ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯ ಸುಪ್ರಸಿದ್ದ ಹೊಟೇಲ್‌ಗಳಿಗೆ ಬಾಂಬ್ ಬೆದರಿಕೆ(Bomb threat) ಬಂದಿರುವ ಬೆನ್ನಲ್ಲೇ ಜಿಲ್ಲೆಯ ಇಸ್ಕಾನ್ ದೇವಸ್ಥಾನ(ISKCON Temple)ಕ್ಕೂ ಇಂತಹದ್ದೇ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ಪ್ರಕಾರ, ಇಸ್ಕಾನ್ ದೇವಾಲಯದ ಸಿಬ್ಬಂದಿಗೆ ಅಕ್ಟೋಬರ್ 27 ರಂದು ಪಾಕಿಸ್ತಾನದ ಐಎಸ್ಐ ಬೆಂಬಲಿತ ಸಂಬಂಧಿತ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸುತ್ತಾರೆ ಎಂದು ಇಮೇಲ್ ಸಂದೇಶ ಬಂದಿದೆ.
ಈ ಇ-ಮೇಲ್ ಬೆದರಿಕೆ ಸಂದೇಶ ಬಂದ ತಕ್ಷಣ ಸ್ವೀಕರಿಸಿದ ನಂತರ, ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ ತಲುಪಿದ್ದು, ದೇವಾಲಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಆದರೆ, ದೇವಸ್ಥಾನದ ಆವರಣದಿಂದ ಯಾವುದೇ ಸ್ಫೋಟಕ ಅಥವಾ ಇತರ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 26 ರಂದು, ತಿರುಪತಿಯ ಮೂರು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು, ನಂತರ ಬಿಡಿಎಸ್ ಮತ್ತು ಸ್ನಿಫರ್ ಡಾಗ್‌ಗಳ ಸಂಪೂರ್ಣ ಶೋಧದ ನಂತರ ಪೋಲೀಸ್ ತನಿಖೆ ವೇಳೆ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ಬಯಲಾಗಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್ ಅವರ ಪತ್ನಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಹೆಸರನ್ನು ಈ ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇನ್ನು ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ತನಿಖೆ ವೇಳೆ ಬಯಲಾಗಿದ್ದು, ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಶಂಕರ್ ಜಿವಾಲ್ ಮತ್ತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕಿರುತಿಗಾ ಉದಯನಿಧಿ ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ. ಸಾಲದೆನ್ನುವಂತೆ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಜಾಫರ್ ಸಾದಿಕ್‌ನ ಹೆಸರನ್ನೂ ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವು ಈ ಹಿಂದೆಯೇ ಅರೆಸ್ಟ್ ಮಾಡಿದೆ.
ಇನ್ನು ಈ ಪ್ರಕರಣದ ಬೆನ್ನಲ್ಲೇ ಗುಜರಾತ್ ಮತ್ತು ಉತ್ತರಪ್ರದೇಶದ ತಲಾ 10 ಹೊಟೇಲ್‌ಗಳಿಗೆ ಇಂತಹದ್ದೇ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ತನಿಖೆ ವೇಳೆ ಇದೊಂದು ಹುಸಿಬಾಂಬ್ ಕರೆ ಎಂಬುದು ಸಾಬೀತಾಗಿತ್ತು.
ಈ ಸುದ್ದಿಯನ್ನೂ ಓದಿ: Bomb Threat: ಮುಂದುವರಿದ ಬಾಂಬ್ ಬೆದರಿಕೆ; ಇಂದು 25 ವಿಮಾನ ಟಾರ್ಗೆಟ್