Sunday, 27th October 2024

Chowkidar Movie: ʼಚೌಕಿದಾರ್ʼ ಚಿತ್ರದಲ್ಲಿ ʼಚೈತ್ರದ ಪ್ರೇಮಾಂಜಲಿʼ ಖ್ಯಾತಿಯ ಶ್ವೇತಾ; 20 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

Chowkidar Movie

ಬೆಂಗಳೂರು: ʼಚೈತ್ರದ ಪ್ರೇಮಾಂಜಲಿʼ, ʼಕರ್ಪೂರದ ಗೊಂಬೆʼ, ʼಲಕ್ಷ್ಮೀ ಮಹಾಲಕ್ಷ್ಮೀʼ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ (Swetha) ಬರೋಬ್ಬರಿ 20 ವರ್ಷಗಳ ನಂತರ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ್ದಾರೆ.

ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂದೂ ಕರೆಯಲ್ಪಡುವ ಅವರು ಕನ್ನಡದಲ್ಲಿ ಶ್ವೇತಾ ಎಂದೇ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಝೀ ಕನ್ನಡದ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಮೂಲಕ ನಟನೆಗೆ ಮರಳಿರುವ ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ʼಚೌಕಿದಾರ್ʼ ಸಿನಿಮಾಕ್ಕೆ ಶ್ವೇತಾ ಎಂಟ್ರಿ ಕೊಟ್ಟಿದ್ದಾರೆ.

ವಿವಿಧ ಭಾಷೆಗಳಲ್ಲಿ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿದ್ದ ಶ್ವೇತಾ 2003ರಲ್ಲಿ ತೆರೆಕಂಡ ‘ಕುಟುಂಬ’ ಸಿನಿಮಾದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ನಟನೆಗೆ ಮರಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಸಣ್ಣ ಪರದೆಯ ಮೂಲಕ ಮತ್ತೆ ಆರಂಭಿಸಿದ್ದು, ಇದೀಗ ಬಹಳ ಇಷ್ಟಪಟ್ಟು ʼಚೌಕಿದಾರ್ʼ ಸಿನಿಮಾ ಒಪ್ಪಿಕೊಂಡಿದ್ದಾರೆ. ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಶ್ವೇತಾ ಈಗ ಲಾಂಗ್ ಗ್ಯಾಪ್ ಬಳಿಕ ಸಿನಿಮಾ ಒಪ್ಪಿಕೊಂಡಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ಪ್ರೀತಿ-ಪ್ರೇಮದಂತಹ ಕಥೆಯಲ್ಲಿ ಅಭಿನಯಿಸಿದ್ದ ಪೃಥ್ವಿ ಅಂಬಾರ್ ʼಚೌಕಿದಾರ್ʼ ಮೂಲಕ ರಗಡ್ ಅವತಾರ ತಾಳಿದ್ದಾರೆ. ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಕ್ಕಿ ತರುವ ಚಂದ್ರಶೇಖರ್ ಬಂಡಿಯಪ್ಪ‌ ಈ ಬಾರಿ ಕೂಡ ಫ್ರೆಶ್ ಕಥೆಯೊಂದಿಗೆ ಹಾಜರಾಗಿದ್ದಾರೆ. ಧನ್ಯರಾಮ್ ಕುಮಾರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ತುಂಬಾ ದಿನಗಳ ಬಳಿಕ ಹಿರಿಯ ನಟ ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀಮುರಳಿ ಅಭಿನಯದ ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಬಹಳ ದಿನಗಳ ಗ್ಯಾಪ್‌ ನಂತರ ಈ ಚಿತ್ರ ಕೈಗೆತ್ತಿಕೊಂಡಿರುವುದು ಕೂಡ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ʼಚೌಕಿದಾರ್ʼ ಸಿನಿಮಾವನ್ನು ಇತ್ತೀಚೆಗೆ 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಶಿವಣ್ಣ ನಟನೆಯ ʼಅಂಡಮಾನ್ʼ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ಆಗಿತ್ತು. ಈ ಚಿತ್ರ ಹೊರತುಪಡಿಸಿ ಮತ್ಯಾವುದೆ ಕನ್ನಡ ಸಿನಿಮಾಗಳ ಶೂಟಿಂಗ್ ನಡೆದಿರಿಲ್ಲ. ಇದೀಗ ʼಚೌಕಿದಾರ್ʼ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಬರೋಬ್ಬರಿ 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿದಿರುವುದು ವಿಶೇಷ. 53 ದಿನಗಳ ಕಾಲ ಚಿತ್ರೀಕರಣ ನಡೆಯಲಿರುವ ʼಚೌಕಿದಾರ್ʼ ಸಿನಿಮಾದ ಮೊದಲ ಹಂತ ಈಗಾಗಲೇ ಪೂರ್ತಿಯಾಗಿದೆ.

ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಡುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಕ್ಯಾಮೆರಾ, ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಮಾಡುತ್ತಿದ್ದಾರೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ಮೂಡಿ ಬರುತ್ತಿದೆ. ಶಿಕ್ಷಣತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ತಮ್ಮದೇ ವಿ.ಎಸ್.ಎಂಟರ್‌ಟೈನ್‌ಮೆಂಟ್‌ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Maarnami Movie: ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್-ಚೈತ್ರಾ ಆಚಾರ್; ‘ಮಾರ್ನಮಿ’ ಟೈಟಲ್ ಟೀಸರ್ ಔಟ್‌