Sunday, 24th November 2024

Vishweshwar Bhat Column: ಕೊರಿಯನ್‌ ಮನೆಯಲ್ಲಿ ಕಂಡಿದ್ದು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನಾನು ವಾಸಿಸುವ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ದಕ್ಷಿಣ ಕೊರಿಯಾ ಮೂಲದ ದಂಪತಿಗಳು ದೊಡ್ಡ (ಬಾಡಿಗೆ) ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅವರು ಸಿಯೋಲ್ ಮೂಲದ ಖಾಸಗಿ ಕಂಪನಿಯೊಂದರ ಬೆಂಗಳೂರು ಶಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ಇತ್ತೀಚೆಗೆ ನಾನು ಅವರ ಮನೆಗೆ ಹೋದಾಗ, ನಮ್ಮ ಮತ್ತು ಅವರ ಸಂಸ್ಕೃತಿ, ಸಂಪ್ರದಾಯಗಳಿಗೆ ಕೆಲವು ಸಾಮ್ಯ ವಿರುವುದು ಅರಿವಿಗೆ ಬಂತು. ಅಷ್ಟು ದೊಡ್ಡ ಮನೆಯಿದ್ದರೂ ಅವರ ಮನೆಯಲ್ಲಿ ಹೆಚ್ಚು ಫರ್ನಿಚರುಗಳು
ಇರಲಿಲ್ಲ. ಅಲ್ಲಲ್ಲಿ ಚಾಪೆ, ದಿಂಬು, ಜಮಖಾನ, ಗಾಶಿಗಳನ್ನು ಹಾಸಿದ್ದರು. ‘ನಾವು ಫರ್ನಿಚರ್‌ಗಿಂತ ನೆಲದ ಮೇಲೆ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತೇವೆ’ ಎಂದು ನನ್ನ ಪರಿಚಿತರ ಪತ್ನಿ ಹೇಳಿದರು. ‘ನೆಲದ ಮೇಲೆ ಕುಳಿತು
ಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ಎಲ್ಲಿ ಬೇಕಾದರೂ ಕುಳಿತು ಕೊಳ್ಳಬಹುದು’ ಎಂದು ಹೇಳಿ ನಕ್ಕರು.

ಅಲ್ಲಿದ್ದ ಮುಕ್ಕಾಲು ಗಂಟೆ ಅವಧಿಯಲ್ಲಿ ಅವರು ಹೇಳಿದ ಕೆಲವು ಸಂಗತಿಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ… ?ಮನೆಯಲ್ಲಿದ್ದಾಗ ಚಪ್ಪಲಿಯನ್ನು ಧರಿಸಬಾರದು. ಬೇರೆಯವರ ಮನೆಗೆ ಹೋದಾಗಲೂ ಚಪ್ಪಲಿ ಧರಿಸಿ ಒಳಗೆ ಹೋಗಬಾರದು. ನಮ್ಮ ಚಪ್ಪಲಿ ಎಷ್ಟೇ ಸ್ವಚ್ಛವಾಗಿದ್ದರೂ, ಹೊರಗಿನ ನೆಲ ಗಲೀಜಾಗಿರುತ್ತದೆ. ನಮ್ಮ ಕಾಲನ್ನು ಸ್ವಚ್ಛವಾಗಿಟ್ಟುಕೊಳ್ಳಲು, ನಮ್ಮ ಮನೆಯನ್ನು ಕೊಳೆ ಮಾಡಿಕೊಳ್ಳಬಾರದು.

?ಮನೆಯಲ್ಲಿ ಎಷ್ಟು ಕಡಿಮೆ ಸಾಮಾನು ಇರುತ್ತದೋ, ಅಷ್ಟು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುತ್ತೀರಿ. ಮನೆಯಲ್ಲಿ ಹೆಚ್ಚು ಸಾಮಾನುಗಳು ತುಂಬಿಕೊಂಡರೆ, ಅವು ನಿಮ್ಮ ಚಲನೆಯ ಮೇಲೆ ಕಡಿವಾಣ ಹೇರುತ್ತವೆ. ಮನೆಯಲ್ಲಿ ಪೀಠೋಪಕರಣಗಳಿಲ್ಲದೇ ಬದುಕಬಹುದು. ನಾವು ಮನೆಗೆ ಬರುವ ಅತಿಥಿಗಳಿಗಾಗಿ ಫರ್ನಿಚರ್ ಇಟ್ಟಿದ್ದೇವೆ. ನಾವು ಫರ್ನಿಚರ್ ಬಳಸುವುದಿಲ್ಲ.

?ಮನೆಯ ಕಿಟಕಿಗಳನ್ನು ಯಾವತ್ತೂ ತೆರೆದಿಡಬೇಕು. ಯಾವತ್ತೂ ತಾಜಾ ಗಾಳಿ ಮನೆಯೊಳಗೆ ಬರುತ್ತಿರಬೇಕು. ಹೊರಗಿನ ಗಾಳಿ ಮನೆಯೊಳಗೆ ಬರುವಾಗ ತಾಜಾತನವನ್ನು ತರುತ್ತದೆ.

