Sunday, 24th November 2024

Cities In Danger: 2030ರ ವೇಳೆಗೆ ಕಣ್ಮರೆಯಾಗಲಿವೆ ವಿಶ್ವದ ಈ 9 ನಗರಗಳು! ಭಾರತದ ಒಂದು ಸಿಟಿಯೂ ಇದೆ!

Cities In Danger

ಜಲಮೂಲಗಳ ಅತಿಕ್ರಮಣ, ಸಮುದ್ರ ಮಟ್ಟದ ಏರಿಕೆ, ಭಾರಿ ಪ್ರವಾಹ, ಭೂಕುಸಿತದಿಂದಾಗಿ 2030ರ ವೇಳೆಗೆ ಭಾರತದ (Indian town) ಈ ಒಂದು ನಗರ ಸೇರಿದಂತೆ ವಿಶ್ವದ ಅನೇಕ ನಗರಗಳು (Cities In Danger) ಕಣ್ಮರೆಯಾಗಬಹುದು ಎನ್ನುತ್ತಾರೆ ಪರಿಸರವಾದಿಗಳು. ಇದರ ಸೂಚನೆ ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿದೆ.

ತಗ್ಗು ಪ್ರದೇಶ, ಕರಾವಳಿ ಭೂಭಾಗ, ಭಾರಿ ಮಳೆಯಿಂದ ಪ್ರವಾಹಕ್ಕೆ ಒಳಗಾಗುವ ವಿಶ್ವದ 9 ಪ್ರಮುಖ ನಗರಗಳು 2030ರ ವೇಳೆಗೆ ಮುಳುಗುವ ಸಾಧ್ಯತೆಯಿದೆ. ಅಲ್ಲದೇ ಇದರಿಂದಾಗಿ ಆಹಾರದ ಕೊರತೆ, ನೀರಿನಿಂದ ಹರಡುವ ಕಾಯಿಲೆಗಳೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪರಿಸರ ತಜ್ಞರು.

ಈಗಾಗಲೇ ಮುಳುಗುವ ಅಪಾಯದಲ್ಲಿರುವ ಅನೇಕ ನಗರಗಳು ಅಣೆಕಟ್ಟುಗಳನ್ನು ಕಟ್ಟಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ನಿರಂತರ ಜಾಗತಿಕ ತಾಪಮಾನ ಏರಿಕೆಯು ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಅದರಲ್ಲೂ ಒಂಬತ್ತು ನಗರಗಳು 2030ರ ವೇಳೆಗೆ ನೀರಿನೊಳಗೆ ಸೇರುವುದು ಖಚಿತ ಎಂದು ವಿಜ್ಞಾನಿಗಳೂ ಊಹಿಸಿದ್ದಾರೆ.

ಯಾವ ನಗರಗಳು ಅಪಾಯದಲ್ಲಿವೆ?

ಭಾರತದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಮಿಯಾಮಿ, ಬ್ಯಾಂಕಾಕ್, ಆಮ್ ಸ್ಟರ್ ಡ್ಯಾಮ್, ಬಾಸ್ರಾ, ಜಾರ್ಜ್ ಟೌನ್, ಹೋಚಿಮಿನ್ಹ್ ಸಿಟಿ, ನ್ಯೂ ಓರ್ಲಿಯನ್ಸ್ ಮತ್ತು ವೆನಿಸ್ ನಗರಗಳು ಸದ್ಯ ಅಪಾಯದ ಪಟ್ಟಿಯಲ್ಲಿದೆ.

Cities In Danger

ಮಿಯಾಮಿ

ಅಮೆರಿಕದಲ್ಲಿರುವ ಮಿಯಾಮಿ ನಗರಕ್ಕೆ ಹೆಚ್ಚಿನ ಪ್ರವಾಹದ ಸ್ಪಷ್ಟ ಸಂಕೇತಗಳು ಈಗಾಗಲೇ ಸಿಕ್ಕಿವೆ. ಇಲ್ಲಿ ಸಮುದ್ರ ಮಟ್ಟ ವೇಗವಾಗಿ ಹೆಚ್ಚಾಗುತ್ತಿದೆ. ಹವಾಮಾನ ಬದಲಾವಣೆಯನ್ನು ನಿಲ್ಲಿಸಲು ತುರ್ತು ಪ್ರತಿಕ್ರಿಯೆಯನ್ನು ಪ್ರಾರಂಭಿಸಿರುವ ಮಿಯಾಮಿ ಈಗ ತನ್ನ ನೆಲೆಯನ್ನು ಬಲಪಡಿಸಲು ಮತ್ತು ನೀರಿನ ಮೇಲೆ ರಚನೆಗಳನ್ನು ಹೆಚ್ಚಿಸಬೇಕಾಗಬಹುದು.

