Friday, 22nd November 2024

Pejawar Swamiji: ʼಪೇಜಾವರ ಶ್ರೀ ಪುಡಿ ರಾಜಕಾರಣಿʼ ಎಂದ ಬಿಕೆ ಹರಿಪ್ರಸಾದ್‌; ಶಿಷ್ಯರು, ಬಿಜೆಪಿ ಕೆಂಡ

Pejawar Swamiji

ಬೆಂಗಳೂರು: ʼಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawar Swamiji) ಪುಡಿ ರಾಜಕಾರಣಿʼ ಎಂದು ವಿಧಾನ ಪರಿಷತ್​ ಸದಸ್ಯ, ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್ (BK Hariprasad) ಟೀಕಿಸಿದ್ದಾರೆ. ಇವರ ಈ ಲಘು ಮಾತಿಗೆ ಶ್ರೀಗಳ ಶಿಷ್ಯರು ಹಾಗೂ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದು, ಪ್ರತಿಭಟಿಸಿದ್ದಾರೆ.

ಜಾತಿ ಗಣತಿ (Cste census) ವಿಚಾರವಾಗಿ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ ವಿರುದ್ಧ ಬಿಕೆ ಹರಿಪ್ರಸಾದ್ (BK Hariprasad)​ ಟೀಕಿಸಿ ಮಾತನಾಡಿದ್ದರು. “ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜಾತ್ಯತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು? ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ” ಎಂದು ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದರು.

ಜಾತಿ ಗಣತಿ ಕುರಿತು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ವಿರುದ್ಧ ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ “ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಈಗಿನ ಸ್ವಾಮೀಜಿ ಅವರು ಅಯೋಧ್ಯೆಯಿಂದ ಹಿಡಿದು ಎಲ್ಲ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಜಾತಿ ಗಣತಿ ಬಗ್ಗೆ ಮಾತನಾಡುವ ಸ್ವಾಮೀಜಿ ಅವರು ತಮ್ಮ ಮಠದಲ್ಲಿ ಪ್ರತ್ಯೇಕ ಪಂಕ್ತಿಭೋಜನ ಹಾಗೂ ಮಡೆಸ್ನಾನ ಉತ್ತೇಜನ ನೀಡುತ್ತಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ” ಎಂದು ಹೇಳಿದ್ದರು.

ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ ಹೇಳಿಕೆಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. “ನಾವು ಪುಡಿ ರಾಜಕಾರಣ ಮಾಡುತ್ತಿದ್ದೇವೆ ಎನ್ನುತ್ತಾರೆ. ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ. ಹೌದು ಅಂತಾದ್ರೆ ಮಾತನಾಡುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡುತ್ತೇವೆ” ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

“ನಾವು ಜಾತ್ಯತೀತರು ಎನ್ನುವವರೇ ಎಲ್ಲ ವಲಯದಲ್ಲೂ ಜಾತಿ ವ್ಯವಸ್ಥೆಯನ್ನು ಪೋಷಿಸಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಲಘುವಾಗಿ ಹೇಳಿಕೆ ನೀಡಿರುವ ಬಿಕೆ ಹರಿಪ್ರಸಾದ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಹಾಗೂ ಮಠದ ಭಕ್ತರು, ಶ್ರೀಗಳ ಶಿಷ್ಯಸಮೂಹ ಬಿಕೆ ಹರಿಪ್ರಸಾದ್​ ವಿರುದ್ಧ ಹರಿಹಾಯ್ದಿದ್ದಾರೆ. ಪೇಜಾವರ ಶ್ರೀಗಳ ವಿರುದ್ಧ ಬಿಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಬಿಕೆ ಹರಿಪ್ರಸಾದ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ​

ಇದನ್ನೂ ಓದಿ: Pejawar Swamiji: ಎಲ್ಲ ದೇವಾಲಯಗಳಿಗೂ ಅಯೋಧ್ಯೆ ಮಾದರಿ ಆಡಳಿತ: ಪೇಜಾವರ ಶ್ರೀ ಆಗ್ರಹ