?ಯಾವತ್ತೂ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಹೂವಿನ ಪಕಳೆಗಳನ್ನು ಹಾಕಿಡಬೇಕು ಅಥವಾ ತಾಜಾ ಹೂವನ್ನು
ಹೂಜಿಯಲ್ಲಿ ಇಟ್ಟಿರಬೇಕು. ಮನೆಯಲ್ಲಿಟ್ಟ ಹೂವು ಯಾವತ್ತೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

?ಪ್ರತಿ ಗೋಡೆಯನ್ನು ಬೋಳಾಗಿ ಬಿಡಬಾರದು. ಒಂದು ಗೋಡೆಗೆ ಅರ್ಥ ಬರಬೇಕೆಂದರೆ, ಅದಕ್ಕೊಂದು ಪೇಂಟಿಂಗ್ ನೇತು ಹಾಕಬೇಕು. ಸಾಧ್ಯವಾದಷ್ಟು ನಿಸರ್ಗದ ಫೋಟೋಗಳು ಮನೆಯಲ್ಲಿ ಶಾಂತತೆಯನ್ನು ತಮ್ಮಷ್ಟಕ್ಕೆ ಮೂಡಿಸುತ್ತವೆ.

?ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಮರದಿಂದ ಮಾಡಿದ ಸಾಮಾನುಗಳನ್ನು ಬಳಸಬೇಕು.

?ಮನೆಯಲ್ಲಿರುವ ಎಲ್ಲರಿಗೂ ಟೀ, ಕಾಫಿ ಮಾಡುವುದನ್ನು ಕಲಿಸಬೇಕು. ಮನೆಯಲ್ಲಿ ಅಮ್ಮ ಇಲ್ಲದಿದ್ದರೂ ಅಡುಗೆ ಮಾಡುವುದನ್ನು ಗಂಡಸರು ಕಲಿತಿರಬೇಕು.

?ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಧೂಳಿನ ಕಣಗಳು ಬಂದು ಕುಳಿತುಕೊಳ್ಳುತ್ತವೆ. ಪ್ರತಿದಿನವೂ ಮನೆಯನ್ನು ಸ್ವಚ್ಛಗೊಳಿಸಲೇಬೇಕು. ಹೆಚ್ಚು ಕೊಳೆಯಾಗುವುದು ಮನೆಯಲ್ಲಿರುವ ಬಾತ್‌ರೂಮ. ಅದನ್ನು ನಿತ್ಯವೂ ಕ್ಲೀನ್ ಮಾಡಬೇಕು.

?ಮನೆಯಲ್ಲಿ ನಾಯಿ, ಬೆಕ್ಕು ಸಾಕುವುದು ಒಳ್ಳೆಯದೇ. ಆದರೆ ಅವುಗಳಿಗೆ ಸಮಯ ಕೊಡಬೇಕು. ಹೇಗಿದ್ದರೂ ಬಿದ್ದಿರುತ್ತವೆ ಎಂದು ಭಾವಿಸಿ ಅವುಗಳನ್ನು ಸಾಕಬಾರದು.

?ಒಮ್ಮೆ ಮನೆಯಿಂದ ಹೊರಗೆ ಹಾಕಿಕೊಂಡು ಬಂದ ಶರ್ಟು, ಪ್ಯಾಂಟನ್ನು ಮತ್ತೊಮ್ಮೆ ಧರಿಸಬಾರದು. ಹೊರಗಿನ ಧೂಳುಗಳು ನಮ್ಮ ಬಟ್ಟೆಯ ಮೇಲೆ ಬಿದ್ದಿರುತ್ತವೆ. ಮೇಲ್ನೋಟಕ್ಕೆ ಸ್ವಚ್ಛವಾಗಿದ್ದರೂ ಅವು ನಮ್ಮ ಬೆವರಿನಿಂದ ಮಲಿನವಾಗಿರುತ್ತವೆ. ನಮ್ಮ ಬೆವರೂ ಸಹ್ಯವಲ್ಲ. ನಾನು ಆ ದಂಪತಿಗಳ ಮಾತುಗಳನ್ನು ಧ್ಯಾನಾಸಕ್ತನಾಗಿ ಕೇಳುತ್ತಿದ್ದೆ. ಅವರ ಮಾತುಗಳು, ಮನೆಯ ವಾತಾವರಣ ಇಷ್ಟವಾದವು.

ಇದನ್ನೂ ಓದಿ: Vishweshwar Bhat Column: ಪ್ರಧಾನಿ ಶಾಸ್ತ್ರಿ ತಮ್ಮ ಜೀವನದಲ್ಲಿ ಒಂದೇ ಒಂದು ಸಿನಿಮಾವನ್ನೂ ನೋಡಿರಲಿಲ್ಲ!