Thursday, 12th December 2024

ಟಿವಿ ಧಾರಾವಾಹಿಗಳು ಹಾಗೂ ಪರಿಣಾಮ

ಅಭಿವ್ಯಕ್ತಿ

ವಿನಾಯಕ ಭಟ್ಟ

ಮನುಷ್ಯ ಸಂಘ ಜೀವಿ. ಕೌಟುಂಬಿಕ ಜೀವಿ. ಎಲ್ಲರಿಗೂ ತಿಳಿದಿರುವ ವಿಷಯವೇ. ಜೊತೆಗೆ ಭಾವ ಜೀವಿಯೂ ಹೌದು. ಸಾಮಾಜಿಕ
ಬದುಕಿನಲ್ಲಿ, ಕೌಟುಂಬಿಕ ಬದುಕಿನಲ್ಲಿ ಮನುಷ್ಯನ ಭಾವನೆಗಳಿಗೂ ಬೆಲೆ ಇದೆ. ಜೀವನವನ್ನೇ ಬದಲಾಯಿಸುವ ಶಕ್ತಿ ಭಾವನೆ ಗಳಿಗೆ ಇರುವುದೂ ಕೂಡ ಅಷ್ಟೇ ಸತ್ಯ.

ಅಂತಹ ಒಂದು ಭಾವುಕ ಮನಸ್ಸಿಗೆ ಮನರಂಜನೆ ಅನ್ನುವುದು ಕೂಡ ಅನಿವಾರ್ಯ, ಅವಶ್ಯಕತೆಗಳಲ್ಲಿ ಒಂದು. ಇಡೀ ದಿನ
ಜೀವನದ ಹೋರಾಟದಲ್ಲಿ ಬೆಂದ ಮನಸ್ಸು ಮನರಂಜನೆ ಬೇಡುವುದು ಸ್ವಾಭಾವಿಕ. ಅದಕ್ಕಾಗಿಯೇ ಹಿಂದೆಲ್ಲ ಮನರಂಜನೆ ಅನ್ನುವುದು ದೇವ ಭಾವವನ್ನು ಪ್ರಚೋದಿಸುವ, ಅಧ್ಯಾತ್ಮಿಕತೆಯನ್ನು ಬಡಿದೆಬ್ಬಿಸುವ ಕಾರ್ಯಕ್ರಮಗಳ ಜೊತೆಗೂಡಿ ನಡೆಯುತ್ತಿತ್ತು ಎಂಬುದನ್ನೂ ಕೇಳಿ ಬವು. ಉದಾಹರಣೆಗೆ ಹಿಂದಿನ ಕಾಲದ ಸಂಜೆಯ ಭಜನೆಗಳೂ, ಹರಿ ಕೀರ್ತನೆಗಳೂ, ಮುಂದುವರಿದು ಆಗಾಗ ಯಕ್ಷಗಾನಗಳೂ, ನಾಟಕಗಳೂ, ಆಮೇಲೆ ಸಿನಿಮಾ ಹೀಗೆ ಆಧುನಿಕತೆ , ತಂತ್ರಜ್ಞಾನ ಹೆಚ್ಚಿದಂತೆಲ್ಲ, ಮನುಷ್ಯನ ಮನರಂಜನಾ ಮಾಧ್ಯಮಗಳೂ ಕೂಡ ವಿಸ್ತಾರವನ್ನು ಪಡೆಯತೊಡಗಿದವು.

ಯಾವಾಗ ದೊಡ್ಡ ಡಿಶ್ ಆಂಟೆನಾ ಹೋಗಿ, ಡಿಟಿಎಚ್ ಬಂತೋ, ಕೇಬಲ್ ಟಿವಿ ಬಂತೋ, ಅವಾಗ ಮನರಂಜನಾ
ಮಾಧ್ಯಮದಲ್ಲಿ ಮುಂಚೂಣಿಗೆ ಬಂದಿದ್ದು ಟಿವಿ ಧಾರಾವಾಹಿಗಳು. ಇಂದು ಮಾಧ್ಯಮಗಳಲ್ಲಿ ಕಿರುತೆರೆ (ಟಿವಿ) ಧಾರಾವಾಹಿಗಳು ಮೇಲ್ಪಂಕ್ತಿಯನ್ನು ಪಡೆದಿವೆ. ನಿತ್ಯ ಸಂಜೆ ನೂರಾರು ಚಾನೆಲ್‌ಗಳ ವಿವಿಧ ಸಮಯಗಳಲ್ಲಿ ಸಾವಿರಾರು ಧಾರಾವಾಹಿಗಳು ಪ್ರದರ್ಶಿಲ್ಪಡುತ್ತಿವೆ. ಸಂಜೆಯ ವೇಳೆಯಲ್ಲಿ ಯಾವುದೇ ಮನರಂಜನಾ ವಾಹಿನಿ ಯನ್ನು ಹಾಕಿದರೂ ಒಂದಿಂದು ಧಾರಾವಾ ಹಿಯೇ ಬರುತ್ತಿರುತ್ತದೆ.

