೇಷ ಸಂದರ್ಭದಲ್ಲಿ ಊಟದಲ್ಲಿ ಕೋಸಂಬರಿ ಇರಬೇಕು ತಾನೇ? ಈಗಂತೂ ವೈದ್ಯರು ಕುರುಕಲು ತಿಂಡಿಯನ್ನು
ಸೇವಿಸುವ ಬದಲು, ಬಾಯಿ ಬೇಡಿದಾಗ, ಕೋಸಂಬರಿ ಸೇವಿಸಿ ಎಂದು ಹೇಳುವುದುಂಟು. ಕಾರಣ ಇದು ಆರೋಗ್ಯಕ್ಕೆ ಉತ್ತಮ ಮತ್ತು ಅದನ್ನು ಸೇವಿಸುವುದರಿಂದ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ. ಅಷ್ಟಕ್ಕೂ ಕೋಸಂಬರಿ ಒಂದು ಸಲಾಡ್. ಈ ಕೋಸಂಬರಿ ಹೆಸರಿನ ಮೂಲವೇನು? ಯಾವಾಗಿನಿಂದ ಈ ಹೆಸರು ಬಂತು? ಎಂಬ ಪ್ರಶ್ನೆ ಯನ್ನು ಯಾರೋ ’ಕೋರ’ ವೆಬ್ ಸೈಟಿನಲ್ಲಿ ಕೇಳಿದ್ದರು. ಅದಕ್ಕೆ ನಂದೀಶ್ ಎಚ್.ಎನ್. ಎಂಬುವವರು ಉತ್ತರಿಸಿದ್ದರು. ಅವರ ಪ್ರಕಾರ, ಸಂಸ್ಕೃತದ ಕುಸ್ತುಂಬರೀ/ಕುಸ್ತುಂಬುರು ಪದದ ಅರ್ಥ ಧನಿಯಾ ಗಿಡ. ಈ
ಪದ ಕನ್ನಡಕ್ಕೆ ಬಂದು, ಅದೇ ಅರ್ಥದ ಕೊತ್ತಂಬರಿ ಆಯಿತು.
ಆದರೆ ಇದೇ ಪದ ಮರಾಠಿಗೆ ಹೋದಾಗ, ಕೋಶಿಂಬೀರ್/ ಕೋಶಿಂಬರೀ/ಕೋಶಿಂಬೀರಿಕಾ ಎಂದು ಬದಲಾಯಿತು. ಅಷ್ಟೇ ಅಲ್ಲ, ಅದರ ಅರ್ಥವೂ ಸಲಾಡ್ ಅಥವಾ ಪಳಿದ್ಯ ಎಂದು ಬದಲಾಯಿತು. ಮರಾಠಿಯಿಂದ ಕನ್ನಡಕ್ಕೆ, ತಮಿಳಿಗೆ, ತುಳುಗೆ ಅದೇ ಅರ್ಥದಲ್ಲಿ ಬಂದದ್ದು ಕೋಸಂಬರಿ/ಕೋಸುಂಬರಿ/ ಕುಸುಂಬರಿ ಆಯಿತು.
ಕಿಟ್ಟೆಲ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು, ಮರಾಠಿ-ಕನ್ನಡ ನಿಘಂಟು, ಸಂಸ್ಕೃತ ನಿಘಂಟು,
ಮರಾಠಿ-ಹಿಂದಿ-ಇಂಗ್ಲಿಷ್ ನಿಘಂಟುಗಳಲ್ಲಿ ಸಹ ಕೋಸಂಬರಿ ಬಗ್ಗೆ ಪ್ರಸ್ತಾಪವಿದೆ. ಕಡಲೆಬೇಳೆ ಅಥವಾ ಹೆಸರು ಬೇಳೆಯನ್ನು ನೀರಲ್ಲಿ ನೆನಸಿ, ಸೌತೆಕಾಯಿ, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ನಿಂಬೆಹಣ್ಣಿನ ರಸ, ಉಪ್ಪು ಇವುಗಳನ್ನು ಕೂಡಿಸಿ ಒಗ್ಗರಣೆ ಹಾಕಿ ತಯಾರಿಸುವ ಒಂದು ಬಗೆಯ ತಿನಿಸೇ ಕೋಸುಂಬರಿ, ಕುಸುಂಬರಿ ಅಥವಾ ಕೋಸಂಬರಿ.
