Monday, 28th October 2024

‌Kiran Upadhyay Column: ಬಾರದಂಥ ಮಳೆ ಬಂತಣ್ಣ, ಮರುಭೂಮಿಯೊಳಗೆ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

ಬೆಂಗಳೂರಿನಲ್ಲಿ ಮಳೆ ನಿಂತಿತೇ? ನೋಡುವಷ್ಟು ನೋಡಿ, ಸುರಿವಷ್ಟು ಸುರಿದು, ಅದಕ್ಕೇ ಬೇಜಾರಾಗಿರಬೇಕು. ಅದಾದರೂ ಎಷ್ಟು ದಿನ ಅಂತ ಸುರಿದೀತು, ಒಂದು ದಿನ ನಿಲ್ಲಿಸಲೇಬೇಕು ತಾನೆ? ಆದರೆ ನಮ್ಮವರು ಮಾತ್ರ ಪಾಠ ಕಲಿಯುವುದಿಲ್ಲ. ಪ್ರತಿ ಬಾರಿಯೂ ಮಳೆ ಬರುವುದಕ್ಕೆ ಮುಂಚೆ, ‘ನಾವು ಸಿದ್ಧರಾಗಿದ್ದೇವೆ, ಎಲ್ಲ ತಯಾರಿ ಮಾಡಿ ಕೊಂಡಿದ್ದೇವೆ’ ಎಂದು ಉದ್ದುದ್ದ ಕಾಲುವೆಯಂತೆ ನಾಲಿಗೆ ಹರಿ ಬಿಡುವವರು ಮಳೆ ಬಂದಾಗ ಮಾತ್ರ ಗಪ್‌ಚುಪ್!

‘ಪ್ರಕೃತಿ ವಿಕೋಪಕ್ಕೆ ನಾವು ತಾನೇ ಏನು ಮಾಡಲು ಸಾಧ್ಯ?’, ‘ನಮ್ಮ ರಾಜ್ಯದಲ್ಲಿ ಮಾತ್ರ ಮಳೆ ಬಂದಿದೆಯೇ? ಪಕ್ಕದ ರಾಜ್ಯದಲ್ಲಿ/ದೇಶದಲ್ಲಿ ಬಂದಿಲ್ಲವೇ?’, ‘ಮರುಭೂಮಿಯಲ್ಲೂ ಮಳೆಯಾಗಿಲ್ಲವೇ?’, ‘ಕೊಲ್ಲಿ ರಾಷ್ಟ್ರಗಳಲ್ಲೂ ಮಳೆಯಿಂದಾಗಿ ಅವಘಡಗಳು ಸಂಭವಿಸಿಲ್ಲವೇ?’ ಇತ್ಯಾದಿ ಪುಂಖಾನುಪುಂಖವಾಗಿ ಪುಂಗಿ ಊದುತ್ತಾರೆ. ಆದರೂ ಮಳೆಗೆ ಒಡಿಶಾ ರಾಜ್ಯ ಮಾಡಿಕೊಂಡ ಸಿದ್ಧತೆಗೆ ಶಹಭಾಸ್ ಹೇಳಲೇಬೇಕು. ಮಳೆ ಮತ್ತು ಚಂಡಮಾರುತದ ಮುನ್ಸೂಚನೆ ಸಿಕ್ಕ ಎರಡೇ ದಿನಗಳಲ್ಲಿ 4 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಅಲ್ಲಿಯ ಆಡಳಿತ ವರ್ಗ ತಲುಪಿಸಿದೆ. ಮುಂದುವರಿದ ದೇಶಗಳಲ್ಲಿ ಅಥವಾ ರಾಜ್ಯಗಳಲ್ಲಿ ಆದರೆ ಒಂದು ಲೆಕ್ಕ.

ಒಡಿಶಾದಲ್ಲಿ ಈ ರೀತಿಯ ಒಂದು ಕಾರ್ಯ ನಡೆದಿದೆ ಎಂದರೆ ಇತ್ತೀಚಿನ ವರ್ಷಗಳ ಇದು ಮಾದರಿಯ ಕಾರ್ಯ. ಅಲ್ಲಿಯ ಆಡಳಿತ ವರ್ಗ ನಿಜಕ್ಕೂ ಅಭಿನಂದನೆಗೆ ಅರ್ಹ. ನಮ್ಮವರು ಯಾವಾಗ ಪಾಠ ಕಲಿಯುತ್ತಾರೋ ಏನೋ, ಆ ವರುಣ ದೇವನೇ ಹೇಳಬೇಕು.

