ಕೂದಲಿನ ಕಾಳಜಿ (Hair Care) ಎಷ್ಟು ಮಾಡಿದರೂ ಸಾಕಾಗುವುದಿಲ್ಲ. ಕೊಂಚ ಕಾಳಜಿ ಕಡಿಮೆಯಾದರೂ ಉದುರಲು, ತಲೆಹೊಟ್ಟು ಕಾಣಿಸಲು ಪ್ರಾರಂಭವಾಗುತ್ತದೆ. ಕೂದಲಿನ ಆರೈಕೆಗೆ ತೆಂಗಿನ ಎಣ್ಣೆ (Coconut Oil) ಅತ್ಯುತ್ತಮ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದರೊಂದಿಗೆ ಅಲೋವೆರಾ (Aloe Vera) ಸೇರಿಸಿದರೆ ಕೂದಲಿಗೆ ಶಕ್ತಿ ಮತ್ತು ಹೊಳಪನ್ನು ಕೊಡಬಹುದು.
ತೆಂಗಿನ ಎಣ್ಣೆಯೊಂದಿಗೆ ಅಲೋವೆರಾ ಸೇರಿಸಿದರೆ ಇದು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ವಿವಿಧ ರೀತಿಯಲ್ಲಿ ಪ್ರಯೋಜನವನ್ನು ಕೊಡುತ್ತದೆ.ಅವುಗಳಲ್ಲಿ ಮುಖ್ಯವಾದವುಗಳು ಇಂತಿವೆ.
ಕೂದಲನ್ನು ಮೃದುವಾಗಿಸುತ್ತದೆ
ತೆಂಗಿನ ಎಣ್ಣೆ ಮತ್ತು ಅಲೋವೆರಾದಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳು ಮತ್ತು ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್, ಖನಿಜಗಳನ್ನು ಹೊಂದಿದೆ. ಇದು ಕೂದಲಿನ ಬುಡವನ್ನು ಬಲಿಷ್ಠಗೊಳಿಸುತ್ತದೆ. ಕೂದಲಿನ ಪೋಷಣೆಗೂ ಸಾಕಷ್ಟು ಕೊಡುಗೆಯನ್ನು ನೀಡುತ್ತದೆ. ಇದರಿಂದ ಕೂದಲು ಹೆಚ್ಚು ಮೃದುವಾಗುತ್ತದೆ, ರೇಷ್ಮೆಯಂತೆ ಹೊಳಪು ಪಡೆಯುತ್ತದೆ.
ಕೂದಲನ್ನು ಬಲಪಡಿಸುತ್ತದೆ
ತೆಂಗಿನ ಎಣ್ಣೆ ಮತ್ತು ಅಲೋವೆರಾದಲ್ಲಿ ಕಂಡೀಷನಿಂಗ್ ಗುಣ ಸಮೃದ್ಧವಾಗಿವೆ. ಅಲೋವೆರಾವು ಸತ್ತ ಚರ್ಮದ ಕೋಶವನ್ನು ಸರಿಪಡಿಸುತ್ತದೆ ಮತ್ತು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ ಇದನ್ನು ಬೆರೆಸಿ ಹಾಕುವುದರಿಂದ ಕೂದಲು ಆರೋಗ್ಯಕರವಾಗುತ್ತದೆ ಮತ್ತು ಬಲಿಷ್ಠವಾಗುತ್ತದೆ.
ತಲೆಹೊಟ್ಟು ನಿವಾರಣೆ
ತಲೆಹೊಟ್ಟು ನಿವಾರಣೆಗೆ ಅಲೋವೆರಾ ಮತ್ತು ತೆಂಗಿನ ಎಣ್ಣೆ ಸಾಂಪ್ರದಾಯಿಕ ಪದಾರ್ಥಗಳಾಗಿವೆ. ಇದು ತಲೆಹೊಟ್ಟು ನಿವಾರಿಸಿ ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಆಂಟಿಫಂಗಲ್ ಗುಣಲಕ್ಷಣಗಳಿರುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
ಆಳವಾಗಿ ಸ್ವಚ್ಛಗೊಳಿಸುತ್ತದೆ
ನೆತ್ತಿಯ ಮೇಲೆ ಹೆಚ್ಚಿನ ಎಣ್ಣೆ ಕೂದಲಿಗೆ ಬೇಕಾದ ತೇವಾಂಶ ದೊರೆಯದಂತೆ ಮಾಡುತ್ತದೆ. ಅಲೋವೆರಾ ಎಣ್ಣೆಯನ್ನು ನಿಧಾನವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ತೆಂಗಿನ ಎಣ್ಣೆಯು ತೇವಾಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೂದಲು ಬೆಳವಣಿಗೆ
ಅಲೋವೆರಾವು ವಿಟಮಿನ್ ಎ, ಸಿ ಮತ್ತು ಎಫ್ ಅನ್ನು ಹೊಂದಿರುವುದು ಮಾತ್ರವಲ್ಲದೆ ಇದರಲ್ಲಿರುವ ವಿಟಮಿನ್ ಬಿ 12 ಮತ್ತು ಫೋಲಿಕ್ ಆಮ್ಲಗಳು ಕೂದಲು ಉದುರುವುದನ್ನು ತಡೆಯುತ್ತದೆ. ತೆಂಗಿನ ಎಣ್ಣೆಯು ಕೊಬ್ಬಿನ ಲಿಪಿಡ್ಗಳನ್ನು ಹೊಂದಿದ್ದು ಅದು ಕೂದಲಿನ ಹೊರಪೊರೆಗಳನ್ನು ಬಲಪಡಿಸುವ ಮೂಲಕ ಕೂದಲು ಒಡೆಯುವುದು, ತೆಳುವಾಗದಂತೆ ತಡೆಯುತ್ತದೆ. ಕೂದಲಿನ ಬೆಳವಣಿಗೆಗೆ ಅಲೋವೆರಾ ಮತ್ತು ತೆಂಗಿನೆಣ್ಣೆ ಅತ್ಯಗತ್ಯವಾಗಿದೆ.