ಕೋಸಂಬರಿ ಒಂದು ಸಾಂಪ್ರದಾಯಿಕ ಸಲಾಡ್ ಕೂಡ ಹೌದು. ಇದರಲ್ಲಿ ಸಾಸಿವೆ, ಉದ್ದಿನಕೊತ್ತಂಬರಿ, ಈರುಳ್ಳಿ,
ತೆಂಗಿನಕಾಯಿ, ನಿಂಬೆ ರಸ ಮತ್ತು ಉಪ್ಪು ಸೇರಿಸಲಾಗುತ್ತದೆ. ಕೋಸಂಬರಿಯನ್ನು ಸಾಮಾನ್ಯವಾಗಿ ಊಟದೊಂದಿಗೆ
ಸೇವಿಸಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರ ಆಹಾರವಾಗಿದೆ. ಕೋಸಂಬರಿಯು ಹೆಸರು ಬೇಳೆ ಮತ್ತು
ತರಕಾರಿಗಳಿಂದ ತಯಾರವಾಗುವ ಕಾರಣ, ಇದರಲ್ಲಿ ಪ್ರೋಟೀನ್, ಕಬ್ಬಿಣ, ವಿಟಮಿನ್ ‘ಎ’ ಮತ್ತು ‘ಸಿ’ ಇತ್ಯಾದಿ
ಪೋಷಕಾಂಶಗಳಿದ್ದು, ಹಸಿವು ತಣಿಸಲು ಮತ್ತು ದೇಹಕ್ಕೆ ಪೋಷಣೆಯನ್ನು ಒದಗಿಸಲು ಸಹಾಯಕವಾಗಿದೆ. ಕೋಸಂಬರಿ ತಯಾರಿಸಲು, ಮೊದಲು ಬೇಳೆಯನ್ನು ನೆನೆಸಿ, ನಂತರ ಅದನ್ನು ಬೇಯಿಸಿ ತಣಿಸಿಕೊಳ್ಳಬೇಕು. ನಂತರ, ಸಾಸಿವೆ, ಉದ್ದಿನಕೊತ್ತಂಬರಿ, ಈರುಳ್ಳಿ, ತೆಂಗಿನಕಾಯಿ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೋಸಂಬರಿಯನ್ನು ತಣಿಸಿ ಸೇವಿಸಬೇಕು ಎಂಬ ವಿವರಗಳಿವೆ.
ಕೋಸಂಬರಿಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ಕೆಲವರು ಕೋಸಂಬರಿಗೆ ಕ್ಯಾರೆಟ, ಸೌತೆಕಾಯಿ, ಬೆಳ್ಳುಳ್ಳಿ ಅಥವಾ ಮೆಣಸಿನಕಾಯಿಯನ್ನೂ ಸೇರಿಸುತ್ತಾರೆ. ಕೋಸಂಬರಿಯನ್ನು ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಸೇವಿಸಲಾಗುತ್ತದೆ.
ಶಂಖಪಾಷಾಣ ಅಂದ್ರೆ ಏನು?