ಇರಲಿ, ಈಗ ಒಂದು 3-4 ವರ್ಷದ ಹಿಂದೆ ನಡೆದ ಘಟನೆ ಹೇಳುತ್ತೇನೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಬಾಕಿ ದಿನಗಳಿಗಿಂತಲೂ ಒಂದೆರಡು ಗಂಟೆ ತಡವಾಗಿ ಮಲಗುವುದು, ಮಾರನೆಯ ದಿನ ತಡವಾಗಿ ಏಳುವುದು ವಾಡಿಕೆ. ಆ ವಾರಾಂತ್ಯದಲ್ಲಿಯೂ ಹಾಗೆಯೇ ಆಯಿತು. ಬೆಳಗ್ಗೆ ಏಳುವಾಗ ಸುಮಾರು ಹತ್ತೂವರೆ-ಹನ್ನೊಂದು ಗಂಟೆಯಾ
ಗಿತ್ತು. ಎದ್ದ ತಕ್ಷಣ ಎಂದಿನಂತೆ, ‘ಎಲ್ಲಿ ಏನೇನು ಆಯಿತು’ ಎಂದು ನೋಡಲು ಮೊಬೈಲ್ ಕೈಗೆತ್ತಿಕೊಂಡೆ. ಒಂದು ನ್ಯೂಸ್ ಚಾನೆಲ್‌ನಲ್ಲಿ ಬರುತ್ತಿದ್ದ ಸುದ್ದಿಯನ್ನು ಕಂಡು ಆತಂಕಕ್ಕೊಳಗಾದೆ. ಅದರಲ್ಲಿ, ‘ಕೊಲ್ಲಿ ರಾಷ್ಟ್ರಗಳು ಮಳೆಯಿಂದಾಗಿ ಸಾಕಷ್ಟು ಹಾನಿ ಗೊಳಗಾಗುತ್ತಿವೆ’ ಎಂಬ ಸುದ್ದಿ ಬರುತ್ತಿತ್ತು. ಇದೇನು, ಸುಡುವ ಬೇಸಗೆಯಲ್ಲಿ ಇಷ್ಟೊಂದು ಮಳೆಯೇ? ಕಳೆದ ಕೆಲವು ದಿನಗಳಿಂದಲೂ ಸೆಕೆ ಮತ್ತು ಬಿಸಿಲಿನ ಝಳ ಮಿತಿಮೀರಿದೆ, ಏನಿಲ್ಲ
ವೆಂದರೂ 46-47 ಡಿಗ್ರಿ ತಾಪಮಾನ ಇರುವ ಜಾಗದಲ್ಲಿ ಇದ್ದಕ್ಕಿದ್ದಂತೆ ಮಳೆ ಬರುತ್ತಿದೆ, ಅದರಲ್ಲೂ ಮಳೆಯಿಂದ ವಾಹನಗಳು, ಕಟ್ಟಡಗಳು ಹಾನಿಗೊಳಗಾಗಿವೆ ಎಂಬ ಸುದ್ದಿಯನ್ನು ಕನ್ನಡದ ವಾಹಿನಿಯಲ್ಲಿ ಕಂಡಾಗ ಮನಸ್ಸು ಕಳವಳಗೊಂಡಿತು.

ಹಾಸಿಗೆಯಿಂದ ಎದ್ದು ಕಿಟಕಿಯಿಂದ ಹೊರಗಡೆ ನೋಡಿದರೆ ಕಣ್ಣು ತೆರೆಯಲಾಗದಷ್ಟು ಬೆಳ್ಳಗಿನ ಬಿಸಿಲು.
ಕೂಡಲೇ ತಾಪಮಾನ ನೋಡಿದೆ. ಹವಾಮಾನ ವರದಿಯನ್ನೂ ನೋಡಿದೆ. ದೂರ ದೂರದಲ್ಲೂ ಮಳೆಯ ಲಕ್ಷಣ ಕಾಣಿಸಲಿಲ್ಲ. ಅಕ್ಕ-ಪಕ್ಕದ ದೇಶಗಳ ಹವಾಮಾನ ವರದಿಯನ್ನು ಪರಿಶೀಲಿಸಿದರೆ ಎಲ್ಲೂ ಮಳೆಯ ಸುಳಿವಿಲ್ಲ. ಬೆಂಗಳೂರಿನಲ್ಲಿ ಕುಳಿತವರಿಗೆ ಕೊಲ್ಲಿ ರಾಷ್ಟ್ರದಲ್ಲಿ ಇಷ್ಟೊಂದು ಮಳೆಯಾಗುತ್ತಿದೆ ಎಂದು ಹೇಳಿದವರಾದರೂ ಯಾರು? ಅದರಲ್ಲೂ ವಿಡಿಯೋ ಚಿತ್ರೀಕರಣ ಬೇರೆ ಇದೆ, ಮಾಡಿಕೊಟ್ಟವರು ಯಾರು ಎಂಬ ಕುತೂಹಲದಿಂದ
ನೇರವಾಗಿ ಆ ಸುದ್ದಿ ವಾಹಿನಿಯವರಿಗೆ ಕರೆ ಮಾಡಿದೆ. ‘ನಾವಿರುವ ದೇಶದಲ್ಲಿ ಮಳೆ ಬಂದು ಪ್ರವಾಹ ಉಂಟಾಗಿದೆ, ಅದರಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ತೋರಿಸುತ್ತಿದ್ದೀರಿ, ನಿಮಗೆ ಈ ಮಾಹಿತಿ ಕೊಟ್ಟವರು ಯಾರು?’ ಎಂದೆ.

