Monday, 25th November 2024

Bomb threat: ತಾಜ್‌ ಹೊಟೇಲ್‌ಗೂ ಬಾಂಬ್‌ ಸ್ಫೋಟ ಬೆದರಿಕೆ; ಆತಂಕ ಸೃಷ್ಟಿ

bomb threat

ಲಖನೌ: ಇತ್ತೀಚೆಗೆ ದೇಶಾದ್ಯಂತ ಹುಸಿಬಾಂಬ್‌ ಕರೆಗಳು(Bomb threat) ಆಗಾಗ ಬರುತ್ತಿವೆ. ವಿಮಾನಗಳಿಗೆ ಸರಣಿ ಬೆದರಿಕೆ ಬೆನ್ನಲ್ಲೇ ಇದೀಗ ಹೊಟೇಲ್‌ಗಳಿಗೆ ಬೆದರಿಕೆ ಕರೆಗಳು ಬಂದಿವೆ. ಇಂದು ಉತ್ತರ ಪ್ರದೇಶದ ಹೊಟೇಲ್‌ಗೆ ಮತ್ತೆ ಬಾಂಬ್‌ ಬೆದರಿಕೆ ಬಂದಿದೆ. ನಿನ್ನೆಯಷ್ಟೇ ಲಖನೌದ 10 ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಇಂದು ಪ್ರಸಿದ್ಧ ತಾಜ್‌ ಹೊಟೇಲ್‌(Taj Hotel)ಗೂ ಇಂದು ಇಂತಹದ್ದೇ ಸಂದೇಶವೊಂದು ಬಂದಿದೆ.

ಹಜರತ್‌ಗಂಜ್ ಪ್ರದೇಶದಲ್ಲಿರುವ ತಾಜ್ ಹೋಟೆಲ್‌ಗೆ ಕಳುಹಿಸಲಾದ ಇಮೇಲ್‌ನಲ್ಲಿ ಸಂಭಾವ್ಯ ಬಾಂಬ್ ಸ್ಫೋಟದ ಬಗ್ಗೆ ಎಚ್ಚರಿಸಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿದೆ. ಭಾನುವಾರ (ಅಕ್ಟೋಬರ್ 27) ಲಕ್ನೋದ 10 ಹೋಟೆಲ್‌ಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿದ್ದು, ಬಾಂಬ್ ಸ್ಕ್ವಾಡ್‌ನಿಂದ ಸಂಪೂರ್ಣ ಶೋಧ ನಡೆಸಲಾಯಿತು. ಬಳಿಕ ಇದೊಂದು ಹುಸಿ ಬಾಂಬ್‌ ಕರೆಯೆಂದು ತಿಳಿಯಿತು.

ಮ್ಯಾರಿಯಟ್, ಸರಕಾ, ಪಿಕಾಡಿಲಿ, ಕಂಫರ್ಟ್ ವಿಸ್ಟಾ, ಫಾರ್ಚೂನ್, ಲೆಮನ್ ಟ್ರೀ, ಕ್ಲಾರ್ಕ್ ಅವಧ್, ಕಾಸಾ, ದಯಾಳ್ ಗೇಟ್‌ವೇ ಮತ್ತು ಸಿಲ್ವೆಟ್‌ ಹೊಟೇಲ್‌ಗಳಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿತ್ತು. 55,000 ಡಾಲರ್ (ರೂ. 4,624,288) ರ ರಾನ್ಸಮ್ ಬೇಡಿಕೆಯನ್ನು ಪೂರೈಸದಿದ್ದರೆ ಸ್ಫೋಟ ಸಂಭವಿಸಲಿದೆ ಎಂದು ಹೋಟೆಲ್‌ಗಳಿಗೆ ಕಳುಹಿಸಲಾದ ಇಮೇಲ್ ಬೆದರಿಕೆ ಹಾಕಿದೆ.

ಇಸ್ಕಾನ್‌ಗೂ ಬಾಂಬ್‌ ಬೆದರಿಕೆ

ಆಂಧ್ರಪ್ರದೇಶದ ತಿರುಪತಿಯ ಸುಪ್ರಸಿದ್ದ ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ ಬಂದಿರುವ ಬೆನ್ನಲ್ಲೇ ಜಿಲ್ಲೆಯ ಇಸ್ಕಾನ್ ದೇವಸ್ಥಾನ(ISKCON Temple)ಕ್ಕೂ ಇಂತಹದ್ದೇ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ಪ್ರಕಾರ, ಇಸ್ಕಾನ್ ದೇವಾಲಯದ ಸಿಬ್ಬಂದಿಗೆ ಅಕ್ಟೋಬರ್ 27 ರಂದು ಪಾಕಿಸ್ತಾನದ ಐಎಸ್ಐ ಬೆಂಬಲಿತ ಸಂಬಂಧಿತ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸುತ್ತಾರೆ ಎಂದು ಇಮೇಲ್ ಸಂದೇಶ ಬಂದಿದೆ.

ಈ ಇ-ಮೇಲ್‌ ಬೆದರಿಕೆ ಸಂದೇಶ ಬಂದ ತಕ್ಷಣ ಸ್ವೀಕರಿಸಿದ ನಂತರ, ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ ತಲುಪಿದ್ದು, ದೇವಾಲಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಆದರೆ, ದೇವಸ್ಥಾನದ ಆವರಣದಿಂದ ಯಾವುದೇ ಸ್ಫೋಟಕ ಅಥವಾ ಇತರ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಕ್ಟೋಬರ್ 26 ರಂದು, ತಿರುಪತಿಯ ಮೂರು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು, ನಂತರ ಬಿಡಿಎಸ್ ಮತ್ತು ಸ್ನಿಫರ್ ಡಾಗ್‌ಗಳ ಸಂಪೂರ್ಣ ಶೋಧದ ನಂತರ ಪೋಲೀಸ್‌ ತನಿಖೆ ವೇಳೆ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ಬಯಲಾಗಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್‌ ಅವರ ಪತ್ನಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಹೆಸರನ್ನು ಈ ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ: Bomb threat: ಪಾಕ್‌ನ ISI ಬೆಂಬಲಿತ ಉಗ್ರರಿಂದ ದೇಗುಲ ಸ್ಫೋಟ… ಇಸ್ಕಾನ್‌ಗೂ ಬಂತು ಬಾಂಬ್‌ ಬೆದರಿಕೆ