ಪ್ರಸಿದ್ಧ ಕಡಲ ತೀರಗಳಿಂದಲೇ ಸುತ್ತುವರಿದಿರುವ ಮಿಯಾಮಿ ನಗರದ ಮೇಲೆ ಹವಾಮಾನ ಬದಲಾವಣೆ ಗಮನಾರ್ಹ ಪರಿಣಾಮವನ್ನು ಬೀರಿದೆ. ಹೀಗೆ ಮುಂದುವರಿದರೆ ಇದು ಶೀಘ್ರದಲ್ಲೇ ನೀರಿನ ತಳ ಸೇರಬಹುದು ಎನ್ನುತ್ತಾರೆ ಪರಿಸರ ತಜ್ಞರು.

Cities In Danger

ಬ್ಯಾಂಕಾಕ್

ಥೈಲ್ಯಾಂಡ್‌‌ನಲ್ಲಿರುವ ಬ್ಯಾಂಕಾಕ್ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಪ್ರಸ್ತುತ ಸಮುದ್ರ ಮಟ್ಟದಿಂದ ಕೇವಲ 1.5 ಮೀಟರ್ ಎತ್ತರದಲ್ಲಿರುವ ಈ ನಗರ ಈಗಾಗಲೇ ಮುಳುಗಲಾರಂಭಿಸಿದೆ. ವಾರ್ಷಿಕವಾಗಿ ಸುಮಾರು ಎರಡು ಮೂರು ಸೆಂಟಿ ಮೀಟರ್ ಗಳಷ್ಟು ಈ ನಗರ ಮುಳುಗಡೆಯಾಗುತ್ತಿದೆ. ಜಾಗತಿಕ ತಾಪಮಾನದ ಏರಿಕೆ ಥಾಯ್ ರಾಜಧಾನಿ ಮೇಲೆ ದೊಡ್ಡ ಹೊಡೆತವನ್ನೇ ನೀಡಿದೆ.

ಅತ್ಯಂತ ದಟ್ಟ ಮತ್ತು ಮೃದುವಾದ ಮಣ್ಣಿನಲ್ಲಿ ನಿರ್ಮಾಣವಾಗಿರುವ ಈ ನಗರದಲ್ಲಿ ನಿರಂತರವಾದ ಭಾರೀ ಮಳೆ, ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಶೀಘ್ರದಲ್ಲೇ ಪ್ರವಾಹಕ್ಕೆ ಗುರಿಯಾಗುತ್ತದೆ. ಮುಂದಿನ ಶತಮಾನದ ವೇಳೆಗೆ ಬ್ಯಾಂಕಾಕ್ ಸಂಪೂರ್ಣವಾಗಿ ಮುಳುಗುತ್ತದೆ ಎಂದು ವಿಜ್ಞಾನಿಗಳು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ಬ್ಯಾಂಕಾಕ್ ಅನ್ನು ನೀರಿನ ಮೇಲೆ ಹಿಡಿದಿಟ್ಟುಕೊಳ್ಳುವ ಮತ್ತು ಅದರ ಭವಿಷ್ಯವನ್ನು ವಿಸ್ತರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ ಅಪಾಯದ ಆತಂಕ ಇನ್ನೂ ಮುಂದುವರಿದಿದೆ.

Cities In Danger

ಆಮ್‌ಸ್ಟರ್‌ಡ್ಯಾಮ್

ನೆದರ್ಲ್ಯಾಂಡ್ಸ್ ನ ಹೆಚ್ಚಿನ ಭಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದೆ. ಇಲ್ಲಿ ಪ್ರವಾಹವನ್ನು ತಡೆಗಟ್ಟಲು ಇಲ್ಲಿ ಸುಮಾರು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಪ್ರಯತ್ನಿಸಲಾಗುತ್ತಿದೆ. ಸುಂದರವಾದ ಈ ದೇಶದಲ್ಲಿರುವ ಆಮ್‌ಸ್ಟರ್‌ಡ್ಯಾಮ್ ನಗರವು ಪ್ರವಾಹವನ್ನು ತಡೆಯುವ ಅನೇಕ ಅಣೆಕಟ್ಟುಗಳ ಸಹಾಯದಿಂದ ತೇಲುತ್ತಿದೆ. ಹಲವಾರು ಪ್ರವಾಹಗಳು ಈಗಾಗಲೇ ಈ ನಗರಕ್ಕೆ ಸಾಕಷ್ಟು ಹಾನಿ ಮಾಡಿದ್ದರೂ ನಗರ ನಿರಂತರ ಮರು ನಿರ್ಮಾಣ ಆಗುತ್ತಲೇ ಇದೆ. ಹವಾಮಾನ ಬದಲಾವಣೆಯ ಪರಿಣಾಮ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