ಇಲ್ಲಿ ವಿಶದವಾಗಿ, ವಿಷಾದದಿಂದ ವಿಶ್ಲೇಷಿಸಲು ಹೊರಟಿರುವುದು ಅದೇ ಧಾರಾವಾಹಿಗಳ ಕುರಿತಾದದ್ದೂ ಆಗಿದೆ. ಮನರಂಜನೆ
ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಮನರಂಜನೆ ಎನ್ನುವುದು ರಂಜನೆಯೇ ಆಗಿ ಉಳಿದಿದ್ದರೆ ಬಹುಶಃ ಈ ಲೇಖನ ಹುಟ್ಟುತ್ತಲೇ ಇರಲಿಲ್ಲವೇನೋ. ಈ ಸಾವಿರಾರು ಕೌಟುಂಬಿಕ ಧಾರಾವಾಹಿಗಳ ಒಂದು ಸಣ್ಣ ಎಳೆಯನ್ನ ನೋಡೋಣ. ಒಂದು ಅಥವಾ ಎರಡು ಮನೆಗಳು. ಅದರಲ್ಲಿ ಹೀರೋ ಹೀರೋಯಿನ್. ಜೊತೆಗೊಂದು ವಿಲನ್.

ಅದರಲ್ಲೂ ಇಂದಿನ ಬಹುತೇಕ ಧಾರಾವಾಹಿಗಳಲ್ಲಿ ಹೆಣ್ಣು ವಿಲನ್‌ಗಳದ್ದೇ ಕಾರು ಬಾರು. ಈ ಹೆಣ್ಣು ವಿಲನ್‌ಗಳು, ಹೀರೋ ಹೀರೋಯಿನ್‌ಗಳಿಗೆ ಯಾವ ರೀತಿ ತೊಂದರೆ ಕೊಡುತ್ತಾರೆ ಎಂಬುದು ಬಹುತೇಕ ಎಲ್ಲ ಧಾರಾವಾಹಿಗಳ ಸಿದ್ಧ ಸೂತ್ರ. ವರ್ಷದ ಎಲ್ಲ ದಿನಗಳಲ್ಲೂ ಧಾರಾವಾಹಿಯನ್ನು ಕೊಡುವುದು ನಿರ್ದೇಶಕನಿಗೆ ಅಷ್ಟೇನೂ ಸವಾಲಿನ ಕೆಲಸ ಎಂದು ಅನ್ನಿಸುವುದಿಲ್ಲ. ಒಂದರ ನಂತರ ಮತ್ತೊಂದು ಕ್ಲಿಷ್ಟತೆಯನ್ನು (ಕಾಂಪ್ಲಿಕೇಷನ್) ಸೃಷ್ಟಿ ಮಾಡುತ್ತಾ ಹೋದರಾಯಿತು ಅಷ್ಟೇ.

ಒಳ್ಳೆಯವರಿಗೆ ಕೆಟ್ಟ ಜನರು ಹೆಚ್ಚು ಕಷ್ಟ ಕೊಡುತ್ತಾ ಹೋದಂತೆ, ಧಾರಾವಾಹಿಯ ಜನಪ್ರಿಯತೆ ಏರುತ್ತದೆ ಎಂದೇ ಅನ್ನಿಸುತ್ತದೆ. ಹಾಗಾದರೆ, ಈ ಧಾರಾವಾಹಿಗಳು ಕೊಡುತ್ತಿರುವುದು ಮನರಂಜನೆಯಾ ಅಲ್ಲವಾ ಅನ್ನುವುದು ಖಂಡಿತ ಚರ್ಚಿಸತಕ್ಕ ವಿಷಯ.
ಒಂದು ದೃಷ್ಟಿಯಿಂದ ನೋಡಿದರೆ, ಈ ಎಲ್ಲ ಧಾರಾವಾಹಿಗಳು ಅದೆಷ್ಟು ಸಂಸಾರದಲ್ಲಿ ಬಿರುಕು ತಂದಿದ್ದೆವೋ ದೇವರಿಗೆ ಗೊತ್ತು.