ಇತ್ತೀಚೆಗೆ ಓದುಗರೊಬ್ಬರು, Ask The Editor ಅಂಕಣಕ್ಕೆಂದು ‘ಶಂಖಪಾಷಾಣ ಎಂದರೆ ಏನು?’ ಎಂಬ ಪ್ರಶ್ನೆ ಕಳಿಸಿದ್ದರು. ಆದರೆ ಆ ಅಂಕಣದಲ್ಲಿ ಈ ಪ್ರಶ್ನೆ ಸೂಕ್ತವಾಗದ್ದರಿಂದ ಅದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ. ಅವರು ಆ ಪದದ ಅರ್ಥ ಕೇಳುವ ಬದಲು ಅದನ್ನು ಸೇವಿಸುವ ಬಗ್ಗೆ ಕೇಳಿದ್ದರೆ ಆ ಅಂಕಣದಲ್ಲಿಯೇ ಉತ್ತರಿಸುತ್ತಿz, ಇರಲಿ.
ನಾನು ಶಿರಸಿ ಸಮೀಪದ ಹೈಸ್ಕೂಲಿನಲ್ಲಿ ಓದುವಾಗ ನಮಗೆ ಎಸ್.ಪಿ.ಭಟ್ ಎಂಬ ಹೆಡ್ ಮಾಸ್ತರರಿದ್ದರು. ಅವರು ಸಂಸ್ಕೃತ ಪಾಠ ಮಾಡುತ್ತಿದ್ದರು. ಅವರ ಬಾಯಿಂದ ವಿಶೇಷ ಪದಗಳು ಉದುರುತ್ತಿದ್ದವು. ನಾವು ತಡವಾಗಿ ಕ್ಲಾಸಿಗೆ ಬಂದರೆ, ಗದರುತ್ತಿದ್ದರು. ‘ತಡವಾಗಿ ಬಂದಿದ್ದು ಯಾಕೆ?’ ಎಂದು ಕೇಳಿದರೆ, ನಾವು ತಲೆ ತಗ್ಗಿಸಿ ಸುಮ್ಮನೆ ನಿಂತಿರುತ್ತಿದ್ದೆವು.
‘ಏನ್ರಯ್ಯಾ, ಯಾಕೆ ತಡವಾಯ್ತು ಅಂತ ಬೊಗಳಿ, ಶಂಖಪಾಷಾಣ ಕುಡಿದವರಂತೆ ನಿಂತಿದ್ದೀರಲ್ಲ?’ ಎಂದು
ದಬಾಯಿಸುತ್ತಿದ್ದರು. ಆಗ ನನಗೆ ಶಂಖಪಾಷಾಣ ಪದದ ಅರ್ಥ ಗೊತ್ತಿರಲಿಲ್ಲ. (ಇಲಿ) ಪಾಷಾಣ ಅಂದ್ರೆ ವಿಷ ಎಂದಷ್ಟೇ ಗೊತ್ತಿತ್ತು. ಶಂಖಪಾಷಾಣ ಅಂದರೂ ಏನೋ ಒಂದು ರೀತಿಯ ವಿಷ ಇದ್ದಿರಬಹುದು ಎಂದು ಅಂದುಕೊಂಡಿದ್ದೆ. ಆ ಪಾಷಾಣಕ್ಕೆ ಶಂಖವೇಕೆ ಸೇರಿಕೊಂಡಿತು ಎಂಬುದನ್ನು ತಿಳಿಯುವ ಕುತೂಹಲವಿತ್ತು. ಆದರೆ ಹೆಡ್ ಮಾಸ್ತರರಿಂದ ಬೈಸಿಕೊಳ್ಳುವಾಗ ಆ ಪದದ ಅರ್ಥವನ್ನು ಹೇಗೆ ಕೇಳುವುದು? ಅದಾದ ಬಳಿಕ ಆ ಪದ ಮರೆತೇ ಹೋಗಿತ್ತು. ಕಾರಣ ನಂತರ ಯಾರೂ ಆ ಪದ ಬಳಸಿದ್ದನ್ನು ನಾನು ಓದಿರಲಿಲ್ಲ, ಕೇಳಿರಲಿಲ್ಲ.
ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿದ್ದಾಗ, ತಮ್ಮ ಅಂಕಣ ಬರಹವೊಂದರಲ್ಲಿ, ಶತಾವಧಾನಿ ಆರ್.ಗಣೇಶ್ ಅವರು ‘ಶಂಖಪಾಷಾಣ’ ಎಂಬ ಪದವನ್ನು ಬಳಸಿದ್ದರು. ನನಗೆ ಆಗ ಥಟ್ಟನೆ ನೆನಪಾದವರು ನನ್ನ ಹೆಡ್ ಮಾಸ್ಟರ್ ಎಸ್ .ಪಿ.ಭಟ್ಟರು. ನಾನು ಅದರ ಅರ್ಥವನ್ನು ತಿಳಿದುಕೊಳ್ಳಲು ಶತಾವಧಾನಿಗಳಿಗೆ ಫೋನ್ ಮಾಡಿದೆ. ಆ ದಿನಗಳಲ್ಲಿ ಅವರು ಮೊಬೈಲ್ ಬಳಸುತ್ತಿರಲಿಲ್ಲ. ಲ್ಯಾಂಡ್ ಲೈನ್‌ಗೆ ಸಂಪರ್ಕಿಸಿದಾಗ, ಅವರ ತಾಯಿ ಫೋನ್ ಎತ್ತಿಕೊಂಡರು.
‘ಗಣೇಶ್ ಹೊರಹೋಗಿದ್ದಾನೆ’ ಎಂದು ಹೇಳಿದರು. ನನಗೆ ನಿರಾಸೆಯಾಯಿತು. ನಂತರ ನಾನು ನಿಘಂಟು ತಜ್ಞ
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಸಂಪರ್ಕಿಸಿದೆ. ಅವರು ಸುಮಾರು ಹತ್ತು ನಿಮಿಷ ಆ ಪದದ ಅರ್ಥವನ್ನು ವಿವರಿಸಿದ್ದು ನನ್ನ ಕಿವಿಯಲ್ಲಿ ಶಂಖನಾದದಂತೆ ಮೊಳಗುತ್ತಿದೆ. ಶಂಖಪಾಷಾಣ ಎಂದರೆ ಆರ್ಸೆನಿಕ್ ಎಂಬ ರಾಸಾಯನಿಕ. ಇದು ಒಂದು ಲೋಹವಲ್ಲದ ಪದಾರ್ಥವಾಗಿದ್ದು, ಭೂಮಿಯ ಹೊರಪದರದಲ್ಲಿ ಸಾಮಾನ್ಯವಾಗಿ ಇತರ ಖನಿಜಗಳೊಂದಿಗೆ ಸಂಯೋಜನೆಯಾಗಿ ಕಂಡುಬರುತ್ತದೆ. ಆರ್ಸೆನಿಕ್ ತನ್ನ ವಿಷಕಾರಿ ಗುಣಲಕ್ಷಣಗಳಿಗೆ ಹೆಚ್ಚು ಪ್ರಸಿದ್ಧ. ಘನ ಸ್ಥಿತಿಯಲ್ಲಿ ಕಂಡುಬರುವ ಆರ್ಸೆನಿಕ್, ಬೆಳ್ಳಿಯ ಬಣ್ಣದಿಂದ ಕಪ್ಪು ಬಣ್ಣದವರೆಗೆ ವಿವಿಧ ಬಣ್ಣಗಳಲ್ಲಿ ಇರಬಹುದು.
