Sunday, 24th November 2024

Hasanamba Temple : ಹಾಸನಾಂಬೆಗೆ 3ನೇ ದಿನದಲ್ಲಿ ಮೂರು ಕೋಟಿ ರೂಪಾಯಿ ಆದಾಯ

Hasanamba Temple

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ದೇಶಾದ್ಯಂತ ಹರಡಿರುವ ಭಕ್ತರಿಗೆ ದರ್ಶನ ನೀಡುವ ಪುರಾಣ ಪ್ರಸಿದ್ಧ ಹಾಸನಾಂಬ (Hasanamba Temple) ದರ್ಶನೋತ್ಸವ ಆರಂಭವಾದ ಮೂರೇ ದಿನದಲ್ಲಿ ಐದು ಲಕ್ಷ ಭಕ್ತಾದಿಗಳ ದರ್ಶನ ಪಡೆದಿದ್ದು, ಟಿಕೆಟ್ ರೂಪದಲ್ಲಿ ಮೂರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಈ ಬಾರಿ ಅ.24ರಂದು ದೇಗುಲದ ಬಾಗಿಲು ತೆರೆದಿದ್ದು, ಅ.25ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ದೇಗುಲ 11 ದಿನ ಬಾಗಿಲು ತೆರೆದರೂ ಪ್ರಥಮ ಹಾಗೂ ಅಂತಿಮ ದಿನವಾದ ನ.3ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ.

ಭಕ್ತರಿಗೆ ಒಟ್ಟು ಒಂಬತ್ತು ದಿನದೊಳಗೆ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2 ವಿಶೇಷ ರೈಲು, ಬಸ್‌ಗಳು, ಬಾಡಿಗೆ ಹಾಗೂ ಸ್ವಂತ ವಾಹನದಲ್ಲಿ ರಾಜ್ಯ, ಹೊರ ರಾಜ್ಯವಲ್ಲದೆ ವಿದೇಶದಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯಲು ಆರಂಭಿಸಿದ್ದಾರೆ

ಶನಿವಾರ ಬೆಳಗ್ಗೆಯಿಂದ ಭಾನುವಾರ ಮುಂಜಾನೆವರೆಗೂ 1.30 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಶನಿವಾರ ಮಧ್ಯಾಹ್ನದ ಬಳಿಕ ದೊಡ್ಡ ಸಾಲಿನಲ್ಲಿ ಭಕ್ತರ ಆಗಮಿಸಿದ್ದರು. ರಾತ್ರಿ 10ರ ವೇಳೆಗೆ ಒಂದು ಲಕ್ಷಕ್ಕೆ ಮುಟ್ಟಿತ್ತು. ನಗರದ ತಣ್ಣೀರುಹಳ್ಳದಿಂದ ಸಂತೆಪೇಟೆ ಮಾರ್ಗವಾಗಿ ಬ್ರಾಹ್ಮಣರ ಬೀದಿ, ಹೊಸಲೈನ್ ರಸ್ತೆಯಿಂದ ಹಾಸನಾಂಬ ದೇವರ ಸನ್ನಿಧಿವರೆಗೂ ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು.

ಜಿಲ್ಲಾಧಿಕಾರಿಯಿಂದ ವ್ಯವಸ್ಥೆ

ಭಕ್ತರು ಹಾಗೂ ಜನದಟ್ಟಣೆ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಹಾಸನಾಂಬ ಆವರಣದಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಇದ್ದು, ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸದ್ದಾರೆ. ಎಸಿ, ತಹಸೀಲ್ದಾರ್‌ಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ನೂಕುನುಗ್ಗಲು ಇದೆ ಎಂಬ ಮಾಹಿತಿ ಬರುತ್ತಿದ್ದಂತೆ ಎಸ್‌ಪಿ ಮೊಹಮ್ಮದ್ ಸುಜೀತಾ ಕ್ರಮ ಕೈಗೊಂಡಿದ್ದಾರೆ. ಬ್ಯಾರಿಕೇಡ್ ಹಾಕಿಸಿ ಮಧ್ಯದಲ್ಲಿ ನುಸುಳದಂತೆ ತಡೆ ಒಡ್ಡಿದ್ದಾರೆ.

ಇದನ್ನೂ ಓದಿ: Sabarimala Temple : ಅಯ್ಯಪ್ಪ ಭಕ್ತರೇ ಗಮನಿಸಿ; ವಿಮಾನ ಪ್ರಯಾಣದಲ್ಲಿ ಕ್ಯಾಬಿನ್‌ನಲ್ಲಿಯೇ ‘ಇರುಮುಡಿ’ ಇಟ್ಟುಕೊಳ್ಳಲು ಅವಕಾಶ

ವಿಐಪಿಗಳ ಒತ್ತಡ

ವಿಐಪಿಗಳು ತಮ್ಮ ಕುಟುಂಬದೊಂದಿಗೆ ದೊಡ್ಡ ಸಂಖ್ಯೆಯನ್ನು ಕರೆದುಕೊಂಡು ಬರುತ್ತಿರುವುದು ಅಧಿಕಾರಿಗಳಿಗೆ ಸಮಸ್ಯೆಯಾಗಿ ತಲೆದೋರಿದೆ. ಕುಟುಂಬದ ನಾಲೈದು ಜನ ಬಂದರೆ ಸಮಸ್ಯೆ ಏನಿಲ್ಲ. ಆದರೆ 30ರಿಂದ 40 ಜನ ಬಂದು ದರ್ಶನ ಪಡೆಯಲು ಮುಂದಾದರೆ ಸಾವಿರ ರೂ. ಟಿಕೆಟ್ ಪಡೆದು ಸರತಿಯಲ್ಲಿ ಏಳೆಂಟು ಗಂಟೆ ಕಾದು ನಿಂತ ಭಕ್ತರಿಗೆ ಉತ್ತರ ನೀಡುವುದು ಹೇಗೆ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಇಂದು ಮುಖ್ಯಮಂತ್ರಿ ಭೇಟಿ

ಸಿಎಂ ಸಿದ್ದರಾಮಯ್ಯ ಅವರು ದೇವರ ದರ್ಶನಕ್ಕೆ ಆಗಮಿಸಲಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸಂಜೆ 4ಕ್ಕೆ ಹೆಲಿಕಾಪ್ಟರ್‌ನಲ್ಲಿ ಬೂವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ದೇವಸ್ಥಾನದ ದರ್ಶನ ಪಡೆಯಲಿದ್ದಾರೆ. ಸಂಜೆ 5ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ. ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಮ ತು ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ವಿಧಾನಸಭೆ ಪ್ರತಿಪಕ್ಷ ವಿ ನಾಯಕ ಆರ್. ಅಶೋಕ್, ಮಾಗಡಿ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಹಲವರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.