ಅದರಲ್ಲೂ ಸಾಮಾಜಿಕಜಾಲ ತಾಣಗಳಲ್ಲಿ ನಡೆಯುವ ಧಾರಾವಾಹಿಗಳ ಮೇಲಿನ ವಿಮರ್ಶೆಯಲ್ಲಿ ಕಂಡಿದ್ದು- ಅಯ್ಯೋ ನಮ್ಮ ಮನೆಯಲ್ಲೂ ಹೀಗೆ ಆಗಿತ್ತು, ಅದನ್ನ ಈ ಧಾರಾವಾಹಿಯಲ್ಲಿ ನೋಡಿದಂತೆ ನಿರ್ವಹಿಸಿz ಎನ್ನುವುದು!. ಅದರರ್ಥ ಧಾರಾವಾಹಿ ಗಳು ಕೇವಲ ಮನರಂಜನಾ ಮಾಧ್ಯಮವಾಗಿ ಉಳಿಯದೇ, ಜನರ ಭಾವನೆಗಳ ಜೊತೆಗೂ ಕೂಡ ಆಟ ಆಡುವ ಶಕ್ತಿಯನ್ನು
ಬೆಳೆಸಿಕೊಂಡಿವೆ ಅನ್ನಿಸುತ್ತದೆ. ಒಂದು ವೇಳೆ ಧಾರಾವಾಹಿಯ ಧನಾತ್ಮಕ ಅಂಶಗಳು ಮಾತ್ರ ಯಾರದ್ದೆ ನಿಜ ಜೀವನದಲ್ಲಿ ಕೃತಿ ಯಲ್ಲಿ ಇಳಿದರೆ ಪರವಾಗಿಲ್ಲ ಅಂದುಕೊಳ್ಳೋಣ.

ಆದರೆ, ಅವುಗಳಲ್ಲಿರುವ ನಕಾರಾತ್ಮಕ ಅಂಶಗಳು (ಹೆಚ್ಚಾಗಿಯೇ ಇರುವ) ಯಾರದ್ದೇ ಜೀವನದಲ್ಲಿ ಆಟ ಆಡಲಾರವು ಎಂದು ಯಾವ ನಂಬಿಕೆ ಉಳಿದೀತು? ಹೀಗಿರುವಾಗ, ನಕಾರಾತ್ಮಕ ಚಿಂತನೆಗಳ ವೈಭವೀಕರಣ ಎಲ್ಲ ಧಾರಾವಾಹಿಗಳಲ್ಲಿ ನಡೆಯುವುದು ಯಾವ ರೀತಿಯಿಂದ ಸಮರ್ಥನೀಯ? ಮನರಂಜನಾ ಮಾಧ್ಯಮವೇ ಉದ್ಯಮವಾಗಿರುವ ಈ ಕಾಲದಲ್ಲಿ ಈ ಧಾರಾವಾಹಿಗಳ ಜನಸಾಮಾನ್ಯರ ಮೇಲಿನ ಪರಿಣಾಮಗಳು ಅಷ್ಟು ಉಚಿತ ರೀತಿಯಿಂದ ಆಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ.

ಬಹುತೇಕ ಕೌಟುಂಬಿಕ ಧಾರಾವಾಹಿಗಳ ಹೂರಣ ಎಂದರೆ ಕುಟುಂಬದೊಳಗಿನ ಹುಳುಕುಗಳು ಮಾತ್ರ. ಅಲ್ಲಿ ಇರುವ ಪಾತ್ರಗಳ ಗುಣ ಸ್ವಭಾವಗಳನ್ನು, ಚಿಂತನೆಗಳನ್ನು ನಿತ್ಯ ನೋಡುವ, ಅನುಭವಿಸುವ ಯಾವುದೇ ವ್ಯಕ್ತಿ ಅದರಿಂದ ಪ್ರಭಾವಿತನಾಗದೇ ಹೋಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಹೆಚ್ಚು ಭಾವ ಜೀವಿಗಳಾದ ಹೆಂಗಳೆಯರೇ ಈ ಧಾರಾವಾಹಿಗಳ ಹೆಚ್ಚಿನ ಪ್ರಮಾಣದ ವೀಕ್ಷಕರು ಎನ್ನುವುದು ಸಾಮಾನ್ಯ ವಿಚಾರ. ಹೀಗಿರುವಾಗ, ಅದೆಷ್ಟು ಹೆಣ್ಣು ಮಕ್ಕಳು, ಧಾರಾವಾಹಿಯನ್ನು ತಮ್ಮ ಕುಟುಂಬದ ಮೇಲೆ ಆರೋಪಿಸಿಕೊಂಡು , ಅಲ್ಲಿನ ಘಟನೆಗಳ ಮರು ಸೃಷ್ಟಿಗೆ ಮುಂದಾಗಿ ತಮ್ಮ ಬಾಳನ್ನೇ ಹಾಳು
ಮಾಡಿಕೊಂಡಿರಲಿಕ್ಕೂ ಸಾಕು.

