Friday, 22nd November 2024

David Warner: ವಾರ್ನರ್‌ಗೆ ಜನ್ಮದಿನದ ಶುಭ ಕೋರಿದ ಅಲ್ಲು ಅರ್ಜುನ್‌

ಹೈದರಾಬಾದ್‌: ಆಸ್ಟ್ರೇಲಿಯಾ ತಂಡದ ಮಾಜಿ ಸ್ಫೋಟಕ ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ಗೆ(David Warner) ಇಂದು 37ನೇ ಜನ್ಮದಿನದ ಸಂಭ್ರಮ. ಈ ನಿಟ್ಟಿನಲ್ಲಿ ಅವರ ಅಭಿಮಾನಿಗಳು, ಸಹ ಆಟಗಾರರು ಶುಭ ಹಾರೈಸಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಸ್ಟಾರ್‌ ನಟ ಅಲ್ಲು ಅರ್ಜುನ್‌(Allu Arjun) ಕೂಡ ವಾರ್ನರ್‌ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಹಾಕಿರುವ ಅಲ್ಲು ಅರ್ಜುನ್‌ ʼಹುಟ್ಟು ಹಬ್ಬದ ಶುಭಾಶಯಗಳು ಸಹೋದರʼ ಎಂದು ಹಾರೈಸಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗಿದೆ. ವಾರ್ನರ್‌ ಅವರು ಅಲ್ಲು ಅರ್ಜುನ್‌ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅಲ್ಲು ಅರ್ಜುನ್‌ ನಟನೆಯ ಪುಷ್ಪ ಸಿನೆಮಾದ ಡೈಲಾಗ್‌ ಮತ್ತು ಹಾರಿಗೆ ವಾರ್ನರ್‌ ಆಗಾಗ ತಮ್ಮ ಮುಖವನ್ನು ಮಾರ್ಫ್ ಮಾಡಿ ವಿಡಿಯೊ ಹಂಚುಕೊಳ್ಳುತ್ತಿರುತ್ತಾರೆ. ಐಪಿಎಲ್‌ ಆಡುವ ವೇಳೆ ಅವರು ಮೈದಾನದಲ್ಲಿ ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್” ಎಂದು ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿ ಡೈಲಾಗ್​ ಹೊಡೆದಿದ್ದರು. ಹೀಗಾಗಿ ಅಲ್ಲು ಅರ್ಜುನ್‌ಗೂ ವಾರ್ನರ್‌ ಎಂದರೆ ಅಚ್ಚುಮೆಚ್ಚು. ಇದೇ ಕಾರಣದಿಂದ ಅವರು ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಏಪ್ರಿಲ್ 7 ರಂದು ಅಲ್ಲು ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಂಡ ಪುಷ್ಪ-2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದರಲ್ಲಿ ಅಲ್ಲು ಅರ್ಜುನ್​ ವಿಚಿತ್ರ ಶೈಲಿಯ ಆಭರಣಗಳು ಮತ್ತು ಸೀರೆಯೊಂದಿಗೆ ಪೋಸ್ ನೀಡಿದ್ದರು. ಅದೇ ರೂಪದಲ್ಲಿ ಅಂದು ವಾರ್ನರ್​ ಕೂಡ ಕಾಣಿಸಿಕೊಂಡಿದ್ದರು. ವಾರ್ನರ್ ಅವರ ಈ ಪೋಸ್ಟ್ ಕಂಡ ಅವರ ಅಭಿಮಾನಿಗಳು ನೀವು ಹೈದರಾಬಾದ್‌ಗೆ ಬಂದು ಪುಷ್ಪ-2 ಚಿತ್ರದಲ್ಲಿ ನಟಿಸಿ ಎಂದು ಹೇಳಿದ್ದರು. ಕೆಲ ವರದಿಗಳ ಪ್ರಕಾರ ವಾರ್ನರ್‌ ಪುಷ್ಪ-2 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಗಿತಿ ಇದುವರೆಗೆ ಲಭ್ಯವಾಗಿಲ್ಲ.

ಇದನ್ನೂ ಓದಿ ವೇಗದ ಅರ್ಧಶತಕ: ವಾರ್ನರ್‌ ಜತೆ ಸ್ಥಾನ ಹಂಚಿಕೊಂಡ ಮಿಸ್ಟರ್‌ 360

2024ರ ಜನವರಿ 01ರಂದು ಡೇವಿಡ್​ ವಾರ್ನರ್​ ಏಕದಿನ ಮಾದರಿ, ಜನರಿ 06ರಂದು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡಿಸ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಸೀಸ್‌ ತಂಡ ಸೋತ ಬೆನ್ನಲ್ಲೇ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ ಒಂದು ಶತಕ, 28 ಅರ್ಧಶತಕ ಒಳಗೊಂಡಂತೆ 3277 ರನ್​ ಸಿಡಿಸಿದ್ದಾರೆ.ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ 161 ಪಂದ್ಯಗಳನ್ನು ಆಡಿರುವ ವಾರ್ನರ್​ 33 ಅರ್ಧಶತಕ, 22 ಶತಕ ಒಳಗೊಂಡಂತೆ 6932 ರನ್ ಕಲೆಹಾಕಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ 112 ಪಂದ್ಯಗಳನ್ನು ಆಡಿರುವ ವಾರ್ನರ್​ 26 ಶತಕ, 37 ಅರ್ಧಶತಕ ಒಳಗೊಂಡಂತೆ 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಆಸ್ಟ್ರೇಲಿಯಾ ಪರ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹಿರಿಮೆಯೂ ಇವರದ್ದಾಗಿದೆ.