Saturday, 23rd November 2024

Tumkur News: ಕಮಲ‌ ಹಂಪನಾ ಬಹುತ್ವದ ಪ್ರತಿಪಾದಕಿಯಾಗಿದ್ದರು

ತುಮಕೂರು: ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಪ್ರೊ.ಕಮಲ ಹಂಪನಾ, ಭಾರತೀಯ ಸಂಸ್ಕೃತಿಯ ಮೂಲಬೇರಾದ ಬಹುತ್ವದ ಪ್ರತಿಪಾದಕಿಯಾಗಿದ್ದರು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮ ಶಿವಮೂರ್ತಿ ಪ್ರಶಂಸಿಸಿದರು.

ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಅಯೋಜಿಸಿದ್ದ ನಾಡೋಜ ಪ್ರೊ.ಕಮಲ ಹಂಪನಾ ನುಡಿನಮನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು,ಓರ್ವ ಸಂಶೋಧಕಿಯಾಗಿ, ಕಥೆಗಾರತಿಯಾಗಿ, ವಿಮರ್ಶಕಿ ಯಾಗಿ, ವೈಚಾರಿಕ ಲೇಖಕಿಯಾಗಿ ಅವರ ಬರಹಗಳಲ್ಲಿ ಬಹುತ್ವದ ಅಂಶಗಳನ್ನು ಕಾಣಬಹುದು. ಅವರ ಸಾಹಿತ್ಯ ಪ್ರಮುಖ ಧನಾತ್ಮಕ ಅಂಶ ಇದಾಗಿದೆ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ ಮಾತನಾಡಿ,ಪ್ರೊ.ಕಮಲ ಹಂಪನಾ ಸಂಬಂಧದಲ್ಲಿ ನನಗೆ ಚಿಕ್ಕಮ್ಮನಾಗ ಬೇಕು. ಚಿಕ್ಕಂದಿನಿಂದಲೂ ಅವರನ್ನು ಬಲ್ಲೆ,ಮಹಿಳೆಯರನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿ ಇತ್ತು. ಅವರ ಸಾಂಸಾರಿಕ ಕಲ್ಪನೆ ಆಗಾಧವಾದುದ್ದು, ಬರೆದಂತೆ ಬದುಕಿದವರು ಕಮಲ ಹಂಪನಾ ಎಂದರು.

ನಾಡೋಜ ಹಂಪಾ ನಾಗರಾಜಯ್ಯ ಮಾತನಾಡಿ,ತುಮಕೂರು ನನ್ನ ಬದುಕಿಗೆ ಮಹತ್ವದ ತಿರುವುಕೊಟ್ಟ ಸ್ಥಳ. ಕಮಲ ಅವರ ಸ್ನೇಹದೊಂದಿಗೆ ಆರಂಭಗೊಂಡು 63 ವರ್ಷಗಳ ದಾಂಪತ್ಯ ಜೀವನ ಅವಿಸ್ಮರಣೀಯ.ಕೌಟುಂಬಿಕ ಕೆಲಸಗಳ ಜತೆಗೆ, ವೃತ್ತಿಯಲ್ಲಿಯೂ ಒಳ್ಳೆಯ ಹೆಸರುಗಳಿಸಿದ್ದರು. ಮಹಿಳಾ ವಿವಿ ಸ್ಥಾಪನೆ, ಅತಿಮಬ್ಬೆ ಪ್ರಶಸ್ತಿ ಸ್ಥಾಪನೆಯ ಹಿಂದೆ ಕಮಲ ಅವರ ಹೋರಾಟವಿದೆ. ಬದುಕಿನುದ್ದಕ್ಕೂ ಧ್ವನಿ ಇಲ್ಲದವರ ಮುಖವಾಣಿಯಾಗಿ ಬದುಕಿದ್ದ ಕಮಲ,ಬದುಕು ಮತ್ತು ಬರಹದ ಮೂಲಕ ಘನತೆಯನ್ನು ಕಾಪಾಡಿಕೊಂಡು ಇತರರಿಗೆ ಮಾದರಿಯಾಗಿ ದ್ದಾರೆ. ನುಡಿನಮನ ತವರು ಮನೆಯವರು ನೀಡುವ ಉಡುಗೊರೆಯಂತಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ,ಪ್ರೊ.ಕಮಲ ಹಂಪನಾ ನನ್ನಂತಹ ಅನೇಕ ಲೇಖಕಿ ಯರಿಗೆ ಉತ್ತಮ ಮಾರ್ಗದರ್ಶಕಿಯಾಗಿದ್ದಾರೆ.ಎಲ್ಲರನ್ನು ಪ್ರೀತಿಸುವ ಅವರ ಗುಣ ಮೆಚ್ಚುವಂತಹದ್ದು, ತುಮಕೂರಿ ನಲ್ಲಿ ನಡೆದ ಮೊದಲ ಕನ್ನಡ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ನಮಗೆ ಮಾರ್ಗದರ್ಶನ ನೀಡಿ, ಯಶಸ್ವಿ ಯಾಗಲು ಕಾರಣರಾದವರು. ಅವರ ವಚನಗಳು ಡಿವಿಜಿಯವರ ಮಂಕುತಿಮ್ಮನ ಖಗ್ಗಕ್ಕೆ ಸಮನಾಗಿ ನಿಲ್ಲಬಲ ವಚನಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ , ನಾಗರಾಜ್ ಜೈನ್, ಬಾಹುಬಲಿ ಬಾಬು,ಕಸಾಪ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ,ಮಹದೇವಪ್ಪ, ಉಮಾಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur News: ಚಂದ್ರಯಾನ-3 ಉಡ್ಡಯನದ ನಂತರ ಇಸ್ರೋ ಸಾಧನೆ ಮಾಡಿದೆ