ಆಯುರ್ವೇದ ರಸಶಾಸ್ತ್ರ ಗ್ರಂಥದಲ್ಲಿ ವಿಷಕ್ಕೆ ಶಂಖಪಾಷಾಣ, ಗೌರಿ ಪಾಷಾಣ ಎಂದೂ ಹೇಳಲಾಗಿದೆ. ಆರ್ಸೆನಿಕ್‌ನ ವಿಷಕಾರಿ ಗುಣದಿಂದ ಇಂದು ಅದನ್ನು ಔಷಧದಲ್ಲಿ ಬಳಸುವುದಿಲ್ಲ. ಇದನ್ನು ಕೀಟನಾಶಕಗಳು, ಗಾಜು, ಮರದ ಸಂರಕ್ಷಕಗಳು ಮತ್ತು ಅರೆವಾಹಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರ್ಸೆನಿಕ್ ಹೆಚ್ಚಿನ ಪ್ರಮಾಣದಲ್ಲಿರುವ ಪದಾರ್ಥಗಳನ್ನು ಸೇವಿಸಿದರೆ ವಾಂತಿ, ಹೊಟ್ಟೆ ನೋವು, ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯಕ್ತಿ ಸಾಯಲೂಬಹುದು. ಕೆಲವು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಆರ್ಸೆನಿಕ್ ಅಽಕ ಪ್ರಮಾಣದಲ್ಲಿ ಇರುತ್ತದೆ. ಜತೆಗೆ, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ಚಟುವಟಿಕೆಗಳಿಂದಾಗಿ ನೀರು ಮತ್ತು ಮಣ್ಣಿನಲ್ಲಿ ಆರ್ಸೆನಿಕ್ ಮಾಲಿನ್ಯ ಉಂಟಾಗ ಬಹುದು.
ಆರ್ಸೆನಿಕ್ ಮಾಲಿನ್ಯದಿಂದಾಗಿ ಮನುಷ್ಯರು ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ.
ಆರ್ಸೆನಿಕ್ ಅನ್ನು ‘ಕಿಂಗ್ ಆಫ್ ಪಾಯ್ಸನ್’ ಎಂದು ಕರೆಯುವುದುಂಟು. ವಿಚಿತ್ರ ಅಂದ್ರೆ ಇದನ್ನು ಕಾಯಿಸಿದಾಗ
ಕರಗುವುದಿಲ್ಲ. ಹಾಗಂತ ತಟ್ಟನೆ ಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ. ಇಂಗ್ಲಿಷ್ ಪದಕೋಶದಲ್ಲಿ Arsenic is a naturally occurring, toxic, semi metallic element that can be found in the Earth’s crust, air, water, and soil. It can also be released into the environment through industrial and agricultural processes, such as mining and metal smelting ಎಂದು ವಿವರಿಸಲಾಗಿದೆ. ಪಿರಿಯಾಡಿಕ್ ಟೇಬಲ್ (ಆವರ್ತಕ ಕೋಷ್ಟಕ) ನಲ್ಲಿ ಮೂವತ್ಮೂ ರನೇ ಸ್ಥಾನದಲ್ಲಿರುವ ಆರ್ಸೆನಿಕ್ As ಎಂದೇ ಪರಿಚಿತ.
ಪಾಷಾಣಕ್ಕೆ ವಿಷ ಎಂಬ ಅರ್ಥ ಇರುವಂತೆ, ಸಂಸ್ಕೃತ ಹಾಗೂ ಪ್ರಾಕೃತದಲ್ಲಿ ಪಾಷಾಣ ಅಂದ್ರೆ ಕಲ್ಲು, ಬಂಡೆ ಎಂಬ ಅರ್ಥವೂ ಇದೆ. ಶಂಖ ಎಂದರೆ ಸಮುದ್ರದಲ್ಲಿ ಸಿಗುವ, ಪೂಜಾಕಾರ್ಯಗಳಲ್ಲಿ ಬಳಸುವ, ವಾದ್ಯವಾಗಿ ಊದುವ,
ಒಂದು ವಿಶೇಷವಾದ ಶಂಖದ ಆಕಾರದ ವಸ್ತು. ಪಾಷಾಣ ಎಂದರೆ ಕಲ್ಲು ಅಥವಾ ಬಂಡೆ. ಶಂಖಪಾಷಾಣ ಎಂದರೆ ಶಂಖದ ಆಕಾರದ ಕಲ್ಲು ಅಥವಾ ಶಂಖದಂಥ ಗುಣಗಳನ್ನು ಹೊಂದಿರುವ ಕಲ್ಲು ಎಂದರ್ಥ. ಇದು ಆರ್ಸೆನಿಕ್ ರೂಪಕ್ಕೂ ಹೋಲುತ್ತದೆ. ‘ಪರರ ವಸ್ತು ಪಾಷಾಣ’ ಎನ್ನುವ ನಾಣ್ಣುಡಿಯನ್ನು ಕೇಳಿರಬಹುದು. ಅಂದರೆ ‘ಬೇರೆಯವರ ವಸ್ತು ಕೆಲಸಕ್ಕೆ ಬಾರದ ಕಲ್ಲು’ ಎಂದರ್ಥ.
