Monday, 28th October 2024

Surendra Pai Column: ಮಣ್ಣಿನ ಹಣತೆ ಬೆಳಗೋಣ

ಸುರೇಂದ್ರ ಪೈ, ಭಟ್ಕಳ

ಪರಿಸರ ಸ್ನೇಹಿ ಎನಿಸಿರುವ ಮಣ್ಣಿನ ಹಣತೆಗಳನ್ನು ದೀಪಗಳ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಎನಿಸಿರುವ ಮಣ್ಣಿನ ಬೆಳಗುವ ಮೂಲಕ ಪರಿಸರ ರಕ್ಷಿಸಲು ಕಿರು ಕಾಣಿಕೆ ನೀಡೋಣ.

ದೀಪಗಳ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ಬೆಳಕಿನ ಹಬ್ಬ ದೀಪಾವಳಿ ಎಂದಾಕ್ಷಣ ನೆನಪಾಗುವುದೇ ಹಣತೆ, ದೀಪಗಳು, ಆಕಾಶ ಬುಟ್ಟಿ ಹಾಗೂ ಪಟಾಕಿ. ದೀಪಾವಳಿಯಂದು ಬಲಿಂದ್ರನಿಗೆ ಪೂಜೆ ಮಾಡಿ, ಎಲ್ಲರೂ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ, ದೇವಸ್ಥಾನಕ್ಕೆ ಹೋಗುತ್ತೇವೆ. ಸಂಜೆಯಾಗುತ್ತಿದ್ದ ಹಾಗೇ ಮನೆಯವರೆಲ್ಲಾ ಸೇರಿ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸಿ ಜ್ಞಾನದ ಬೆಳಕನ್ನು ತೋರುವ ದೀಪ ಗಳನ್ನು ಮನೆಯ ಒಳಗೂ ಹೊರಗೂ ಹಚ್ಚುತ್ತಾ , ಪಟಾಕಿ ಸಿಡಿಸುತ್ತಾ ಸಂಭ್ರಮಿಸುವ ದೃಶ್ಯ ನೋಡುವುದೇ
ಒಂದು ಸೊಬಗು.

ನಾವೆಲ್ಲಾ ದೀಪಾವಳಿ ಹಬ್ಬವೇನೋ ಆಚರಿಸುತ್ತಿದ್ದೇವೆ ನಿಜ; ಆದರೆ ಮಣ್ಣಿನ ದೀಪಕ್ಕೆ ಬದಲಾಗಿ ಬಣ್ಣ ಬಣ್ಣದ
ಪಿಂಗಾಣಿ ಹಾಗೂ ಪ್ಲಾಸ್ಟಿಕ್ ಮತ್ತು ಎಲ್‌ಇಡಿ ಬಲ್ಬ್‌ನಂತಹ ವಿದ್ಯುತ್ಚಾಲಿತ ದೀಪಗಳನ್ನು ಬಳಸುತ್ತಿದ್ದೇವೆ. ಇವೆಲ್ಲವೂ ಸಹ ದೀಪಗಳನ್ನೆನೋ ಬೆಳಗುತ್ತವೆ ನಿಜ, ಆದರೆ ದೀಪಾವಳಿಯಂದು ಹಿಂದಿನಿಂದಲೂ ಸಾಂಪ್ರ ದಾಯಿಕವಾಗಿ ಮಣ್ಣಿನ ಪ್ರಣತಿಗಳಲ್ಲಿ ದೀಪಗಳನ್ನು ಹಚ್ಚುವ ಹಿಂದಿನ ಉದ್ದೇಶ, ಪೌರಾಣಿಕ ಹಿನ್ನೆಲೆ,
ಅವುಗಳನ್ನು ಹಚ್ಚುವ ಸಡಗರ, ಅವು ಬೀರುವ ಬೆಳಿನ ಹೊಳಪು ಇವೆಲ್ಲವೂ ವಿಶಿಷ್ಟವಾದ ಅನುಭೂತಿಯನ್ನು
ನೀಡುತ್ತಿದ್ದವು. ಹಾಗಾಗಿ ಮಣ್ಣಿನ ಪ್ರಣತಿಗಳ ದೀಪಗಳು ವಿಶೇಷವಾದ ಸ್ಥಾನವನ್ನು ಹೊಂದಿವೆ.

