Sunday, 27th October 2024

Radha Yadav: ಹಕ್ಕಿಯಂತೆ ಹಾರಿ 2 ಅದ್ಭುತ ಕ್ಯಾಚ್‌ ಹಿಡಿದ ರಾಧಾ ಯಾದವ್‌; ಇಲ್ಲಿದೆ ವಿಡಿಯೊ

ಅಹಮದಾಬಾದ್‌: ಭಾರತದ ಎಡಗೈ ಸ್ಪಿನ್‌ ಆಲ್‌ರೌಂಡರ್‌ ರಾಧಾ ಯಾದವ್‌(Radha Yadav) ಅದ್ಭುತ ಫೀಲ್ಡರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಮಹಿಳಾ ಏಕದಿನ ಪಂದ್ಯದಲ್ಲಿ ಅವರು ಹಿಡಿದ 2 ಕ್ಯಾಚ್‌ಗಳು ಈಗ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದೆ.

ಆರಂಭದಲ್ಲಿ ಕಿವೀಸ್‌ನ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲಿಮ್ಮರ್ ಅವರ ಫ್ಲೈಯಿಂಗ್ ಕ್ಯಾಚ್‌ ಹಿಡಿದು ಎಲ್ಲರನ್ನು ದಿಗ್ಭ್ರಮೆಗೊಳಿಸಿದ ಕೆಲವೇ ಕ್ಷಣದಲ್ಲಿ ಇದಕ್ಕಿಂತಲೂ ಅದ್ಭುತ ಕ್ಯಾಚೊಂದನ್ನು ಹಿಡಿದು ಗಮನಸೆಳೆದರು. ಅವರ ಕ್ಯಾಚ್‌ನ ವಿಡಿಯೊವನ್ನು ಬಿಸಿಸಿಐ ಮತ್ತು ಐಸಿಸಿ ತನ್ನ ಟ್ವೀಟರ್‌ ಎಕ್ಸ್‌ನಲ್ಲಿ ಹಂಚಿಕೊಂಡು ಮೆಚ್ಚುಗೆ ಸೂಚಿಸಿದೆ.

ʼಫ್ಲೈಯಿಂಗ್ ವುಮೆನ್ ಕ್ರಿಕೆಟರ್…ವಾಟ್ ಎ ಕ್ಯಾಚ್… ವಾಹ್… ಈ ಕ್ಯಾಚ್‌ ದಿಗ್ಭ್ರಮೆಗೊಳಿಸುತ್ತದೆ… ಎಂದು ಕ್ಯಾಚ್‌ ಕಂಡ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ʼಇದು ಕ್ರಿಕೆಟ್ ಇತಿಹಾಸದ ಅದ್ಭುತ ಕ್ಯಾಚ್ ಗಳಲ್ಲಿ ಒಂದುʼ ಎಂದು ಕಾಮೆಂಟರಿ ಮಾಡುತ್ತಿದ್ದವರು ವರ್ಣಿಸಿದರು. ರಾಧ ಯಾದವ್‌ ಹಕ್ಕಿಯಂತೆ ಹಾರಿ ಚೆಂಡು ಹಿಡಿದದ್ದನ್ನು ಕಂಡು ಭಾರತೀಯ ಆಟಗಾರರೇ ಆಶ್ಚರ್ಯಗೊಂಡಿದ್ದರು.

ಜಾರ್ಜಿಯಾ ಪ್ಲಿಮ್ಮರ್ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ 41 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 1 ಸಿಕ್ಸರ್‌ ಮತ್ತು 6 ಬೌಂಡರಿ ದಾಖಲಾಯಿತು. ಇವರ ಜತೆಗಾರ್ತಿ ಸುಜಿ ಬೇಟ್ಸ್(58) ಅರ್ಧಶತಕ ಬಾರಿಸಿ ಮಿಂಚಿದರು. ಉಭಯ ಆಟಗಾರ್ತಿಯರು ಮೊದಲ ವಿಕೆಟ್‌ಗೆ 87 ರನ್‌ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಸದ್ಯ ನ್ಯೂಜಿಲ್ಯಾಂಡ್‌ 250 ರನ್‌ ಗಡಿ ದಾಟುವ ಸನಿಹದಲ್ಲಿದೆ. ನಾಯಕಿ ಸೋಫಿ ಡಿವೈನ್ ಅರ್ಧಶತಕ ಪೂರೈಸಿದ್ದು ಶತಕ ಬಾರಿಸುವತ್ತ ದಾಪುಗಾಲಿಟ್ಟಿದ್ದಾರೆ. ಬೌಲಿಂಗ್‌ನಲ್ಲಿಯೂ ಮಿಂಚಿದ ರಾಧಾ ಯಾದವ್‌ ಸದ್ಯ 2 ವಿಕೆಟ್‌ ಕಿತ್ತಿದ್ದಾರೆ.

Manu Bhaker: ಅನಗತ್ಯ ಟ್ವೀಟ್‌ ಮಾಡಿ ಟೀಕೆಗೆ ಗುರಿಯಾದ ಒಲಿಂಪಿಯನ್‌ ಮನು ಭಾಕರ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಅವಳಿ ಕಂಚಿನ ಪದಕ ವಿಜೇತೆ, ಭಾರತದ ತಾರಾ ಶೂಟರ್‌ ಮನು ಭಾಕರ್‌(Manu Bhaker) ಅನಗತ್ಯವಾಗಿ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ‘ನಾನು ಪ್ರತಿಷ್ಠಿತ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ(Dhyan Chand Khel Ratna Award) ಪ್ರಶಸ್ತಿಗೆ ಅರ್ಹಳೇ? ನೀವೇ ಹೇಳಿ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಭಾರೀ ಟೀಕೆಗಳು ಬಂದ ಕಾರಣ ತಕ್ಷಣ ಮನು ತಮ್ಮ ಟ್ವೀಟ್‌ ಡಿಲೀಡ್‌ ಮಾಡಿದ್ದಾರೆ. ಕೆಲವರು ಇದು ಮನು ಅವರ ಟ್ವಿಟರ್‌ ಎಕ್ಸ್‌ ಖಾತೆ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎಂದರೆ, ಇನ್ನು ಕೆಲವರು ಇದು ಉದ್ದೇಶಪೂರ್ವಕವಾಗಿ ಮಾಡಿರುವ ಟ್ವೀಟ್‌ ಎಂದು ಹೇಳಿದ್ದಾರೆ.