ಪುರಾಣಗಳಲ್ಲಿ, ಶಂಖಪಾಷಾಣವನ್ನು ದೇವರುಗಳ ಆಯುಧ ಅಥವಾ ಅಲಂಕಾರವಾಗಿ ಚಿತ್ರಿಸಲಾಗಿದೆ. ವಿಷ್ಣು ತನ್ನ ಕೈಯಲ್ಲಿ ಶಂಖವನ್ನು ಹಿಡಿದಿರುವ ಚಿತ್ರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಶಂಖಪಾಷಾಣವನ್ನು ಧಾರ್ಮಿಕ ಆಚರಣೆಗಳಲ್ಲಿ ಶುಭ ಸಂಕೇತವಾಗಿ ಬಳಸಲಾಗುತ್ತದೆ. ಶಂಖವು ಜಯ, ವೈಭವ ಮತ್ತು ಶುದ್ಧತೆಯ ಸಂಕೇತವಾಗಿದ್ದರೆ, ಕಲ್ಲು ಸ್ಥಿರತೆ ಮತ್ತು ಅಚಲತೆಯ ಸಂಕೇತ.
ಇಂಡಿಯನ್ ಮತ್ತು ಬಿಹಾರಿ
ಇದು ಹಳೆಯ ಜೋಕಾದರೂ ಮರೆತುಹೋಗಿತ್ತು. ನಿಮಗೂ ಹಾಗೇ ಆಗಿದ್ದರೆ, ಇದನ್ನು ಮತ್ತೊಮ್ಮೆ ಸವಿಯ ಬಹುದು. ಲಾಲು ಪ್ರಸಾದ್ ಯಾದವ್ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನದ ಊಟವನ್ನು ನೀಡುವ ಸಮಯ ಬಂದಿತು. ಆಗ ಗಗನಸಖಿ ಲಾಲು ಸನಿಹ ಹೋಗಿ ಇಂಗ್ಲಿಷಿನಲ್ಲಿ ‘ನೀವು ವೆಜಿಟೇರಿಯನ್ನಾ ಅಥವಾ ನಾನ್ ವೆಜಿಟೇರಿಯನ್ನಾ?’ ಎಂದು ಕೇಳಿದಳು. ಅದಕ್ಕೆ ಲಾಲು ಯಾದವ್, ‘ನಾನು ಇಂಡಿಯನ್’ ಎಂದು ಹೇಳಿದರು. ಒತ್ತರಿಸಿ ಬಂದ ನಗುವನ್ನು ತಡೆದು, ಆಕೆ ಅದೇ ಪ್ರಶ್ನೆಯನ್ನು ಹಿಂದಿಯಲ್ಲಿ, ‘ಸರ್, ಆಪ್ ಶಾಕಾಹಾರಿ ಯಾ ಮಾಂಸಾಹಾರಿ?’ ಎಂದು ಕೇಳಿದಳು.
ಅದಕ್ಕೆ ಲಾಲು ಯಾದವ್ ಹೇಳಿದರು- ‘ನಾನು ನೂರಕ್ಕೆ ನೂರು ಬಿಹಾರಿ’.