ದೀಪಾವಳಿಯಂದು ಮಣ್ಣಿನ ಹಣತೆಯಲ್ಲಿ ಬೆಳಗುವ ದೀಪಗಳಿಗೆ ವಿಶೇಷ ಮಹತ್ವವಿದೆ. ಮಣ್ಣಿನ ಪಾತ್ರೆಯಲ್ಲಿ
ಬ್ರಹ್ಮ ದೇವರ ಸಾನಿಧ್ಯ, ತೈಲದಲ್ಲಿ ಲಕ್ಷ್ಮೀದೇವಿಯು ಹಾಗೂ ಹಚ್ಚುವ ಬತ್ತಿಯಲ್ಲಿ ವಸುದೇವನ ಸನ್ನಿಧಾನ
ಇರುವುದರಿಂದಲೇ ಮಣ್ಣಿನ ಹಣತೆಗಳಲ್ಲಿ ದೀಪ ಬೆಳಗಿದರೆ ಸುಖ, ನೆಮ್ಮದಿ ಹಾಗೂ ಸಮೃದ್ಧಿಯ ಸಂಕೇತವೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೇ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿದರೆ ಗುರುಗಳ ಮತ್ತು ದೇವತೆಗಳ ಅನುಗ್ರಹವು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯು ಇದೆ.

ಪರಿಸರ ಸ್ನೇಹಿ ಮಣ್ಣಿನ ಹಣತೆಗಳು
ಮೊದಲೆಲ್ಲಾ ದೀಪಾವಳಿಗೂ ಒಂದೆರಡು ತಿಂಗಳು ಮುನ್ನವೇ ಕುಶಲಕರ್ಮಿಗಳು ಜೇಡಿ ಮಣ್ಣನ್ನು ತಂದು
ಹದಗೊಳಿಸಿ ಸಾವಿರಾರು ಮಣ್ಣಿನ ಹಣತೆಗಳನ್ನು ತಯಾರಿಸುತ್ತಿದ್ದರು. ಅಂಗಡಿ ವ್ಯಾಪಾರಸ್ಥರು ಅವುಗಳನ್ನು ಖರೀದಿಸಿ ದೀಪಾವಳಿ ಸಮಯದಲ್ಲಿ ದಿನಕ್ಕೆ ಸಾವಿರಾರು ಮಣ್ಣಿನ ಹಣತೆಯನ್ನು ಮಾರಾಟ ಮಾಡುತ್ತಿದ್ದರು. ಒಬ್ಬೊಬ್ಬರು ಕನಿಷ್ಠ ೪೦ -೫೦ ಹಣತೆಗಳನ್ನು ಕೊಳ್ಳುತ್ತಿದ್ದರು. ಆಗ ಕುಶಲಕರ್ಮಿಗಳ ಬದುಕು ಹಾಗೂ ನಮ್ಮ ಸಾಂಪ್ರದಾಯಿಕ ಕಲೆಯು ಸುರಕ್ಷಿತವಾಗಿತ್ತು. ಇಂತಹ ಮಣ್ಣಿನ ದೀಪಗಳನ್ನು ಹಬ್ಬ ಮುಗಿದ ಬಳಿಕ ರಕ್ಷಿಸಿಟ್ಟು, ಮರುವರ್ಷ ಮರುಬಳಕೆ ಮಾಡುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಬಣ್ಣ ಬಣ್ಣದ ಪಿಂಗಾಣಿ ದೀಪ, ಪ್ಲಾಸ್ಟಿಕ್ ದೀಪ ಹಾಗೂ ಎಲ್ ಇ ಡಿ ವಿದ್ಯುತ್ಚಾಲಿತ ದೀಪಗಳ ಹಾವಳಿಯಿಂದಾಗಿ ಗ್ರಾಹಕರೆಲ್ಲರೂ ಮಣ್ಣಿನ ದೀಪಗಳನ್ನು ಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಇಂದಿನ ಪ್ಲಾಸ್ಟಿಕ್ ಯುಗದ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಮಣ್ಣಿನ ಹಣತೆ ತಯಾರಿ ಸುವ ಕಲೆ ಕಣ್ಮರೆಯಾಗುತ್ತಿದೆ. ಆಧುನಿಕತೆಯ ಹಾಗೂ ಜಾಗತಿಕರಣದ ಹೆಸರಿನಲ್ಲಿ ಹಬ್ಬಗಳ ರೀತಿಗಳು ಬದಲಾಗು ತ್ತಿವೆ. ನಮ್ಮ ಸುತ್ತಮುತ್ತಲಿನ ಕುಂಬಾರರ ಬದುಕು ಹಸನಾಗಲು ಆದಷ್ಟು ಮಣ್ಣಿನ ಹಣತೆಗಳನ್ನು ಖರೀದಿಸೋಣ. ಈ ಮೂಲಕ ಹಚ್ಚುವ ಹಣತೆಯು ಅವರ ಬದುಕಿನಲ್ಲಿ ಬೆಳಕು ಹೆಚ್ಚಿಸಲಿ. ಹಬ್ಬದ ಜತೆಯಲ್ಲೇ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉಳಿಸಿಕೊಳ್ಳೋಣ, ಮಣ್ಣಿನ ಹಣತೆ ಬೆಳಗೋಣ.