ಅದಕ್ಕೆ ಅವರು ‘ನಿಮ್ಮ ದೇಶದಲ್ಲಿ ಈಗ ಮಳೆ ಬರುತ್ತಿಲ್ಲವೇ?’ ಎಂದು ಕೇಳಿದರು. ಕೂಡಲೇ ನಾನು ಅಂದಿನ ವಾತಾವರಣದ ಎರಡು ಫೋಟೋ, ಒಂದು ವಿಡಿಯೋ ತುಣುಕನ್ನು ಕಳುಹಿಸಿಕೊಟ್ಟೆ. ಅದನ್ನು ನೋಡಿ, ಹಿಂತಿರುಗಿ ಕರೆಮಾಡಿ ನಗುತ್ತಾ, ‘ಇದು ಟಿಆರ್‌ಪಿಗೋಸ್ಕರ ನಮ್ಮವರು ಯಾವತ್ತೋ ಮಾಡಿದ ಒಂದು ಕಥೆಯನ್ನು ಹಾಕಿಕೊಂಡಿ ರುತ್ತಾರೆ. ನೀವು ತಲೆಕೆಡಿಸಿಕೊಳ್ಳಬೇಡಿ’ ಎಂದರು.

‘ಕೊಲ್ಲಿಯಲ್ಲಿ ಮಳೆಯಾದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ನಿಮಗೆ ಹೇಗೆ ಟಿಆರ್‌ಪಿ ಸಿಗುತ್ತದೆ?’
ಎಂದು ಕೇಳಿದೆ. ಅವರು, ‘ಭಾರತದ ಸುದ್ದಿವಾಹಿನಿಗಳಲ್ಲಿ ಭಾರತ-ಪಾಕಿಸ್ತಾನದ ನಡುವಿನ ಯುದ್ಧ ಅಥವಾ ಭಾರತ-ಚೀನಾದ ನಡುವಿನ ಯುದ್ಧ, ಮೋದಿಯವರ ಭಾಷಣ, ಪ್ರಳಯ, ಕೊಲ್ಲಿಯಲ್ಲಿ ಮಳೆ ಮತ್ತು ಪ್ರವಾಹದ ವಿಷಯ ಗಳು, ಇನ್ನು ಕರ್ನಾಟಕದದರೆ ರಿಯಾಲಿಟಿ ಶೋದಲ್ಲಿ ವಿಜೇತನಾದ ಹಾಡುಗಾರ ಹನುಮಂತುವಿನ ಕಥೆಗೆ
ಟಿಆರ್‌ಪಿ ಬರುತ್ತದೆ. ಅದಕ್ಕೆ ಆಗಾಗ ಅದೇ ಕಥೆಯನ್ನು ತೋರಿಸುತ್ತಿರುತ್ತಾರೆ.

