Saturday, 23rd November 2024

IND vs NZ 3rd Test: ಮುಂಬೈ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶ?

ಮುಂಬಯಿ: ಪ್ರವಾಸಿ ನ್ಯೂಜಿಲೆಂಡ್‌(IND vs NZ 3rd Test) ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ಸತತ 2 ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿರುವ ಭಾರತ ಅಂತಿಮ ಪಂದ್ಯವನ್ನು ನವೆಂಬರ್‌ 1ರಂದು ಮುಂಬೈಯ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ(Wankhede Stadium) ಆಡಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಮತ್ತು ವೈಟ್‌ವಾಶ್‌ ಮುಖಭಂಗ ತಪ್ಪಿಸುವ ನಿಟ್ಟಿನಲ್ಲಿ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಹೀಗಾಗಿ ಮುಂಬೈ ಟೆಸ್ಟ್‌ ಆಡುವ ಬಳಗದಲ್ಲಿ ಬದಲಾವಣೆ ಖಚಿತ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ 2012 ರಿಂದ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ನವೆಂಬರ್ 2012 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಭಾರತ ಟೆಸ್ಟ್ ಸರಣಿ ಸೋತಿತ್ತು. ಆ ಬಳಿಕ ಭಾರತ 2013ರಲ್ಲಿ ವೆಸ್ಟ್ ಇಂಡೀಸ್, 2016ರಲ್ಲಿ ಇಂಗ್ಲೆಂಡ್ ಹಾಗೂ 2021ರಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಭಾರತ ಇಲ್ಲಿ 26 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 12ರಲ್ಲಿ ಗೆಲುವು, 7ರಲ್ಲಿ ಸೋಲು, 7 ಪಂದ್ಯಗಳು ಡ್ರಾ ಆಗಿವೆ.

ಭಾರತ ಮತ್ತು ಕಿವೀಸ್‌ ತಂಡಗಳು ಇದುವರೆಗೆ ಇಲ್ಲಿ ಒಟ್ಟು ಮೂರು ಬಾರಿ ಟೆಸ್ಟ್‌ ಆಡಿದೆ. ಮೊಟ್ಟ ಮೊದಲ ಬಾರಿಗೆ ಮುಖಾಮುಖಿಯಾದದ್ದು 1976ರಲ್ಲಿ ಈ ಪಂದ್ಯವನ್ನು ಭಾರತ 162 ರನ್‌ ಅಂತರದಿಂದ ಗೆದ್ದಿತ್ತು. 2ನೇ ಮುಖಾಮುಖಿ 1988ರಲ್ಲಿ ಈ ಪಂದ್ಯವನ್ನು ಕಿವೀಸ್‌ 136 ರನ್‌ ಅಂತರದಿಂದ ಜಯಿಸಿತ್ತು. ಮೂರನೇ ಬಾರಿಗೆ ಆಡಿದ್ದು 2021ರಲ್ಲಿ. ಈ ಪಂದ್ಯದಲ್ಲಿ ಕಿವೀಸ್‌ನ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಇನ್ನಿಂಗ್ಸ್‌ ಒಂದರ ಎಲ್ಲ 10 ವಿಕೆಟ್‌ ಉರುಳಿಸಿದ್ದರು. ಆದರೂ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ 372 ರನ್‌ ಅಂತರದ ಸೋಲು ಕಂಡಿತ್ತು.

ಇದನ್ನೂ ಓದಿ IND vs NZ 2nd Test: ಸಿಕ್ಸರ್‌ ಮೂಲಕ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ರಾಹುಲ್‌ಗೆ ಅವಕಾಶ

ಬಾಂಗ್ಲಾದೇಶ ಮತ್ತು ಕಿವೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ ಪ್ರದಶರ್ಶನ ತೋರಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನು ದ್ವಿತೀಯ ಟೆಸ್ಟ್‌ಗೆ ಆಡುವ ಬಳಗದಿಂದ ಕೈ ಬಿಡಲಾಗಿತ್ತು. ಇದೀಗ ಮೂರನೇ ಟೆಸ್ಟ್‌ನಲ್ಲಿ ಅವರಿಗೆ ಮತ್ತೆ ಅವಕಾಶ ನೀಡುವ ಸಾಧ್ಯತೆ ಇದೆ. ಆಸೀಸ್‌ ವಿರುದ್ಧದ ಪ್ರವಾಸಕ್ಕೂ ಮುನ್ನ ಭಾರತ ಆಡುವ ಕೊನೆಯ ಟೆಸ್ಟ್‌ ಇದಾಗಿದ್ದು ಆಸೀಸ್‌ ಪಿಚ್‌ನಲ್ಲಿ ಅನುಭವಿ ಆಟಗಾರರು ಆಡಬೇಕಿರುವ ಕಾರಣ ಸರ್ಫರಾಜ್‌ ಕೈಬಿಟ್ಟು ಈ ಸ್ಥಾನದಲ್ಲಿ ರಾಹುಲ್‌ ಕಣಕ್ಕಿಳಿಯಬಹುದು. ಪಂತ್‌ ಮತ್ತು ಬುಮ್ರಾ ಕೂಡ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಸ್ಪಿನ್‌ ವಿಭಾಗದಲ್ಲಿ ಅಶ್ವಿನ್‌ಗೆ ವಿಶ್ರಾಂತಿ ನೀಡಿ ಅವರ ಬದಲಿಗೆ ಅಕ್ಷರ್‌ ಪಟೇಲ್‌ ಆಡಬಹುದು. ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ಕೂಡ ಮಾಡಬಲ್ಲ ಸಾಮರ್ಥ್ಯ ಇರುವ ಕಾರಣ ಹೆಚ್ಚುವರಿ ಬ್ಯಾಟಿಂಗ್‌ ಆಯ್ಕೆ ಕೂಡ ತಂಡಕ್ಕೆ ಲಭಿಸಿದಂತಾಗುತ್ತದೆ. ಜಡೇಜಾ ಬದಲಿಗೆ ಕುಲ್‌ದೀಪ್‌ ಆಡಿದರೂ ಅಚ್ಚರಿಯಿಲ್ಲ.