ಒಟ್ಟಿನಲ್ಲಿ ಅತ್ಯಂತ ವ್ಯಾಪಕವಾಗಿ ಆವರಿಸಿಕೊಂಡಿರುವ ಈ ಧಾರಾವಾಹಿಗಳೆಂಬ ಮಾಯಾಜಾಲ ಅನೇಕಾನೇಕ ಜೀವನ ಪ್ರಭಾವ ಗಳನ್ನು ಮಾಡುತ್ತಿದೆ ಎಂಬುದು ಸ್ಪಷ್ಟ. ಮನರಂಜನೆಯ ಹೆಸರಿನಲ್ಲಿ ಧಾರಾವಾಹಿಗಳು ಜನರ ಭಾವನೆಗಳ ಜೊತೆಗೆ ಕೊನೆಗೆ ಜನರ ಜೀವನದ ಜೊತೆಗೆ ಕೂಡ ವ್ಯವಹರಿಸಲು ಶುರು ಮಾಡಿರುವುದು ಅಷ್ಟೇನೂ ಒಳ್ಳೆಯ ಬೆಳವಣಿಗೆ ಅನ್ನಿಸುವುದಿಲ್ಲ.

ಮನರಂಜನೆಯ ಉದ್ದೇಶದ ಧಾರಾವಾಹಿಗಳಿಗೆ ಈ ನಕಾರಾತ್ಮಕತೆಯ ವೈಭವೀಕರಣ ಬೇಕೇ ಬೇಕಾ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ. ಹೆಣ್ಣು ವಿಲನ್‌ಗಳ ಅಷ್ಟು ವೈಭವೀಕರಣ ಇಲ್ಲದೆಯೇ ಧಾರಾವಾಹಿಗಳನ್ನ ಮಾಡಲೇ ಆಗುವುದಿಲ್ಲವಾ? ಕಥೆ, ಕಲ್ಪನೆ ಸರಿಯೇ. ಆದರೆ. ಅವುಗಳನ್ನು ತೋರಿಸುವ ರೀತಿಯನ್ನು ಬದಲಾಯಿಸಲು ಆಗುವುದೇ ಇಲ್ಲವಾ? ಸಂಜೆ ಆದರೆ ಸಾಕು, ಪ್ರತಿ ವಾಹಿನಿಯ ಪ್ರತೀ ಧಾರಾವಾಹಿಯಲ್ಲೂ ಒಂದಿಂದು ಹೆಣ್ಣು ವಿಲನ್‌ಗಳ ಹುಳುಕೇ ನಡೆಯುತ್ತಿರುತ್ತದೆ.

ಇದನ್ನು ಬದಲಾವಣೆ ಮಾಡಬೇಕು ಅನ್ನುವುದು ಸಾಮಾನ್ಯ ಜನರ ಕಳಕಳಿಯೂ ಆಗಿದೆ. ಈ ನಕಾರಾತ್ಮಕತೆಯ ಬದಲಿಗೆ, ಸಕಾರಾತ್ಮಕ ಮನರಂಜನೆಯೆಡೆಗೆ ಕಿರುತೆರೆಯ ಧಾರಾವಾಹಿ ಗಳು ಮುಖ ಮಾಡಿದ್ದರೆ ಚೆನ್ನಿತ್ತು. ಮನರಂಜನೆ ಎನ್ನುವುದು ಮತ್ತೊಬ್ಬರ ಮನೆಯ ಹುಳುಕನ್ನು ನೋಡುವುದು ಎಂಬ ಒಂದು ಕೆಟ್ಟ ಸಂಪ್ರದಾಯಕ್ಕೆ ಈ ಧಾರಾವಾಹಿಗಳು ಜನರನ್ನು ನೂಕುತ್ತಿವೆ. ಕಿರುತೆರೆ ಮಾಧ್ಯಮ ಈ ಹುಳುಕು ಮನರಂಜನೆಯ ವ್ಯಾಪಾರೀಕರಣದಿಂದ ಸಾಧ್ಯವಾದಷ್ಟು ಬೇಗ ಹೊರಗೆ ಬರಲಿ. ಧಾರಾವಾಹಿಗಳು ಜನಕ್ಕೆ ಹೆಚ್ಚಿನ ಉತ್ತಮ ಸಂದೇಶಗಳ ಜೊತೆಗೆ ಮನರಂಜನೆಯನ್ನು ತರಲಿ ಎಂಬುದು ಸದ್ಯದ ಆಶಯ.