ನೀವು ನಿಶ್ಚಿಂತರಾಗಿರಿ’ ಎಂದರು. ಅಂದು ನನ್ನಂತೆ ಬಹುತೇಕ ಜನರು ಆ ಸುದ್ದಿಯನ್ನು ನೋಡಿ ಆತಂಕಕ್ಕೊಳ ಗಾಗಿರಬಹುದು ಅಥವಾ ನಕ್ಕಿರಲೂಬಹುದು. ಆದರೆ ಇದೇ ವರ್ಷ ಕೊಲ್ಲಿ ರಾಷ್ಟ್ರಗಳಲ್ಲಿ, ಅದರಲ್ಲೂ ದುಬೈನಲ್ಲಿ ಮಳೆಯಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿದವು. ಆದರೆ ಅಂದು ಕಥೆಯಲ್ಲಿ ತೋರಿಸಿದಷ್ಟನ್ನು ನಿಜ ವಾಗಿ ಮಳೆಯಾದಾಗ ಯಾವ ಸುದ್ದಿವಾಹಿನಿಗಳೂ ತೋರಿಸಲಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಮಳೆಯಿಂದಾಗಿ ಆದ ಆವಾಂತರವನ್ನೂ ಹೆಚ್ಚು ತೋರಿಸಲಿಲ್ಲ, ಅಥವಾ ತೋರಿಸಲು ಆಗಲಿಲ್ಲ ಅನ್ನಿ. ಅಲ್ಲ, ವರದಿಗಾರರು, ಕ್ಯಾಮೆರಾಮನ್‌ಗಳು ತಲುಪಲೇ ಆಗದಿರುವಾಗ ಅಲ್ಲಿಯ ದೃಶ್ಯಗಳನ್ನು ಸೆರೆ ಹಿಡಿಯುವುದಾದರೂ ಹೇಗೆ? ಸುದ್ದಿ ತೋರಿಸುವುದಾದರೂ ಹೇಗೆ? ಹಾಗಾದರೆ ಮರುಭೂಮಿಯಲ್ಲಿ ಮಳೆಯೇ ಆಗುವುದಿಲ್ಲವೆ? ಆಗುತ್ತದೆ. ಮಳೆ ಬಂದಾಗ ಇಲ್ಲಿಯ ಸ್ಥಳೀಯ ಜನರು, ಅಂದರೆ ಅರಬ್ಬರು ಅದನ್ನು ತುಂಬಾ ಇಷ್ಟಪಡುತ್ತಾರೆ.

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಇಲ್ಲಿಯ ಶಹರ, ಪಟ್ಟಣದಲ್ಲಿರುವ ಸ್ಥಳೀಯರು ತಮ್ಮ ಕುಟುಂಬ
ಸಮೇತ ಮರಳುಗಾಡಿಗೆ ಹೋಗಿ ನೆಲೆಸುತ್ತಾರೆ.

ಅಲ್ಲಿಯೇ ಒಂದು ಟೆಂಟ್ ಹಾಕಿಕೊಂಡು, ಕೆಲವು ದಿನ ಅಲ್ಲಿಯೇ ವಾಸಿಸುತ್ತಾರೆ. ಯಾಕೆಂದರೆ ಮಳೆಯ ಪ್ರಮಾಣ ಅಷ್ಟೊಂದು ಜೋರಾಗಿ ಇರುವುದಿಲ್ಲ. ಕೆಲವೊಮ್ಮೆ ಒಂದೆರಡು ದಿನ ಜೋರಾಗಿ ಸುರಿದರೂ ನಂತರ ಒಂದು ನಾಲ್ಕು ದಿನ ವಾತಾವರಣ ತಣ್ಣಗಿರುತ್ತದೆ. ಹಾಗಾಗಿ ಮಡದಿ ಮಕ್ಕಳೊಂದಿಗೆ ಮರಳುಗಾಡಿಗೆ ಹೋಗುವ ಅರಬ್ಬರು, ಅವರದೇ ಭಾಷೆಯಲ್ಲಿ ‘ಮರುಭೂಮಿ ಮಳೆಯೇ… ಏನು ನಿನ್ನ ಹನಿಗಳ ಲೀಲೆ’ ಎಂದು ಜಾಲಿಹಾಡನ್ನು ಹಾಡಿಕೊಂಡು, ಸಂತೋಷದಿಂದ ಕೆಲ ಸಮಯ ಇದ್ದು ಹಿಂದಿರುಗುತ್ತಾರೆ.

ಹಾಗಂತ ಮರುಭೂಮಿಯಲ್ಲಿ ಬೀಳುವ ಎಲ್ಲ ಮಳೆಯೂ ಒಳ್ಳೆಯದಲ್ಲ. ‘ನಾಸಾ’ ಸಂಸ್ಥೆ ಇತ್ತೀಚೆಗೆ ಸಹಾರಾ
ಮರುಭೂಮಿಯ ಒಂದು ಚಿತ್ರವನ್ನು ಬಿಡುಗಡೆ ಮಾಡಿದೆ. ಉಪಗ್ರಹದಿಂದ ತೆಗೆದ ಚಿತ್ರ ಅದು. ಅದರಲ್ಲಿ, ಸಹಾರಾ ಮರುಭೂಮಿಯಲ್ಲಿ ಆಲ್ಲಲ್ಲಿ ಹಸಿರು ಛಾಯೆ ಕಾಣಿಸುತ್ತಿದೆ. ಹಸಿರು ಎಂದರೆ, ಅದು ಗಿಡ-ಗಂಟಿ-ಮರಗಳ ಸಂಕೇತ. ಮರುಭೂಮಿಯಲ್ಲಿ ಹಸಿರು ಕಂಡಾಗ ಸಾಮಾನ್ಯ ವಾಗಿ ಬಹುತೇಕ ಜನರಿಗೆ ಖುಷಿಯಾಗುತ್ತದೆ. ಆದರೆ ಅದು ಖಂಡಿತ ವಾಗಿಯೂ ಖುಷಿ ಪಡುವ ವಿಷಯವಲ್ಲ.

