Monday, 28th October 2024

DY Chandrachud: ಮೋದಿ ಜತೆ ಗಣಪತಿ ಪೂಜೆ ಮಾಡಿದ್ದನ್ನು ಟೀಕಿಸಿದರಿಗೆ ಖಡಕ್‌ ಉತ್ತರ ಕೊಟ್ಟ ಸಿಜೆಐ

Narendra modi

ನವದೆಹಲಿ: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಸುಪ್ರೀಂ ಕೋರ್ಟ್‌ ಸಿಜೆಐ(CJI) ಡಿ.ವೈ.ಚಂದ್ರಚೂಡ್‌(DY Chandrachud) ನಿವಾಸಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಸಲ್ಲಿಸಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ವೈ. ಚಂದ್ರಚೂಡ್‌ ಸ್ಪಷ್ಟನೆ ಕೊಟ್ಟಿದ್ದು, ವೈಯಕ್ತಿಕ ವಿಚಾರದಿಂದ ನ್ಯಾಯಾಂಗಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೇಗೆ ಬದಿಗಿಡಬೇಕೆಂದು ನಿರ್ಧರಿಸುವಷ್ಟು ಪ್ರಬುದ್ಧತೆ ತಮಗಿದೆ ಎಂದು ಟೀಕಾಕಾರರಿಗೆ ಖಡಕ್‌ ತಿರುಗೇಟು ನೀಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಚಂದ್ರಚೂಡ್ ಅವರ ಮನೆಗೆ ಪ್ರಧಾನಿ ಭೇಟಿ ನೀಡಿದ ನಂತರ, ಪ್ರತಿಪಕ್ಷಗಳು ಸಭೆಯ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದವು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಯಾವುದೇ ಚರ್ಚೆಯ ವ್ಯಾಪ್ತಿಯಿಂದ ನ್ಯಾಯಾಂಗ ವಿಷಯಗಳನ್ನು ಬದಿಗಿಡಲು ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಕಾರ್ಯಾಂಗದ ಮುಖ್ಯಸ್ಥರಲ್ಲಿ ಸಾಕಷ್ಟು ಪ್ರಬುದ್ಧತೆ ಇದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯಗಳು ನಮಗೆ ತಿಳಿದಿವೆ ಮತ್ತು ರಾಜಕೀಯ ಮುಖಂಡರಿಗೆ ಅವರ ಕಾರ್ಯವ್ಯಾಪ್ತಿ ತಿಳಿದಿದೆ. ಯಾವುದೇ ನ್ಯಾಯಾಧೀಶರು, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಷ್ಟು ಅಪ್ರಬುದ್ಧರಲ್ಲ. ವಿವಿಧ ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ. ಎಂದಿಗೂ ನ್ಯಾಯಾಂಗ ಚರ್ಚೆಗೆ ಭೇಟಿಯಾಗುವುದಿಲ್ಲ ಎಂದು ಅವರು ಹೇಳಿದರು.

ನ್ಯಾಯಾಂಗ ಮತ್ತು ಸರ್ಕಾರದ ನಡುವೆ ದೃಢವಾದ ಸಂವಾದವನ್ನು ನಿರ್ವಹಿಸಲು ಈ ಸಭೆಗಳು ಅತ್ಯಗತ್ಯ. ದೇಶದ ಅಭಿವೃದ್ಧಿಯೊಂದೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರಮುಖ ಗುರಿ. ಹಾಗಾಗಿ ಈ ಮೂರೂ ಕ್ಷೇತ್ರಗಳ ನಡುವೆ ಸಮನ್ವಯತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನ್ಯಾಯಾಧೀಶರು ಕೆಲವೊಮ್ಮೆ ಖಾಸಗಿ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರನ್ನು ಭೇಟಿ ಮಾಡುತ್ತಾರೆ ಆದರೆ ಆ ಸಂದರ್ಭಗಳಲ್ಲಿ ತಮ್ಮ ನ್ಯಾಯಾಂಗದ ಕೆಲಸವನ್ನು ಚರ್ಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿಯವರು ಗಣೇಶ ಪೂಜೆಯಲ್ಲಿ ಭಾಗವಹಿಸಲು ಮುಖ್ಯ ನ್ಯಾಯಮೂರ್ತಿಯವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದ್ದರು. ಅವರನ್ನು ಡಿವೈ ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಆತ್ಮೀಯವಾಗಿ ಸ್ವಾಗತಿಸಿದರು. ಸಿಜೆಐ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜಿ ಅವರ ನಿವಾಸದಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡೆ. ಭಗವಾನ್ ಶ್ರೀ ಗಣೇಶ ನಮಗೆಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಅದ್ಭುತ ಆರೋಗ್ಯವನ್ನು ಆಶೀರ್ವದಿಸಲಿ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಬರೆದಿದ್ದರು. ಪೂಜೆ ಮಾಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದರು. ಇದಾದ ಬಳಿಕ ಈ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಪ್ರತಿಪಕ್ಷ ನಾಯಕರು ಡಿ.ವೈ ಚಂದ್ರಚೂಡ್‌ ನಡೆಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನೂ ಓದಿ: CJI Chandrachud: ನ.10ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್‌ ಸಿಜೆಐ ಡಿ.ವೈ. ಚಂದ್ರಚೂಡ್ ಹಿನ್ನೆಲೆ ಹೀಗಿದೆ