Cities In Danger

ಬಸ್ರಾ

ಇರಾಕ್ ನಲ್ಲಿರುವ ಬಸ್ರಾ ಅರೇಬಿಕ್ ಬಂದರು ನಗರವಾಗಿದೆ. ಹೆಚ್ಚು ಅಗಲ ಮತ್ತು ಶಕ್ತಿಯುತವಾದ ಶಟ್ ಅಲ್- ಅರಬ್ ನದಿಯ ಉದ್ದಕ್ಕೂ ಸ್ಥಾಪಿತವಾಗಿರುವ ಈ ನಗರದ ಮೂಲಕ ಹಾದುಹೋಗುವ ಕಾಲುವೆ ಮತ್ತು ತೊರೆಗಳು ಸಂಕೀರ್ಣ ಜಾಲದೊಂದಿಗೆ ಪರ್ಷಿಯನ್ ಕೊಲ್ಲಿಗೆ ಹರಿಯುತ್ತದೆ. ಸುತ್ತಮುತ್ತ ಮೃದುವಾದ ಜವುಗು ಪ್ರದೇಶವಿದ್ದು, ನಗರ ಪ್ರದೇಶವನ್ನು ದುರ್ಬಲಗೊಳಿಸಿದೆ. ಇದು ಏರುತ್ತಿರುವ ಸಮುದ್ರ ಮಟ್ಟದಿಂದ ಅಪಾಯವನ್ನು ಎದುರಿಸುತ್ತಿದೆ.

Cities In Danger

ಜಾರ್ಜ್‌ಟೌನ್

ಗಯಾನಾದ ಈ ನಗರ 2030ರ ವೇಳೆಗೆ ಮುಳುಗುವ ಸಾಧ್ಯತೆ ಇದೆ. ಜಾರ್ಜ್‌ಟೌನ್, ಕೆರಿಬಿಯನ್ ಮುಳುಗುವ ಅತ್ಯಂತ ದುರ್ಬಲ ಪ್ರದೇಶಗಳಲ್ಲಿ ಒಂದಾಗಿದೆ. ಹತ್ತು ವರ್ಷಗಳಲ್ಲಿ ಮುಳುಗುವ ಅಪಾಯದಲ್ಲಿರುವ ಈ ನಗರವನ್ನು ಪವಾಡದಿಂದ ಮಾತ್ರ ಉಳಿಸಬಹುದು, ವೈಜ್ಞಾನಿಕ ಪರಿಹಾರದಿಂದ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು.

Cities In Danger

ಹೋಚಿಮಿನ್ಹ್ ಸಿಟಿ

ವಿಯೆಟ್ನಾಂನ ಈ ನಗರ ಮೆಕಾಂಗ್ ಡೆಲ್ಟಾದ ಉದ್ದಕ್ಕೂ ಹರಡಿಕೊಂಡಿದೆ. ಪ್ರವಾಹ ಮತ್ತು ಉಷ್ಣವಲಯದ ಬಿರುಗಾಳಿಯಿಂದ ನಿರಂತರ ಅಪಾಯವನ್ನು ಎದುರಿಸುತ್ತಿದೆ. ಮೆಕಾಂಗ್ ನದಿಯ ಸುತ್ತಲಿನ ಹೆಚ್ಚಿನ ಪೂರ್ವ ಜಿಲ್ಲೆಗಳು ಪ್ರವಾಹ ಮತ್ತು ಚಂಡಮಾರುತಗಳಿಂದ ಶೀಘ್ರದಲ್ಲೇ ವಾಸ ಯೋಗ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Cities In Danger

ಕೋಲ್ಕತ್ತಾ

ಭಾರತದ ಪಶ್ಚಿಮ ಬಂಗಾಳದ ರಾಜಧಾನಿ ವೇಗವಾಗಿ ಮುಳುಗುತ್ತಿದೆ. 2030ರ ಮೊದಲು ಈ ನಗರ ಮುಳುಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.