ಹಾಗಾದರೆ ಮರಳುಗಾಡಿನಲ್ಲಿ ಸಣ್ಣ ಹುಲ್ಲು ಕಡ್ಡಿಯೂ ಹುಟ್ಟುವುದಿಲ್ಲ, ಮಳೆಯೇ ಆಗುವುದಿಲ್ಲ ಎಂದಲ್ಲ. ಒಂದು ಪ್ರಮಾಣದಲ್ಲಿ ಎಲ್ಲವೂ ಆಗುತ್ತದೆ. ಅದು ಆ ಪ್ರಮಾಣದಲ್ಲಿ ಆದರೆ ಮಾತ್ರ ಒಳ್ಳೆಯದು. ಸಹಾರಾ ಮರುಭೂಮಿ ಆಫ್ರಿಕಾ ಖಂಡದ ಬಹುತೇಕ ಉತ್ತರ ಭಾಗವನ್ನು ಆವರಿಸಿಕೊಂಡಿದೆ. ಸಹಾರಾ, ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದು. ಹಠದ ಪಟ್ಟು ಬಿಡದ ಸೂರ್ಯ ಯಾವತ್ತೂ ತನ್ನ ಸುಡುವ ಗುಣದಿಂದ ವಿಮುಖನಾಗದ ಪ್ರದೇಶ ಸಹಾರಾ ಮರುಭೂಮಿ.

90 ಲಕ್ಷ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿರುವ ಸಹಾರಾ ವಿಶ್ವದ ಅತಿದೊಡ್ಡ ಶುಷ್ಕ, ಸುಡುವ ಮರುಭೂಮಿ. ಅಂಥ ಮರುಭೂಮಿಯಲ್ಲಿ ಹಸಿರು ಕಾಣಿಸಿಕೊಳ್ಳುತ್ತಿದೆ ಎಂದರೆ ಹೇಗೆ? ಅದರಲ್ಲೂ, ಆ ಪ್ರದೇಶದಲ್ಲಿ ಕೇವಲ 48 ಗಂಟೆಗಳಲ್ಲಿ 200 ಮಿಲಿಮೀಟರ್ ಮಳೆ ಯಾಗಿದೆ ಎಂದರೆ ನಂಬಬೇಕೇ? ನಾಸಾ ಬಿಡುಗಡೆ ಮಾಡಿದ ಚಿತ್ರ ಮತ್ತು ಡ್ರೋನ್ ಸೆರೆಹಿಡಿದ ಕೆಲವು ವಿಡಿಯೋ ದೃಶ್ಯಗಳನ್ನು ಕಂಡಾಗ ನಂಬಲೇಬೇಕು.

ಮರುಭೂಮಿಯಲ್ಲಿ ಕೆಲವು ದಿನಗಳ ಹಿಂದೆ ಮಳೆಯಾದದ್ದಷ್ಟೇ ಅಲ್ಲ, ಜಲಾವೃತವಾದ ಮರುಭೂಮಿಯಲ್ಲಿ ಕೆರೆಗಳೇ ನಿರ್ಮಾಣವಾಗಿವೆ. ಅವೆಲ್ಲ ತಾತ್ಕಾಲಿಕ ಕೆರೆಗಳು ಎನ್ನುವುದನ್ನು ಒಪ್ಪಿಕೊಳ್ಳೋಣ. ಮರಳುಗಾಡಿನಲ್ಲಿ,
ಬರಡು ಭೂಮಿಯಲ್ಲಿ ಮಳೆ ಬಿದ್ದರೆ ನೀರು ಭೂಮಿಯೊಳಗೆ ಬೇಗ ಇಳಿಯಬೇಕು ಎನ್ನುವುದು ಸಾಮಾನ್ಯರ ವಾದ. ಆದರೆ ಬಹುತೇಕ ಮರುಭೂಮಿಯಲ್ಲಿ, ಮೇಲೆ ಮರಳು ಕಂಡರೂ ಅದರ ಕೆಳಗೆ ಗಟ್ಟಿಯಾದ ಮಣ್ಣು ಇರುತ್ತದೆ. ಮರುಭೂಮಿಯ ಸುತ್ತಮುತ್ತ ಯಾವುದೇ ರಸ್ತೆ ನಿರ್ಮಾಣ ಮಾಡಬೇಕಾದರೆ ಇದೇ ಮಣ್ಣನ್ನು ಬಳಸುತ್ತಾರೆ.

