ಮುಂಬೈ: ಮಹಾರಾಷ್ಟ್ರ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿದ್ದ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್ (Pooja Khedkar) ತಂದೆ ಇದೀಗ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ(Maharashtra Elections 2024) ಯಲ್ಲಿ ಅಹ್ಮದ್‌ನಗರ ದಕ್ಷಿಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ದಿಲೀಪ್ ಸಲ್ಲಿಸಿರುವ ನಾಮಪತ್ರದಲ್ಲಿ ಅವರು ಉಲ್ಲೇಖಿಸಿರುವ ಕೆಲವೊಂದು ಸಂಗತಿಗಳು ಎಲ್ಲರ ಗಮನ ಸೆಳೆದಿದೆ.
ಇನ್ನು ದಿಲೀಪ್ ಖೇಡ್ಕರ್ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಈ ಬಾರಿ ವಿಧಾಸಭೆ ಚುನಾವಣೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಅವರು ತಮ್ಮ ಇತ್ತೀಚಿನ ನಾಮಪತ್ರದಲ್ಲಿ, ತಾನು ವಿಚ್ಛೇದನ ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಇದು 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರ ಅಫಿಡವಿಟ್‌ನಲ್ಲಿ ಒದಗಿಸಿದ ಮಾಹಿತಿಗಿಂತ ಭಿನ್ನವಾಗಿದೆ. ಅಲ್ಲಿ ಅವರು ಮನೋರಮಾ ಖೇಡ್ಕರ್ ಅವರನ್ನು ವಿವಾಹವಾದರು ಎಂದು ಘೋಷಿಸಿದ್ದರು. ಲೋಕಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ದಿಲೀಪ್ ಖೇಡ್ಕರ್ ಅವರು ಮನೋರಮಾ ಖೇಡ್ಕರ್ ಅವರನ್ನು ತಮ್ಮ ಪತ್ನಿ ಮತ್ತು ಅವರ ಜಂಟಿ ಒಡೆತನದ ಆಸ್ತಿಯನ್ನು ಘೋಷಿಸಿದ್ದರು. ಅಲ್ಲದೇ ತಮ್ಮ ಕುಟುಂಬವನ್ನು “ಅವಿಭಜಿತ ಹಿಂದೂ ಕುಟುಂಬ” ಎಂದು ತಿಳಿಸಿದ್ದರು.
ದಿಲೀಪ್ ಮತ್ತು ಮನೋರಮಾ ಖೇಡ್ಕರ್ ಅವರು 2009 ರಲ್ಲಿ ಪುಣೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು ಮತ್ತು ಜೂನ್ 25, 2010 ರಂದು ಬೇರ್ಪಟ್ಟಿದ್ದರು. ವಿಚ್ಛೇದನದ ಹೊರತಾಗಿಯೂ, ಮನೋರಮಾ ಖೇಡ್ಕರ್ ಒಡೆತನದ ಪುಣೆಯ ಬನರ್ ಪ್ರದೇಶದ ಬಂಗಲೆಯಲ್ಲಿ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಯಾರು ಈ ಪೂಜಾ ಖೇಡ್ಕರ್?
ಮೀಸಲಾತಿ ಪ್ರಯೋಜನಗಳನ್ನು ಪಡೆಯಲು 2022 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತನ್ನ ಅರ್ಜಿಯಲ್ಲಿ ಮಾಹಿತಿಯನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಅಮಾನತುಗೊಳಿಸಿತ್ತು. ಆರೋಪಗಳನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಖೇಡ್ಕರ್, ದೆಹಲಿಯ ವಿವಿಧ ಅಕಾಡೆಮಿಗಳಲ್ಲಿ ತನ್ನ ಅಣಕು ಸಂದರ್ಶನಗಳಲ್ಲಿ, ತನ್ನ ಹೆತ್ತವರು ವಿಚ್ಛೇದನ ಪಡೆದಿದ್ದರಿಂದ ತನ್ನ ಕುಟುಂಬದ ಆದಾಯವು ಶೂನ್ಯವಾಗಿದೆ ಎಂದು ಹೇಳಿಕೊಂಡಿದ್ದಳು ಆದರೆ, ದಿಲೀಪ್ ಖೇಡ್ಕರ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಸಲ್ಲಿಸಿದ ಅಫಿಡವಿಟ್‌ನಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.
ಈ ಸುದ್ದಿಯನ್ನೂ ಓದಿ: Maharashtra Elections 2024 : ಸ್ವರ ಭಾಸ್ಕರ್ ಪತಿ ಫಹಾದ್‌ಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಟಿಕೆಟ್