ಲಂಡನ್: ಫ್ರಾನ್ಸ್‌ನಿಂದ ಇಂಗ್ಲೆಂಡ್‌ಗೆ ಇಂಗ್ಲಿಷ್ ಕಾಲುವೆ (English Channel) ಮೂಲಕ ದಾಟಲು ಪ್ರಯತ್ನಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಭಾನುವಾರ (ಅ. 27) ಮೃತಪಟ್ಟಿದ್ದಾರೆ. ಕಳೆದ 10 ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ 3ನೇ ಅವಘಡ ಇದಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಫ್ರಾನ್ಸ್‌ನ ಟಾರ್ಡಿಂಘೆನ್ ಕಡಲತೀರದಿಂದ ಹೊರಟಿದ್ದ ಹಡಗು ತಕ್ಷಣ ಮುಳುಗಿ ಅವರು ಮೃತಪಟ್ಟಿದ್ದಾರೆ.
ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರು ಲೈಫ್ ಜಾಕೆಟ್ ಹೊಂದಿರಲಿಲ್ಲ. ಅದಾಗ್ಯೂ ಕೆಲವರು ಈಜಿ ದಡ ಸೇರಿ ಬಚವಾಗಿದ್ದಾರೆ. ಸುಮಾರು 40 ವರ್ಷದ ಭಾರತೀಯ ವ್ಯಕ್ತಿಗೆ ಹೃದಯಾಘತವಾಗಿ ಅವರು ಅಸುನೀಗಿದ್ದಾರೆ. ತಕ್ಷಣ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ
“ತುಂಬಾ ಕಳಪೆ ಸ್ಥಿತಿಯಲ್ಲಿದ್ದ ಹಡಗು ಕಡಲ ತೀರದಿಂದ ಹೊರಟ ತಕ್ಷಣ ಮುಳುಗಿತು” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಎಎಫ್‌ಪಿ ಪ್ರಕಾರ, ಭಾರತೀಯ ಪ್ರಜೆಯಾಗಿರುವ ಈ ವ್ಯಕ್ತಿ ಪಾಸ್-ಡಿ-ಕಲೈಸ್‌ನ ಟಾರ್ಡಿಂಘೆನ್ ಬೀಚ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಆದರೆ ಈ ಪಯಣ ದುರಂತ ಅಂತ್ಯ ಕಂಡಿದೆ.
ಅಪಾಯಕಾರಿ ಮಾರ್ಗ
ಇಂಗ್ಲಿಷ್ ಕಾಲುವೆ ಮೂಲಕ ಫ್ರಾನ್ಸ್‌ನಿಂದ ಇಂಗ್ಲೆಂಡ್‌ಗೆ ತೆರಳುವ ಮಾರ್ಗ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ. 2024ರಲ್ಲಿ ಈ ಮಾರ್ಗದಲ್ಲಿ ತೆರಳಿದ ಸುಮಾರು 56 ಜನರು ಮೃತಪಟ್ಟಿದ್ದಾರೆ. ಅ. 23ರಂದು ಬಂದರು ನಗರ ಕಲೈಸ್ ಬಳಿ ದೋಣಿ ಮುಳುಗಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಅದಕ್ಕೂ ಒಂದು ವಾರದ ಮೊದಲು, ಮತ್ತೊಂದು ದೋಣಿ ಛಿದ್ರಗೊಂಡು 4 ತಿಂಗಳ ಮಗು ಮುಳುಗಿ ಅಸುನೀಗಿತ್ತು.
ಅ. 25ರಂದು ಮೂವರು ವಲಸಿಗರು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಹದಗೆಡುತ್ತಿದ್ದರೂ ಈ ಕಾಲುವೆಯನ್ನು ದಾಟುವ ಪ್ರಯತ್ನಗಳು ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಣ್ಣ ದೋಣಿಗಳಲ್ಲಿ ಈ ಕಾಲುವೆಯನ್ನು ದಾಟುವುದನ್ನು ನಿಯಂತ್ರಿಸಲು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೀರ್ಘಕಾಲದಿಂದ ಕ್ರಮ ಕೈಗೊಂಡಿವೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರ ಪ್ರಯಾಣ ಮುಂದುವರಿದಿದೆ. 2024ರ ಆರಂಭದಿಂದ 29,000ಕ್ಕೂ ಹೆಚ್ಚು ವಲಸಿಗರು ದೋಣಿಯ ಮೂಲಕ ಇಂಗ್ಲೆಂಡ್ ತಲುಪಿದ್ದಾರೆ ಎಂದು ಬ್ರಿಟಿಷ್ ಗೃಹ ಕಚೇರಿ ತಿಳಿಸಿದೆ. ವಲಸೆ ನೀತಿಯಲ್ಲಿನ ಕಂದು ಕೊರತೆಯೇ ಇಂತಹ ಚಟುವಟಿಕೆಗೆ ಕಾರಣ ಎನ್ನುವ ದೂರು ಕೇಳಿ ಬಂದಿದೆ.
ಇಂಗ್ಲಿಷ್ ಕಾಲುವೆ ಈಜಿದ ವಿದ್ಯಾರ್ಥಿನಿ
ಕೆಲವು ದಿನಗಳ ಹಿಂದೆ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಇಂಗ್ಲಿಷ್ ಕಾಲುವೆಯನ್ನು ಈಜುವ ಮೂಲಕ ಇತಿಹಾಸ ನಿರ್ಮಿಸಿದ್ದಳು. ಉತ್ತರ ಲಂಡನ್‌ನ ಬುಶೆ ಮೀಡ್ಸ್ ಶಾಲೆಯ ವಿದ್ಯಾರ್ಥಿನಿ, 12 ವರ್ಷದ ಪ್ರಿಶಾ ತಾಪ್ರೆ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಈ ಕಾಲುವೆಯಲ್ಲಿ ಈಜಿದ ಕಿರಿಯರಲ್ಲಿ ಒಬ್ಬಳು ಎನಿಸಿಕೊಂಡಿದ್ದಾಳೆ. ಇಂಗ್ಲೆಂಡ್‌ನ ಡೋವರ್ ಕರಾವಳಿಯಿಂದ ಫ್ರಾನ್ಸ್‌ನ ಕೇಪ್ ಗ್ರಿಸ್ ನೆಜ್‌ಗೆ ಈಕೆ ಈಜಿದ್ದಾಳೆ. ಸುಮಾರು 34 ಕಿ.ಮೀ.ಯನ್ನು 11 ಗಂಟೆ 48 ನಿಮಿಷದಲ್ಲಿ ದಾಟಿದ್ದಳು.
ಈ ಸುದ್ದಿಯನ್ನೂ ಓದಿ: Viral News: ಗೋಡೆಗೆ ಅಂಟಿಸಿದ ಬಾಳೆಹಣ್ಣಿನ ಕಲಾಕೃತಿಗೆ ಚಿನ್ನದ ಬೆಲೆ; ಹರಾಜಿನಲ್ಲಿ 12 ಕೋಟಿ ರೂ. ಪಡೆಯುವ ನಿರೀಕ್ಷೆ