ಇದು ಸುಣ್ಣದ ಕಲ್ಲಿನಂಥ ಮಣ್ಣು. ಒಮ್ಮೆ ನೀರು ಹನಿಸಿದಾಗ ಹಸಿಯಾಗಿ ಅರಳುತ್ತದೆಯಾದರೂ, ಒಣಗಿದಾಗ ಗಟ್ಟಿ ಕಲ್ಲಿನಂತಾಗುತ್ತದೆ. ಅದರ ಒಳಗೆ ನೀರು ಬೇಗನೆ ಇಳಿದು ಹೋಗುವುದಿಲ್ಲ. ಆ ಭೂಮಿಯಲ್ಲಿ ನೀರು ಇಂಗುವು ದಕ್ಕಿಂತ ಆವಿಯಾಗಿ ಹೋಗುವುದೇ ಹೆಚ್ಚು. ಆದ್ದರಿಂದ ಮರುಭೂಮಿಯಲ್ಲಿ ಅಥವಾ ಆ ಪ್ರದೇಶದಲ್ಲಿ ನಿರ್ಮಿಸಿದ ನಗರಗಳಲ್ಲಿ, ಪಟ್ಟಣಗಳಲ್ಲಿ ಮಳೆ ಬಂದಾಗ ಪ್ರವಾಹದ ಸ್ಥಿತಿ ಏರ್ಪಡುತ್ತದೆ.

ಅದಿರಲಿ, ಸಹಾರಾದ ವಿಷಯಕ್ಕೆ ಬರುವುದಾದರೆ, ಮಿಲಿಯನ್‌ಗಟ್ಟಲೆ ಚದರ ಕಿ.ಮೀ. ವಿಸ್ತೀರ್ಣಕ್ಕೆ ವ್ಯಾಪಿಸಿರುವ ಈ ಮರುಭೂಮಿ, ಮಿಲಿಯನ್ ವರ್ಷಗಳ ಮೊದಲು ಹಸಿರಾಗಿಯೇ ಇತ್ತು ಎಂದು ಅಧ್ಯಯನ ಹೇಳುತ್ತದೆ. ಸಹಾರಾ
ಮರುಭೂಮಿ ಎಂದರೆ ಭೂವಿeನಿಗಳಿಗೆ ಒಂದು ದೊಡ್ಡ ಭೂವಸ್ತು ಸಂಗ್ರಹಾಲಯದಂತೆ. ಸಾವಿರಾರು ವರ್ಷಗಳ ಹಿಂದೆ ಸಹಾರಾ ಇಂದಿನಂತೆ ಇರಲಿಲ್ಲ. ಅಲ್ಲಿಯೂ ಸರೋವರ, ನದಿ ಇದ್ದವು. ಆ ಭೂಪ್ರದೇಶ ಕಾಡುಗಳಿಂದ ಕೂಡಿ ಹಚ್ಚ ಹಸಿರಾಗಿತ್ತು ಎನ್ನುವುದು ಈಗ ಇತಿಹಾಸ. ಆದ್ದರಿಂದ ಸಹಾರಾ ಮರುಭೂಮಿ ವಿಜ್ಞಾನಿಗಳಿಗೆ ಸದಾ ಅಧ್ಯಯನಕ್ಕೆ ಯೋಗ್ಯವಾದ ಪ್ರದೇಶ. ಆದರೆ ಈ ಬಾರಿಯ ಹವಾಮಾನ ಬದಲಾವಣೆ ಒಂದು ವಿಶೇಷವೂ
ಹೌದು, ಆತಂಕಕಾರಿಯೂ ಹೌದು.

