Friday, 22nd November 2024

Ayodhya Ram Mandir: ಅಯೋಧ್ಯೆಯಲ್ಲಿ ದೀಪಗಳ ಹಬ್ಬಕ್ಕೆ ಸಕಲ ಸಿದ್ಧತೆ; ದೀಪೋತ್ಸವದ ನಡುವೆ ಕಂಗೊಳಿಸಲಿದೆ ರಾಮ ಮಂದಿರ

Ayodhya Ram Mandir

ಅಯೋಧ್ಯಾ: ಈ ವರ್ಷ ಅಯೋಧ್ಯೆಯಲ್ಲಿ ಭರ್ಜರಿ ದೀಪಾವಳಿ ಹಬ್ಬ ಆಚರಣೆಗೆ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅದ್ಧೂರಿಯಾಗಿ 8ನೇ ದೀಪೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯ (Ayodhya Ram Mandir) ಬಳಿಕ ಇದು ಮೊದಲ ದೀಪಾವಳಿಯಾಗಿದೆ. ಈಗಾಗಲೇ ದೀಪೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ದೇವಾಲಯವು ಪರಿಸರ ಸ್ನೇಹಿ ದೀಪಗಳಿಂದ ಕಂಗೊಳಿಸಲಿದೆ. ದೀಪದಿಂದಾಗುವ ಕಲೆಗಳು ಹಾಗೂ ಮಸಿಗಳನ್ನು ತಪ್ಪಿಸಲು ವೀಶೇಷವಾಗಿ ದೀಪಗಳನ್ನು ರಚಿಸಲಾಗಿದೆ. ಹಾಗೂ ದೀರ್ಘಕಾಲ ಬೆಳಗುವಂತ ದೀಪಗಳನ್ನು ತಯಾರಿಸಲಾಗಿದೆ.

ಅಯೋಧ್ಯೆಯಲ್ಲಿನ ಈ ದೀಪೋತ್ಸವ ಸರಯೂ ನದಿಯ ದಂಡೆಯ ಮೇಲೆ ನಡೆಯಲಿದೆ. ಈ ವರ್ಷ ಸರಿಸುಮಾರು 25 ರಿಂದ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆಯ ಗುರಿಯನ್ನು ಹೊಂದಿದೆ. ಹೂವಿನಿಂದ ರಾಮಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇವಾಲಯದ ಸಂಪೂರ್ಣ ಅಲಂಕಾರಕ್ಕಾಗಿ ವಿವಿಧ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ.

ದೀಪಗಳ ವ್ಯವಸ್ಥೆ ಪ್ರವೇಶ ಕಮಾನು ಅಲಂಕಾರಗಳು ಮತ್ತು ಸಂಪೂರ್ಣ ಶುಚಿಗೊಳಿಸುವಿಕೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಬಿಹಾರ ಕೇಡರ್‌ನ ನಿವೃತ್ತ ಪೋಲೀಸ್ ಅಶು ಶುಕ್ಲಾ ಅವರಿಗೆ ವಹಿಸಲಾಗಿದೆ. ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಿರುವ ದೇವಾಲಯದ ವಿಹಂಗಮ ನೋಟ ಭಕ್ತರ ಕಣ್ಮನ ಸೆಳೆಯಲಿದೆ.

ಈ ಬಾರಿಯ ದೀಪೋತ್ಸವದಲ್ಲಿ ಪರಿಸರ ಸಂರಕ್ಷಣೆ ಪ್ರಮುಖ ಕೇಂದ್ರವಾಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಮಸಿ ಹಾನಿಯಿಂದ ದೇವಾಲಯವನ್ನು ರಕ್ಷಿಸಲು ವಿಶೇಷ ಮೇಣದ ದೀಪಗಳನ್ನು ಬಳಸಲಾಗುತ್ತದೆ. ಈ ದೀಪಾವಳಿಯಂದು ಅಯೋಧ್ಯೆಯನ್ನು ಕೇವಲ ಧರ್ಮ ಮತ್ತು ನಂಬಿಕೆಯ ಕೇಂದ್ರವನ್ನಾಗಿ ಮಾಡದೆ, ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವನ್ನಾಗಿ ಮಾಡುವ ಗುರಿಯನ್ನು ದೇವಾಲಯದ ಟ್ರಸ್ಟ್ ಹೊಂದಿದೆ. ದೀಪೋತ್ಸವದ ವೈಭವವು ಶಾಶ್ವತವಾದ ಪ್ರಭಾವ ಬೀರುವುದನ್ನು ಖಚಿತಪಡಿಸಿಕೊಳ್ಳಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಕ್ಟೋಬರ್ 29 ರಿಂದ ನವೆಂಬರ್ 1 ರವರೆಗೆ ಮಧ್ಯರಾತ್ರಿಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಬರೋಬ್ಬರಿ 400 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಚಂಪತ್‌ ರಾಯ್‌

2024 ರ ಜನವರಿಯಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಲಾಗಿದೆ. ರಾಮನ ಜನ್ಮ ಭೂಮಿಯಾದ್ದರಿಂದ ಹಿಂದುಗಳಿಗೆ ಇದು ಪವಿತ್ರ ಕ್ಷೇತ್ರವಾಗಿದೆ. 16 ನೇ ಶತಮಾನದಲ್ಲಿ ಮೊಘಲ್‌ ದೊರೆ ಬಾಬರ್‌ ಈ ಮಂದಿರದ ಮೇಲೆ ದಾಳಿ ಮಾಡಿ ಮೂಲ ದೇವಾಲಯವನ್ನು ದ್ವಂಸಗೊಳಿಸಿದ್ದ. ನಂತರ ಅದನ್ನು ಬಾಬ್ರಿ ಮಸೀದಿ ಎಂದು ಕರೆಯಾಗಿತ್ತು. 19 ನೇ ಶತಮಾನದ ಆರಂಭದಿಂದಲೂ ಈ ಸ್ಥಳದಲ್ಲಿ ರಾಮನನ್ನು ಪೂಜಿಸಲು ಹಿಂದೂ ಮತ್ತು ಸಿಖ್ ಪ್ರಯತ್ನಗಳು ನಡೆದಿವೆ. 1949 ರಲ್ಲಿ, ಸರ್ಕಾರವು ಮಸೀದಿಯನ್ನು ವಿವಾದಿತ ಸ್ಥಳವೆಂದು ಘೋಷಿಸಿತು, 2019 ರಲ್ಲಿ, ಭಾರತೀಯ ಸರ್ವೋಚ್ಚ ನ್ಯಾಯಾಲಯವು ಆ ಸ್ಥಳದಲ್ಲಿ ಹಿಂದೂ ದೇವಾಲಯದ ನಿರ್ಮಾಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ನಂತರ ಭವ್ಯವಾದ ರಾಮನ ಮಂದಿರವನ್ನು ನಿರ್ಮಿಸಿ ಬಾಲ ರಾಮನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವರ್ಷ ಜನವರಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದಿತ್ತು.