ವಿಮಾನದ ಕಿಟಕಿಗಳೇಕೆ ಚಿಕ್ಕವು?
ವಿಮಾನದಲ್ಲಿ ನೂರಾರು ಸಲ ಪ್ರಯಾಣಿಸಿದವರಿಗೆ, ‘ವಿಮಾನದ ಕಿಟಕಿಗಳು ಚಿಕ್ಕದಾಗಿರುತ್ತವೆ, ಏನು ಕಾರಣ?’ ಎಂದು ಕೇಳಿ, ಉತ್ತರ ಗೊತ್ತಿರುವ ಸಾಧ್ಯತೆ ಕಮ್ಮಿ. ಈ ಪ್ರಶ್ನೆಗೆ ಉತ್ತರ ನನಗೂ ಗೊತ್ತಿರಲಿಲ್ಲ. ನಾನು ಆ ಕುರಿತು ಯೋಚಿಸಿರಲೇ ಇಲ್ಲ. ನನ್ನ ಮಗ ವಿವರಿಸಿದಾಗಲೇ ಗೊತ್ತಾಗಿದ್ದು. ವಿಮಾನವು ಎತ್ತರದಲ್ಲಿ ಹಾರುವಾಗ ಒಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಹೆಚ್ಚಾಗಿರುತ್ತದೆ. ದೊಡ್ಡ ಕಿಟಕಿಗಳಿದ್ದರೆ ಈ ಒತ್ತಡವನ್ನು ತಡೆದುಕೊಳ್ಳುವುದು ಕಷ್ಟ. ಅದು ಬಿರುಕು ಬಿಡುವ ಅಥವಾ ಒಡೆಯುವ ಸಾಧ್ಯತೆ ಹೆಚ್ಚು. ಚಿಕ್ಕ ಕಿಟಕಿಗಳು ದೊಡ್ಡ ಕಿಟಕಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ.
ಇದು ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ವಿಮಾನದ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೊಡ್ಡ ಕಿಟಕಿಗಳಿದ್ದರೆ ಅವುಗಳಿಂದ ಬರುವ ಹೊರಗಿನ ಬೆಳಕು ಮತ್ತು ಉಷ್ಣವೂ ಅಧಿಕ. ಚಿಕ್ಕ ಕಿಟಕಿಗಳು ವಿಮಾನದ ಒಳಗಿನ ಉಷ್ಣತೆಯನ್ನು ನಿಯಂತ್ರಿಸಲು ಸಹಾಯಕ. ವಿಮಾನದ ವಿನ್ಯಾಸದಲ್ಲಿ ಕಿಟಕಿಗಳ ಆಕಾರ ಮತ್ತು ಗಾತ್ರವು ಮುಖ್ಯ ಪಾತ್ರ ವಹಿಸುತ್ತದೆ. ಚಿಕ್ಕ ಕಿಟಕಿಗಳು ವಿಮಾನದ ಸಾಮಾನ್ಯ ವಿನ್ಯಾಸಕ್ಕೆ ಹೊಂದಿ ಕೊಳ್ಳುತ್ತವೆ. ಸರಳವಾಗಿ ಹೇಳುವುದಾದರೆ, ವಿಮಾನದ ಕಿಟಕಿಗಳು ಚಿಕ್ಕದಾಗಿರುವುದು ಸುರಕ್ಷತೆ, ದಕ್ಷತೆ ಮತ್ತು ವಿನ್ಯಾಸದ ಕಾರಣಗಳಿಂದಾಗಿ.