ಹೂಗ್ಲಿಯ ಪೂರ್ವ ದಂಡೆಯ ಮೇಲಿರುವ ಈ ನಗರ ಜವುಗು ಮಣ್ಣು ಹೊಂದಿದೆ. ದಕ್ಷಿಣದಲ್ಲಿ ಆದಿಗಂಗಾ ನದಿ ಇದ್ದು ಒಂದು ರೀತಿಯಲ್ಲಿ ಪ್ರಾಕೃತಿಕ ರಕ್ಷಣೆ ಇದ್ದರೂ ಇನ್ನೊಂದು ರೀತಿಯಲ್ಲಿ ಅಷ್ಟೇ ಅಪಾಯವನ್ನು ಎದುರಿಸುತ್ತಿದೆ. ಸರೋವರದ ಕಡೆಗೆ ನೆಲ ಸ್ವಲ್ಪ ಇಳಿಜಾರಾಗಿರುವುದು ನಗರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸಮುದ್ರ ಮಟ್ಟ ಹೆಚ್ಚಾಗುತ್ತಿರುವ ಕಾರಣ ಕೋಲ್ಕತ್ತಾ ನಗರ ಸಮುದ್ರ ಪಾಲಾಗಲಿದೆ ಎಂದು ಸಂಶೋಧನಾ ವರದಿಯೊಂದು ಹೇಳುತ್ತದೆ.

ಬದಲಾಗುತ್ತಿರುವ ಹವಾಮಾನ ವೈಪರಿತ್ಯಗಳಿಂದ ಕೋಲ್ಕತ್ತಾ ಸೇರಿದಂತೆ ಬಂಗಾಳದ ಬಹುತೇಕ ಭಾಗಗಳು ಮುಳುಗಡೆಯಾಗಲಿವೆ. ಕೋಲ್ಕತ್ತಾದ ಮಣ್ಣು ದುರ್ಬಲವಾಗುತ್ತಿದೆ. ಇದು ಅಪಾಯದ ತೀವ್ರತೆಯನ್ನು ಹೆಚ್ಚಿಸಲಿದೆ ಎಂದು ವರದಿ ಹೇಳುತ್ತಿದೆ.

ಇಲ್ಲಿ ಸಮುದ್ರ ಮಟ್ಟವು ತುಂಬಾ ವೇಗವಾಗಿ ಏರುತ್ತಿದೆ. ನೀರಿನ ಮಟ್ಟದಲ್ಲಿನ ಈ ಏರಿಕೆ ಕೋಲ್ಕತ್ತಾಗೆ ಅಪಾಯಕಾರಿಯಾಗಿದೆ.

Cities In Danger

ನ್ಯೂ ಓರ್ಲಿಯನ್ಸ್

ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದ ಎರಡು ಇಂಚುಗಳಷ್ಟು ಭೂಮಿ ವರ್ಷದಲ್ಲಿ ಸಮುದ್ರ ಸೇರುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮಗಳು ಇಲ್ಲಿ ಸ್ಪಷ್ಟವಾಗಿ ಗೋಚರಿಸತೊಡಗಿವೆ.

ನದಿಯ ಜಲಾನಯನ ಪ್ರದೇಶವು ನಗರವನ್ನು ಮತ್ತಷ್ಟು ದುರ್ಬಲಗೊಳಿಸಿದ್ದು, ಸಮುದ್ರ ಮಟ್ಟ ಏರಿಕೆ, ನಿರಂತರ ಪ್ರವಾಹದ ದಾಳಿಗೆ ಕಾರಣವಾಗಿವೆ.

Digital Condom: ಲಾಂಚ್‌ ಆಗಿದೆ ಡಿಜಿಟಲ್‌ ಕಾಂಡೋಮ್‌; ಹಾಗಂದ್ರೇನು? ಇದರ ಬಳಕೆ ಹೇಗೆ ಮತ್ತು ಏಕೆ? ಇಲ್ಲಿದೆ ಡಿಟೇಲ್ಸ್‌

Cities In Danger

ವೆನಿಸ್

ಇಟಲಿಯ ವೆನಿಸ್ ನಗರ ಲಕ್ಷಾಂತರ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಜಲಮಾರ್ಗದಿಂದಲೇ ಹೆಸರುವಾಸಿಯಾಗಿರುವ ಈ ನಗರ ಮುಂದಿನ ಶತಮಾನದ ವೇಳೆಗೆ ಕಣ್ಮರೆಯಾಗಬಹುದು. ಸುಂದರವಾದ ವೆನಿಸ್ ನಗರವು ಪ್ರತಿ ವರ್ಷವೂ 0.08 ಇಂಚುಗಳಷ್ಟು ಮುಳುಗುತ್ತಿದೆ. ನಿಯಮಿತವಾದ ಪ್ರವಾಹ ಮತ್ತು ಹೆಚ್ಚಿನ ಉಬ್ಬರವಿಳಿತಗಳನ್ನು ಎದುರಿಸುತ್ತಿದೆ.