ಇಟಾನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಅ. 31ರಂದು ಅರುಣಾಚಲ ಪ್ರದೇಶ (Arunachal Pradesh)ದ ತವಾಂಗ್ (Tawang) ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿ ಬೀಡುಬಿಟ್ಟಿರುವ ಸೈನಿಕರೊಂದಿಗೆ ದೀಪಾವಳಿ (Deepavali) ಆಚರಿಸಲಿದ್ದಾರೆ.
ರಕ್ಷಣಾ ಸಚಿವರು ತವಾಂಗ್ ವಲಯದ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಾಧ್ಯತೆ ಇದೆ ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಪೂರ್ವ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ಗಸ್ತು ತಿರುಗುವ ವಿಚಾರದಲ್ಲಿ ಪ್ರಗತಿ ಸಾಧಿಸಿದ ಸಮಯದಲ್ಲೇ ರಾಜನಾಥ್ ಸಿಂಗ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
Tomorrow, 28th October, is going to be a very special day for the Indian Aerospace industry.
— Rajnath Singh (@rajnathsingh) October 27, 2024
PM Shri @narendramodi , along with his Spanish counterpart Mr. @sanchezcastejon will jointly inaugurate the TATA Aircraft Complex for manufacturing C-295 aircraft in Vadodara.
The… pic.twitter.com/44oApxLiko
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಉಪಮುಖ್ಯಮಂತ್ರಿ ಚೌನಾ ಮೇನ್ ಅವರ ಉಪಸ್ಥಿತಿಯಲ್ಲಿ ಅ. 30ರಂದು ತವಾಂಗ್ನಲ್ಲಿ ಆಯೋಜಿಸಿರುವ ಭಾರತೀಯ ವಾಯುಪಡೆ – ಉತ್ತರಾಖಂಡ ಯುದ್ಧ ಸ್ಮಾರಕದ ಕಾರು ರ್ಯಾಲಿಯ ಧ್ವಜಾರೋಹಣ ಸಮಾರಂಭದೊಂದದಲ್ಲಿಯೂ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಮಾರ್ಚ್ನಲ್ಲಿ ರಾಜನಾಥ್ ಸಿಂಗ್ ಲೇಹ್ನಲ್ಲಿ ಭಾರತೀಯ ಸೈನಿಕರೊಂದಿಗೆ ಹೋಳಿ ಆಚರಿಸಿದ್ದರು ಮತ್ತು ದೇಶವನ್ನು ಶತ್ರುಗಳಿಂದ ಅವರನ್ನು ರಕ್ಷಿಸಿದ್ದಕ್ಕಾಗಿ ಶ್ಲಾಘಿಸಿದ್ದರು.
ಈ ಮೊದಲು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ನಲ್ಲಿ ದೀಪಾವಳಿ ಆಚರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅದನ್ನು ರದ್ದುಪಡಿಸಲಾಯಿತು.
ಇದೇ ಮೊದಲಲ್ಲ
ರಾಜನಾಥ್ ಸಿಂಗ್ ಕಳೆದ ಕೆಲವು ವರ್ಷಗಳಿಂದ ಸೈನಿಕರೊಂದಿಗೆ ಹಬ್ಬ ಆಚರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅವರು ಕಳೆದ ವರ್ಷ ತವಾಂಗ್ನಲ್ಲಿ ದಸರಾದ ಸಾಂಪ್ರಾದಾಯಿಕ ‘ಶಸ್ತ್ರ’ ಪೂಜೆ ನೆರವೇರಿಸಿದ್ದರು. ಬಳಿಕ ಚೀನಾದ ಗಡಿಯ ಸಮೀಪವಿರುವ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಯೋಧರೊಂದಿಗೆ ದಸರಾ ಆಚರಿಸಿದ್ದರು.
ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಅರುಣಾಚಲ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದ ಮಿಲಿಟರಿ ಸನ್ನದ್ಧತೆಯ ಸಮಗ್ರ ಪರಿಶೀಲನೆಯನ್ನು ನಡೆಸಿ, ಅಚಲ ಬದ್ಧತೆ ಮತ್ತು ಅಪ್ರತಿಮ ಧೈರ್ಯದಿಂದ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರನ್ನು ಶ್ಲಾಘಿಸಿದ್ದರು. ರಾಜನಾಥ ಸಿಂಗ್ ಅವರು ಹಲವು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಇಲ್ಲಿಗೆ ಬಂದು ಶಸ್ತ್ರ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ತವಾಂಗ್ ಭಾರತೀಯ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ)ನ ನೆಲೆಯಾಗಿದೆ.
ತವಾಂಗ್ ಪಟ್ಟಣದಲ್ಲಿ 50,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇದನ್ನು ಚೀನಾ ಲಿಟಲ್ ಟಿಬೆಟ್ ಎಂದು ಕರೆಯುತ್ತದೆ. ಚೀನಾ ತನ್ನದು ಎಂದು ಹೇಳಿಕೊಳ್ಳುವ ವಿವಾದಾತ್ಮಕ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಪೂರ್ವ ಲಡಾಖ್ನಲ್ಲಿ ಕಂಡು ಬಂದಿರುವ ಅನೇಕ ಬಿಕ್ಕಟ್ಟಿನ ಕಾರಣದಿಂದ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಮುಂದುವರಿದಿದ್ದರೂ, ಡೆಪ್ಸಾಂಗ್ ಮತ್ತು ಡೆಮ್ಚೋಕ್ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಈ ಬಾರಿ ದೀಪಾವಳಿ ಅ. 29ರಿಂದ ನ. 3ರ ತನಕ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: India-China Border: ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ ಆರಂಭ