ಸಚೇತಕ ಕುರಿತು
ಮೊದಲ ಬಾರಿಗೆ ‘ರೌಂಡ್ ಟೇಬಲ್ ಕಾನ್ ಫರನ್ಸ್’ ನಡೆದಾಗ, ಕನ್ನಡದಲ್ಲಿ ಅದನ್ನು ಹೇಗೆ ಅನುವಾದಿಸುವುದು ಎಂಬ ಜಿಜ್ಞಾಸೆ ಮೂಡಿ, ಕೊನೆಗೆ ಸಿದ್ದವನಹಳ್ಳಿ ಕೃಷ್ಣ ಶರ್ಮ ಅವರು ‘ದುಂಡುಮೇಜಿನ ಸಭೆ, ದುಂಡುಮೇಜಿನ ಪರಿಷತ್ತು’ ಎಂದು ಟಂಕಿಸಿದರು. ಆ ಪದ ಈಗಲೂ ಬಳಕೆಯಲ್ಲಿದೆ. ಅದು ಮೂಲ ಆಂಗ್ಲಪದಕ್ಕಿಂತ ಹೆಚ್ಚು ಆಪ್ತವೆನಿಸು ವಂತಿದೆ.
Whip ಅಥವಾ Chief Whip ಪದಕ್ಕೆ ಸಚೇತಕ ಅಥವಾ ಮುಖ್ಯ ಸಚೇತಕ ಎಂದು ಯಾರು ಅನುವಾದ ಮಾಡಿದರೋ ಗೊತ್ತಿಲ್ಲ. ಇದೂ ಒಳ್ಳೆಯ ಅನುವಾದವೇ. ‘ಪದಾರ್ಥ ಚಿಂತಾಮಣಿ’ ಕೃತಿಯಲ್ಲಿ ಪಾ.ವೆಂ.ಆಚಾರ್ಯರು, ಸಚೇತಕ ಪದದ ಬಗ್ಗೆ ಹೀಗೆ ಬರೆದಿದ್ದಾರೆ- ಈ ಶಬ್ದವನ್ನು ಇಂಗ್ಲಿಷ್ ಭಾಷೆಯಲ್ಲಿ ರಾಜಕಾರಣದಲ್ಲಿ ಉಪಯೋಗಿಸುವ Whip ಎಂಬ ಅಧಿಕಾರವನ್ನು ಸೂಚಿಸಲು ಕನ್ನಡದಲ್ಲಿ ಅನುವಾದ ಮಾಡಿಕೊಂಡಿದ್ದಾರೆ. Whip ಎಂದರೆ ರಾಜಕೀಯ ಪಕ್ಷದಲ್ಲಿ ಶಿಸ್ತನ್ನು ಕಾಪಾಡುವುದಕ್ಕಾಗಿ ನೇಮಕಗೊಂಡ ಅಧಿಕಾರಿ ಎಂದರ್ಥ. ಅವನು ಸಮಯ ಬಂದಾಗ ರಾಜಕೀಯ ಪಕ್ಷದ ಎಲ್ಲ ಸದಸ್ಯರೂ ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು.
Whip ಶಬ್ದಕ್ಕೆ ಚಾವಟಿ ಎಂಬ ಅರ್ಥವೂ ಇದೆ. ಕುದುರೆಗಾಡಿಯನ್ನು ನಡೆಸುವವನು, ಕುದುರೆಯನ್ನು ಓಡಿಸುವ ಚಾವಟಿಯೂ ಆಗಬಹುದು. ಸಂಸ್ಕೃತದಲ್ಲಿಯೂ ಆ ಅರ್ಥವೇ ಇದೆ. ಚೈತನ್ಯವನ್ನುಂಟುಮಾಡುವ ಶಕ್ತಿಯುಳ್ಳವನು ಎಂದರ್ಥ. ಈ ಕಾರಣದಿಂದ ಆ ಶಬ್ದವನ್ನು ಅರ್ಥವತ್ತಾಗಿ ಆರಿಸಿದ್ದಾರೆ. ಅದು ರಾಜಕೀಯವಾಗಿಯೂ ಅರ್ಥವತ್ತಾಗಿದೆ.
ಇದನ್ನೂ ಓದಿ: Vishweshwar Bhat Column: ವಾಟರ್ ಲ್ಯಾಂಡಿಂಗ್ ಅಂದರೇನು ?