Sunday, 27th October 2024

Waqf Board : ವಕ್ಫ್‌ ಬೋರ್ಡ್‌ ಹೆಸರಲ್ಲಿ ರೈತರ ಜಮೀನು ಕಬಳಿಕೆ; ಶಾಸಕ ಶರಣಗೌಡ ಕಂದಕೂರ ಆಕ್ಷೇಪ

WAQF Board

ಯಾದಗಿರಿ: ರೈತರ ಜಮೀನನ್ನು ವಕ್ಫ್ ಆಸ್ತಿ (Waqf Board) ಹೆಸರಲ್ಲಿ ಕಬಳಿಕೆ ಮಾಡಲು ಮುಂದಾಗುತ್ತಿರುವ ಬಗ್ಗೆ ಗುರುಮಿಟಕಲ್ ಶಾಸಕ ಶರಣಗೌಡ ಕಂದಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ಪ್ರದೇಶದ ರೈತರ ಜಮೀನಿನ ಖಾತೆಯಲ್ಲಿ ವಕ್ಪ್ ಆಸ್ತಿ ಅಂತ ಬರುತ್ತಿರುವು ಸರಿಯಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ಯಾರು ಪರಿಹಾರ ಕೊಡಬೇಕು. ಅವರ ಕಷ್ಟಕ್ಕೆ ಸ್ಪಂದನೆ ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಅಂತ ಯಾಕೆ ನಮೂದು ಆಯಿತು ಎಂಬುದೇ ಯಕ್ಷ ಪ್ರಶ್ನೆ. ಈ ಕುರಿತು ತನಿಖೆ ನಡೆಯಬೇಕಾಗಿದೆ. ಸಚಿವರೊಬ್ಬರು ಇದನ್ನು ಮಾಡಿದ್ದಾರೆ ಎಂದು ಹೇಳುವುದಕ್ಕೂ ಇಲ್ಲಿನ ವ್ಯವಸ್ಥೆ ಹೇಗಿದೆ ಎಂಬುದೇ ಮುಖ್ಯವಾಗುತ್ತದೆ ಎಂದು ಹೇಳಿದರು.

ಪ್ರಕರಣದಲ್ಲಿ ಅಧಿಕಾರಿಗಳ ಲೋಪ ಇದೆಯಾ ಅಥವಾ ತಾಂತ್ರಿಕ ದೋ ಷ ಉಂಟಾಗಿದೆಯೇ ಅಥವಾ ಪ್ರಭಾವಿಗಳ ಕೈವಾಡ ಇದೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಶಾಸಕರು ಒತ್ತಾಯಿಸಿದರು.

ವಕ್ಫ್ ಆಸ್ತಿ ಸಾವಿರಾರು ಎಕರೆ ಇದೆ ಅಂತ ಸರ್ಕಾರ ಹೇಳುತ್ತದೆ. ಆದರೆ, ವಕ್ಫ್‌ ಮಂಡಳಿಯವರು ಆಸ್ತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಅದನ್ನು ಹೊರತುಪಡಿಸಿ ಬಡಪಾಯಿ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಕಬಳಿಸಲಾಗುತ್ತಿದೆ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: D. K. Shivakumar : ನಾನು, ಸಿದ್ದರಾಮಯ್ಯ ಹಳ್ಳಿಕಾರ ಸಮಾಜದವರು; ಡಿಸಿಎಂ ಡಿ. ಕೆ. ಶಿವಕುಮಾರ್

ರಾಜ್ಯ ಸರ್ಕಾರ ಒಂದು ಸಮುದಾಯದ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಅದನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯದಲ್ಲಿ ಯಾವುದೇ ಪ್ರದೇಶದ ರೈತರಿಗೆ ಅನ್ಯಾಯವಾದರೂ ಅವರ ಪರ ಧ್ವನಿ ಎತ್ತುತ್ತೇವೆ. ಸದನದ ಹೊರಗೆ ಮತ್ತು ಒಳಗೆ ಹೋರಾಟ ಸಂಘಟಿಸುತ್ತೇವೆ ಎಂದು ಹೇಳಿದರು.

ಯಾದಗಿರಿಯಲ್ಲೇ ವಕ್ಫ್‌ ಆಸ್ತಿಯನ್ನು ಪ್ರಭಾವಿಗಳು ಲೂಟಿ ಮಾಡಿದ್ದಾರೆ. ವಕ್ಫ್ ಮಂಡಳಿಯವರು ಮೊದಲು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಯಾದಗಿರಿ ಜಿಲ್ಲಾಡಳಿತ ಭವನದ ಸುತ್ತಲಿನ ವಕ್ಪ್ ಆಸ್ತಿಯನ್ನೇ ಕಬಳಿಕೆ ಮಾಡಲಾಗಿದೆ. ಅದರ ದಾಖಲೆಯನ್ನು ಹೊರಗೆ ಎಳೆಯುತ್ತೇನೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ನಾನು ದ್ವನಿ ಎತ್ತುತ್ತೇನೆ ಎಂದು ಅವರು ಹೇಳಿದರು.