ಇತ್ತೀಚೆಗೆ ಆಫ್ರಿಕಾದ ಉತ್ತರದ ದೇಶಗಳಾದ ಮೊರಾಕೊ, ಅಲ್ಜೀರಿಯಾ, ಲಿಬಿಯಾ, ಟುನೀಶಿಯಾ ದೇಶಗಳಲ್ಲಿ ಸಸ್ಯಗಳು ಹೆಚ್ಚು ಬೆಳೆಯುತ್ತಿವೆ. ಈ ದೇಶ ಸಾಮಾನ್ಯವಾಗಿ ಹೆಚ್ಚು ಮರಗಳಿಲ್ಲದ ಭೂಪ್ರದೇಶ. ಅಲ್ಲಿ ಮಳೆ ಬಹಳ ಅಪರೂಪ. ಆದರೂ ಈಗ ಈ ಪ್ರದೇಶದಾದ್ಯಂತ ಹೆಚ್ಚು ಹೆಚ್ಚು ಹಸಿರು ಚಿಗುರುತ್ತಿವೆ. ಅದು ಒಳ್ಳೆಯದೇ ಅಲ್ಲವೇ?
ಮರುಭೂಮಿಯಲ್ಲಿ ಮಳೆ ಬಿದ್ದರೆ ಯಾರಾದರೂ ಏಕೆ ಆತಂಕ ಪಡಬೇಕು? ಎರಡು ಪ್ರಮುಖ ಕಾರಣಗಳಿಂದಾಗಿ ಆತಂಕ ಪಡಬೇಕು.

ಮೊದಲನೆಯದು, ಮರುಭೂಮಿಯಲ್ಲೂ ಕೆಲವು ಜೀವ ಜಂತುಗಳಿರುತ್ತವೆ. ಉದಾಹರಣೆಗೆ, ಇಲಿ, ಉಡ, ಹಲ್ಲಿ, ಹಾವು ಅಥವಾ ನರಿ ಇತ್ಯಾದಿ. ಮರುಭೂಮಿಯಲ್ಲಿ ಸಾಕಷ್ಟು ಕ್ರಿಮಿಕೀಟಗಳೂ ಇರುತ್ತವೆ. ಹಲ್ಲಿ, ಉಡ ಹಾವಿನಂಥ ಜೀವಿಗಳಿಂದಾಗಿ ಅವು ಒಂದು ಮಿತಿಯಲ್ಲಿರುತ್ತವೆ. ಅಲ್ಲಿಯೂ ಒಂದು ಜೀವನಚಕ್ರವಿರುತ್ತದೆ. ಹೆಚ್ಚು ಮಳೆಯಾದರೆ
ಇಲಿ, ಹಲ್ಲಿ, ಉಡದಂಥ ಪ್ರಾಣಿಗಳು ಸತ್ತುಹೋಗುತ್ತವೆ. ಆಗ ಮರುಭೂಮಿಯ ಜೀವನಚಕ್ರವೇ ಬದಲಾಗುತ್ತದೆ. ಮರಳುಗಾಡಾಗಲಿ, ಹಸಿರು ಕಾಡಾಗಲಿ, ಎಲ್ಲದಕ್ಕೂ ಅವುಗಳದ್ದೇ ಆದ ಒಂದು ಪ್ರಕೃತಿ ನಿಯಮವಿದೆ.

ಯಾವ ಪ್ರದೇಶದಲ್ಲಿಯೇ ಆದರೂ ಈ ಪ್ರಕೃತಿ ನಿಯಮ ಏರುಪೇರಾಗಬಾರದು. ಅವು ತಮ್ಮ ಲಯದಲ್ಲಿಯೇ ಮುಂದುವರಿಯಬೇಕು. ಆ ಲಯ ತಪ್ಪಿದರೆ ಮುಂದೆ ಆಗುವ ಅವಘಡವನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ವಿಲ್ಲ.

ಇನ್ನೊಂದು ಪ್ರಮುಖ ಕಾರಣ, ಬೋಳು ಬಯಲಿನಲ್ಲಿ ಮರ-ಗಿಡಗಳು ಬೆಳೆದಾಗ ಮಾರುತ ತನ್ನ ದಿಕ್ಕು ಬದಲಿಸ ಬೇಕಾಗುತ್ತದೆ. ಅಂದರೆ, ಚಂಡ ಮಾರುತ ಜಾಡು ಬದಲಾಯಿಸಬೇಕಾಗುತ್ತದೆ. ಆಗ ಪ್ರವಾಹದ ಪ್ರದೇಶ ಬೇರೆಯಾ ಗುತ್ತದೆ. ಈಗ ಆಫ್ರಿಕಾದಲ್ಲಿ ಆಗುತ್ತಿರುವುದು ಅದೇ. ಕೆಲವೇ ದಿನಗಳ ಅವಧಿಯಲ್ಲಿ ಉತ್ತರ ಆಫ್ರಿಕಾದಲ್ಲಿ ಒಂದು ಇಡೀ ವರ್ಷ ಸುರಿಯುವಷ್ಟು ಮಳೆ ಸುರಿದಿದೆ.

