Monday, 28th October 2024

Physical abuse: ಬೆಂಗಳೂರಿನ ಪಿಜಿಗಳು ಸೇಫ್‌ ಅಲ್ವಾ? ಯುವತಿಯನ್ನು ತಬ್ಬಿ ಮುತ್ತಿಕ್ಕಿದ ಸೆಕ್ಯೂರಿಟಿ ಗಾರ್ಡ್‌ ಅರೆಸ್ಟ್

Physical abuse

ಬೆಂಗಳೂರು: ಕೊರಮಂಗಲದ ಪಿಜಿಯಲ್ಲಿ ಯುವತಿಯ ಕೊಲೆ ಪ್ರಕರಣ ಬಳಿಕ ರಾಜಧಾನಿಯ ಪಿಜಿಗಳ ಭದ್ರತೆಯ ಬಗ್ಗೆ ಪ್ರಶ್ನೆ ಉದ್ಭವಿಸಿದ್ದು, ನಗರದ ಪಿಜಿಗಳು ಯುವತಿಯರಿಗೆ ಎಷ್ಟು ಸೇಫ್‌ ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಪಿಜಿಗಳಲ್ಲಿ ಭದ್ರತೆ ಸೇರಿ ಕಠಿಣ ಮಾರ್ಗಸೂಚಿಯನ್ನು ಬಿಬಿಎಂಪಿ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ನಗರದ ಪಿಜಿಯೊಂದರಲ್ಲಿ ಯುವತಿಯೊಬ್ಬರ ಜತೆ ಸೆಕ್ಯೂರಿಟಿ ಗಾರ್ಡ್‌ ಅಸಭ್ಯ ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ. ಯುವತಿಯನ್ನು ತಬ್ಬಿ ಮುತ್ತಿಕ್ಕಿದ ಆರೋಪದಲ್ಲಿ (Physical abuse) ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರುದ್ರಯ್ಯ ಬಂಧಿತ ಆರೋಪಿ. ಪೀಣ್ಯದಲ್ಲಿರುವ ಪಿಜಿಯಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳ ಹೆಸರಿಗೆ ಕೊರಿಯರ್ ಬಂದಿದೆ. ಅದನ್ನು ತೆಗೆದುಕೊಳ್ಳಲು ಹೊರಗಡೆ ಬಂದ ಯುವತಿ ಜತೆ ಸೆಕ್ಯೂರಿಟಿ ಗಾರ್ಡ್ ಅಸಭ್ಯವಾಗಿ ವರ್ತಿಸಿದ್ದು, ಘಟನೆ ಸಂಬಂಧ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಯುವತಿ ಪೀಣ್ಯ ಸಮೀಪದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಸಮೀಪದ ಪಿಜಿಯಲ್ಲಿ ನೆಲೆಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಪಿಜಿಯಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಸಂತ್ರಸ್ತೆ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಕ್ಷಣೆ ಕೊಡಬೇಕಾದ ಸೆಕ್ಯೂರಿಟಿ ಗಾರ್ಡ್‌ ಇಂತಹ ಕೃತ್ಯ ಎಸಗಿರುವುದರಿಂದ ನಗರದ ಪಿಜಿಗಳು ಎಷ್ಟು ಸುರಕ್ಷಿತ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಈ ಹಿಂದೆ ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬ ಯುವತಿಯ ಕೊಲೆ ಪ್ರಕರಣ ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಅಭಿಷೇಕ್‌ ಎಂಬಾತನನ್ನು ಬಂಧಿಸಿದ್ದರು.

ಜು.23 ರಂದು ರಾತ್ರಿ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದ. ಈ ವೇಳೆ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ. ಕೃತಿ ತಪ್ಪಿಸಿಕೊಳ್ಳಲು ಬಿಡದೇ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಭಿಷೇಕ್​ನನ್ನು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಬಂಧಿಸಿದ್ದ. ಜುಲೈ 23ರ ನಡುರಾತ್ರಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಿದ್ದರು.

ಈ ಸುದ್ದಿಯನ್ನೂ ಓದಿ | Bishnoi Gang : ಲಾರೆನ್ಸ್‌ ಬಿಷ್ಣೋಯ್ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದ ಡೆಲ್ಲಿಯಲ್ಲಿ ಶೂಟೌಟ್‌

ಪ್ರಕರಣದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಪಿಜಿಗಳಿಗೆ ಬಿಬಿಎಂಪಿ ನೋಟಿಸ್‌ ನೀಡಿತ್ತು. ಅಲ್ಲದೇ ಪಿಜಿಗಳಲ್ಲಿ ಭದ್ರತೆ ಕೈಗೊಳ್ಳುವಂತೆ ಮಾರ್ಗಸೂಚಿ ಹೊರಡಿಸಿತ್ತು. ಇನ್ನು ಬಿಬಿಎಂಪಿಯ ಮಾರ್ಗಸೂಚಿ ಅನುಸರಿಸದ 21 ಪಿಜಿಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಬಂದ್ ಮಾಡಿಸಿದ್ದರು. ಈ ಪೈಕಿ 1 ಅಧಿಕೃತ ವಾಗಿ ಪರವಾನಗಿ ಪಡೆದಿದ್ದು, ಉಳಿದ 20 ಪಿಜಿಗಳು ಅನಧಿಕೃತವಾಗಿವೆ ಎಂದು ತಿಳಿದುಬಂದಿತ್ತು.