Friday, 22nd November 2024

Rakesh Tikait:‌ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ ನಡುವೆಯೇ ಸಲ್ಮಾನ್‌ ಖಾನ್‌ಗೆ ರಾಕೇಶ್‌ ಟಿಕಾಯತ್‌ನಿಂದ ಮಹತ್ವದ ಸಲಹೆ

Lawrence Bishnoi

ನವದೆಹಲಿ: ಕೃಷ್ಣ ಮೃಗ ಬೇಟೆ ಪ್ರಕರಣದ ನಂತರ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌(Bishnoi Gang) ಹಿಟ್‌ಲಿಸ್ಟ್‌ನಲ್ಲಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌(Salman Khan) ಕ್ಷಮೆಯಾಚಿಸಿದರೆ ಎಲ್ಲಾ ಸಮಸ್ಯೆ ಮುಗಿದುಬಿಡುತ್ತದೆ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌(Rakesh Tikait) ಅಭಿಪ್ರಾಯಪಟ್ಟಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಬಾಬಾ ಸಿದ್ದಿಕ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಮೂವರು ಶೂಟರ್‌ಗಳು ಗುಂಡಿಕ್ಕಿ ಹತ್ಯೆಗೈದಿರುವ ಪ್ರಕರಣದ ಬೆನ್ನಲ್ಲೇ ಟಿಕಾಯತ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಷ್ಣೋಯ್‌ ಗ್ಯಾಂಗ್‌ ಗೆ ಗೌರವ ತೋರುವುದು ಮತ್ತು ಅವರಲ್ಲಿ ಕ್ಷಮೆಯಾಚಿಸುವುದೊಂದೇ ಸಲ್ಮಾನ್‌ ಖಾನ್‌ಗೆ ಉಳಿದಿರುವ ಮಾರ್ಗ ಎಂದಿದ್ದಾರೆ.

ಇದು ಒಂದು ಸಮಾಜಕ್ಕೆ ಸಂಬಂಧಿಸಿದ ವಿಷಯ. ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ಕ್ಷಮೆಯಾಚಿಸಿ, ಇಲ್ಲದಿದ್ದರೆ ಜೈಲಿನಲ್ಲಿರುವ ವ್ಯಕ್ತಿ ನಿಮ್ಮ ಹತ್ಯೆಗೆ ಯಾವ ಹಂತಕ್ಕಾದರೂ ಹೋಗಲು ಸಿದ್ದನಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಒಬ್ಬ ಕೆಟ್ಟ ಮನುಷ್ಯ ಎಂದಯ ಟಿಕಾಯತ್‌ ಸಲ್ಮಾನ್‌ ಖಾನ್‌ ಅವರನ್ನು ಎಚ್ಚರಿಸಿದ್ದಾನೆ.

ಅಕ್ಟೋಬರ್‌ 12ರಂದು ಮಹಾರಾಷ್ಟ್ರದ ಎನ್.ಸಿ.ಪಿ. ಶಾಸಕ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದಾದ ನಂತರ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ಗೂ ಕೊಲೆ ಬೆದರಿಕೆ ಹಾಕಿದೆ. ಕ್ಷಮೆ ಕೇಳುವುದರ ಜತೆಗೆ 5 ಕೋಟಿ ರೂ. ನೀಡಬೇಕು, ಇಲ್ಲವಾದರೆ ಬಾಬಾ ಸಿದ್ಧಿಕಿಗಿಂತ ಹೀನಾಯವಾಗಿ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ. ಇದಾದ ಬಳಿಕ ಮುಂಬೈ ಪೋಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿ, ಬೆಂಗಾವಲು ಪಡೆಯನ್ನೂ ಕೂಡಾ ನೇಮಿಸಲಾಗಿದೆ. ಸಲ್ಮಾನ್‌ ಅವರ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನ್ಪಾಸದ ಚಟುವಟಿಕೆಗಳನ್ನು ನಿಯಂತ್ರಿಸಲು ಕಮಾಂಡೋ ಸೆಂಟರ್ ಕೂಡಾ ತೆರೆಯಲಾಗಿದೆ.

ಸಲ್ಮಾನ್‌ ಮೇಲೆ ಬಿಷ್ಣೋಯ್‌ಗೇಕೆ ವೈಷಮ್ಯ?

1995ರಲ್ಲಿ ಹಮ್‌ ಸಾಥ್‌ ಸಾಥ್‌ ಹೇ ಚಿತ್ರ ಶೂಟಿಂಗ್‌ ಸಮಯದಲ್ಲಿ ಸಲ್ಮಾನ್‌ ಖಾನ್‌ ಮತ್ತು ಇತರ ಸಹನಟರು ಕೃಷ್ಣ ಮೃಗವನ್ನು ಭೇಟೆಯಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಿಷ್ಣೋಯ್‌ ಸಮಾಜದ ಪವಿತ್ರವೆಂದು ಪರಿಗಣಿಸಲಾದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾದಾಗಿನಿಂದಲೂ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಮೇಲೆ ದ್ವೇಷ ಸಾಧಿಸುತ್ತಾ ಬಂದಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು. ಇದೀಗ ಮತ್ತೆ ಬೆದರಿಕೆ ಕರೆ ಬಂದಿದೆ.

60 ಬಾಡಿಗಾರ್ಡ್‌ಗಳ ಜತೆ ಬಿಗ್‌ ಬಾಸ್‌ಗೆ ಬಂದ ಸಲ್ಲು

ಬಾಬಾ ಸಿದ್ಧಕಿ ಹತ್ಯೆ ಬಳಿಕ ಸಲ್ಮಾನ್‌ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ 18ರ ಆವೃತ್ತಿಯ ಶೂಟಿಂಗ್‌ಗೆ ಕೂಡ ಬಿಗಿ ಭದ್ರತೆಯಲ್ಲಿ ಸಲ್ಮಾನ್‌ ಖಾನ್‌ 60 ಬಾಡಿಗಾರ್ಡ್‌ಗಳ ಜತೆ ಬಂದಿದ್ದರು. ಸಂಪೂರ್ಣ ಸುರಕ್ಷತೆಯಲ್ಲಿ ಶೂಟಿಂಗ್‌ ನಡೆಸಿದ್ದಾರೆ. ಶೂಟಿಂಗ್‌ ನಡೆಯುವ ಒಂದು ದಿನ ಮೊದಲೇ ಸ್ಥಳ ಪರೀಕ್ಷೆ ಮಾಡಲಾಗಿತ್ತು ಹಾಗೂ ಶೂಟಿಂಗ್‌ ಸೆಟ್‌ ಒಳಗಡೆ ಬರುವರಿಗೆ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಬಾಬಾ ಸಿದ್ಧಿಕಿ ಜತೆಗೆ ಸಲ್ಮಾನ್‌ ಖಾನ್‌ ಆತ್ಮೀಯ ಸಂಬಂಧ ಹೊಂದಿದ್ದರು.

ಈ ಸುದ್ದಿಯನ್ನೂ ಓದಿ: Lawrence Bishnoi Interview‌: ಜೈಲಿನಿಂದಲೇ ಬಿಷ್ಣೋಯ್‌ ಸಂದರ್ಶನ; ಇಬ್ಬರು DySP ಸೇರಿ 7 ಪೊಲೀಸರು ಸಸ್ಪೆಂಡ್‌!