ಒಣ ಭೂಮಿಯ ದೇಶಗಳಾದ ಚಾಡ್, ನೈಜರ್, ಸುಡಾನ್, ಈಜಿ ಮತ್ತು ಲಿಬಿಯಾದಲ್ಲಿ ಕಳೆದ ಜುಲೈನಿಂದ ಇಲ್ಲಿಯವರೆಗೆ ಪ್ರತಿವರ್ಷಕ್ಕಿಂತ 4 ಪಟ್ಟು ಹೆಚ್ಚು ಮಳೆ ಸುರಿದಿದೆ. ಪ್ರವಾಹದಿಂದಾಗಿ ಸಾಕಷ್ಟು ದುರಂತಗಳಾಗಿವೆ. ಇದರೊಂದಿಗೆ 40 ಲಕ್ಷ ಜನ ತೀವ್ರ ಹಾನಿಗೊಳಗಾಗಿದ್ದಾರೆ. ಸಹಾರಾ ಮರುಭೂಮಿಯಲ್ಲಿ ಬಿದ್ದ ಮಳೆಯಿಂದಾಗಿ ಮರುಭೂಮಿಯು ವಾಸ್ತವವಾಗಿ ಇರಬೇಕಾದದ್ದಕ್ಕಿಂತ ೬ ಪಟ್ಟು ಹೆಚ್ಚು ತೇವವಾಗಿದೆ.

ಈ ನಡುವೆ ನೈಜೀರಿಯಾ ಮತ್ತು ಕ್ಯಾಮರೂನ್‌ನಂಥ ದೇಶದಲ್ಲಿ ಮಳೆಯ ಪ್ರಮಾಣ ಕುಗ್ಗಿದೆ. ಜುಲೈನಿಂದ ಇಲ್ಲಿಯ
ವರೆಗೆ ಆ ಪ್ರದೇಶದಲ್ಲಿ ಪ್ರತಿವರ್ಷ ಸುರಿಯುವ ಮಳೆಯ ಪ್ರಮಾಣ ಅರ್ಧದಿಂದ ಮುಕ್ಕಾಲು ಭಾಗ ಕಡಿಮೆಯಾಗಿದೆ. ತಜ್ಞರ ಪ್ರಕಾರ ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಪತ್ತುಗಳು ಎದುರಾಗಲಿವೆ. ನಾಸಾ ಬಿಡುಗಡೆ ಮಾಡಿದ ಇನ್ನೊಂದು ಚಿತ್ರದಲ್ಲಿ ಮಂಜುಗಡ್ಡೆಯ ಪ್ರದೇಶ ವಾದ ಅಂಟಾರ್ಕ್ಟಿಕಾ ದಲ್ಲೂ ಹಸಿರಿನ ಛಾಯೆ ಕಾಣಿಸಿಕೊಳ್ಳುತ್ತಿದೆ. ಅಲ್ಲಿಯೂ ಸಸ್ಯಗಳು ಬೆಳೆಯಲು ಶುರುವಾಗಿದೆ.

ಎಂದರೆ, ಮಂಜು ಕರಗುತ್ತಿದೆ, ತಾಪಮಾನ ಹೆಚ್ಚುತ್ತಿದೆ ಎಂದೇ ಅರ್ಥ. ಅದರಿಂದಾಗಿ ಆ ಪ್ರದೇಶದಲ್ಲಿ ಮಾತ್ರವಲ್ಲ,
ಭೂಮಿಯ ಇತರ ಭಾಗಗಳಿಗೂ ಅದರ ಪರಿಣಾಮ ಉಂಟಾಗುತ್ತದೆ. ಅದು ಇನ್ನೊಂದು ವಿಷಯ. ಮಳೆ ಬೀಳುವಲ್ಲಿ ಬಿದ್ದರೇನೇ ಚೆಂದ, ಹಸಿರು ಇರುವಲ್ಲಿ ಇದ್ದರೇನೇ ಚೆಂದ. ಮರುಭೂಮಿಯೇ ಆಗಲಿ ಅಂಟಾರ್ಕ್ಟಿಕಾದಂಥ ಮಂಜು ಗಡ್ಡೆಯ ಪ್ರದೇ ಶವೇ ಆಗಲಿ, ಹಸಿರಾಗುವುದು ಒಳ್ಳೆಯ ಲಕ್ಷಣವಲ್ಲ. ಕಾಡಿಗೆ ಬೆಂಕಿ ಬೀಳುವುದು, ಮರಳುಗಾಡಿನಲ್ಲಿ ಮಳೆ ಬರುವುದು, ಎರಡೂ ಒಂದೇ!

ಇದನ್ನೂ ಓದಿ: Kiran Upadhyay Column: ಕೂದಲು ಇಲ್ಲದಿದ್ದರೆ ತಲೆಗೆ ಬೆಲೆ ಇಲ್ಲವೇ…!?