Friday, 22nd November 2024

Karnataka By Election: ರಂಗೇರಿದ ಚನ್ನಪಟ್ಟಣ ಉಪಚುನಾವಣಾ ಕಣ; ಬರೋಬ್ಬರಿ 50 ಮಂದಿ ಸ್ಪರ್ಧೆ, 62 ನಾಮಪತ್ರ ಸಲ್ಲಿಕೆ

Karnataka By Election

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka By Election) ಮುಹೂರ್ತ ನಿಗದಿಯಾಗಿದೆ. ಶಿಗ್ಗಾವಿ (Shiggavi), ಚನ್ನಪಟ್ಟಣ (Channapatna) ಮತ್ತು ಸಂಡೂರು (Sandur) ಕ್ಷೇತ್ರಗಳಿಗೆ ನ. 13ರಂದು ಮತದಾನ ನಡೆಯಲಿದ್ದು, ನ. 23ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಈ ಮಧ್ಯೆ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಬರೋಬ್ಬರಿ 50 ಮಂದಿ ಸ್ಪರ್ಧಿಸುತ್ತಿದ್ದು, 62 ನಾಮಪತ್ರ ಸಲ್ಲಿಕೆಯಾಗಿದೆ.

ನಾಮಪತ್ರ ಸಲ್ಲಿಕೆಯ ಕೊನೆ ದಿನಾಂಕ ಮುಕ್ತಾಯವಾಗಿದ್ದು, ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ 50 ಮಂದಿ ಕಣಕ್ಕಿಳಿದಿದ್ದಾರೆ. ಅಕ್ಕಪಕ್ಕದ ಚಾಮರಾಜನಗರ, ಮದ್ದೂರು, ಹಾಸನ, ಬೆಂಗಳೂರು ಮಾತ್ರವಲ್ಲದೆ ದೂರದ ಚಿಕ್ಕಮಗಳೂರು ಮುಂತಾದಡೆಗಳಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಸ್ಥಳೀಯರು ಶೇ. 30ರಷ್ಟು ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಅ. 30 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಅಂತಿಮವಾಗಿ ಎಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಯಾಕಾಗಿ ಉಪ ಚುನಾವಣೆ?

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ರೀತಿ ಚನ್ನಪಟ್ಟಣದ ಜೆಡಿಎಸ್ ಶಾಸಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ. ಇನ್ನು ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ. ತುಕಾರಾಂ ಅವರು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರಿಂದ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಮೂವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.

ದೇಶದ ಗಮನ ಸೆಳೆದ ಚನ್ನಪಟ್ಟಣ

ಹಿಂದೆ ಬಿಜೆಪಿಯಲ್ಲಿದ್ದ ಸಿ.ಪಿ.ಯೋಗೇಶ್ವರ್‌ ಬಂಡಾಯವೆದ್ದು ಕಾಂಗ್ರೆಸ್‌ ಸೇರಿ ಅಲ್ಲಿಂದ ಟಿಕೆಟ್‌ ಗಿಟ್ಟಿಸಿಕೊಂಡ ಕಾರಣ ಚನ್ನಪಟ್ಟಣ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್‌ಗೆ ಮತ್ತು ಬಿಜೆಪಿ-ಜೆಡಿಎಸ್‌ ಮೃತ್ರಿಕೂಟಕ್ಕೆ ಇದು ಪ್ರತಿಷ್ಠೆಯ ಕಣವಾಗಿರುವುದರಿಂದಲೂ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ  ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಉನ್ನತ ನಾಯಕರು ಉಪಸ್ಥಿತರಿದ್ದರು.

ಇನ್ನು ಚನ್ನಪಟ್ಟಣ ಉಪಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಳೆದ ವರ್ಷದ ನಡೆದ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲುಕಂಡಿದ್ದರು. ಹೀಗಾಗಿ ಈ ಬಾರಿ ಸತಾಯ ಗಥಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ.

ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌ ತೊಡೆ ತಟ್ಟಿದ್ದಾರೆ. ಸಂಡೂರಿನಲ್ಲಿ ಬಿಜೆಪಿಯಿಂದ ನಟ ಬಂಗಾರು ಹನುಮಂತು ಅದೃಷ್ಟ ಪರೀಕ್ಷೆಗೆ ಇಳಿದರೆ ಅವರಿಗೆ ಕಾಂಗ್ರೆಸ್‌ನ ಈ. ಅನ್ನಪೂರ್ಣ ಸವಾಲೊಡ್ಡಿದ್ದಾರೆ.

ಈ ಸುದ್ದಿಯನ್ನೂ ಓದಿ: R Ashok: ಯೋಗೇಶ್ವರ್‌ ತುಳಿಯಲು ಡಿ.ಕೆ. ಶಿವಕುಮಾರ್‌ ಪ್ಲಾನ್‌; ಆರ್‌. ಅಶೋಕ್‌