ಯಾವ ರೀತಿಯ ಕೂದಲಿಗೆ ಸೂಕ್ತ?
ತೆಂಗಿನೆಣ್ಣೆ ಮತ್ತು ಅಲೋವೆರಾವು ಎಣ್ಣೆಯುಕ್ತ ಕೂದಲು, ಒಣ ಮತ್ತು ಸುಕ್ಕುಗಟ್ಟಿದ ಕೂದಲು, ಗುಂಗುರು ಕೂದಲು ಹೀಗೆ ಎಲ್ಲ ಮಾದರಿಯ ಕೂದಲಿಗೂ ಸೂಕ್ತವಾಗಿದೆ. ಯಾಕೆಂದರೆ ಇದು ನೈಸರ್ಗಿಕವಾಗಿ ಕೂದಲಿನ ಪೋಷಣೆ ಮಾಡುತ್ತದೆ.
ಹೇಗೆ ಬಳಸುವುದು?
ಕೂದಲಿಗೆ ಅಲೋವೆರಾ ಮತ್ತು ತೆಂಗಿನ ಎಣ್ಣೆಯನ್ನು ಬಳಸಲು ಉತ್ತಮ ಮಾರ್ಗವೆಂದರೆ ಹೇರ್ ಮಾಸ್ಕ್ ಮಾಡುವುದು. ಕೂದಲ ರಕ್ಷಣೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇದಕ್ಕಾಗಿ ಒಂದು ರಾತ್ರಿಯಿಡೀ ಕೂದಲಿಗೆ ಅಲೋವೆರಾ ಮತ್ತು ತೆಂಗಿನ ಎಣ್ಣೆಯನ್ನು ಹೆಚ್ಚಿ ಇಡಬೇಕಾಗುತ್ತದೆ.
ಬಳಸುವುದು ಹೇಗೆ?
2 ಚಮಚ ಅಲೋವೆರಾ ರಸವನ್ನು ತೆಗೆದು ಅದಕ್ಕೆ 1 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಉದ್ದನೆಯ ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ. ಮಧ್ಯದಿಂದ ಕೂದಲಿನ ತುದಿವರೆಗೆ ಹಾಕಿ. ನಿಧಾನವಾಗಿ ಬೆರಳಿನ ತುದಿಯಿಂದ ಮಸಾಜ್ ಮಾಡಿ. ಬಾಚಣಿಗೆಯ ಸಹಾಯದಿಂದ ಮಿಶ್ರಣ ಕೂದಲಿಗೆ ಪೂರ್ತಿ ಹರಡುವಂತೆ ಮಾಡಿ. ತಲೆಗೆ ಶವರ್ ಕ್ಯಾಪ್ ಹಾಕಿ ಸಂಪೂರ್ಣ ಮುಚ್ಚಿ. ಕನಿಷ್ಠ 30 ರಿಂದ 60 ನಿಮಿಷಗಳವರೆಗೆ ಬಿಡಿ. ಬಳಿಕ ಸಂಪೂರ್ಣವಾಗಿ ತೊಳೆಯಿರಿ. ಕೂದಲಿನ ಆರೋಗ್ಯಕ್ಕಾಗಿ ವಾರಕ್ಕೊಮ್ಮೆಯಾದರೂ ಇದನ್ನು ಬಳಸಿ.
ಯಾವ ಅಲೋವೆರಾ ಒಳ್ಳೆಯದು?
ಕೂದಲಿಗೆ ಅಲೋವೆರಾದ ಅತ್ಯುತ್ತಮ ರೂಪವೆಂದರೆ ಸಸ್ಯದ ಕಚ್ಚಾ ರಸ. ಸಸ್ಯದ ಎಲೆಗಳಿಂದ ನೇರವಾಗಿ ತೆಗೆದು ಕೂದಲಿಗೆ ಅನ್ವಯಿಸಬಹುದು. ರೆಫ್ರಿಜರೇಟರ್ ನಲ್ಲಿ ಒಂದೆರಡು ದಿನ ಸಂಗ್ರಹಿಸಿಡಬಹುದು.
Raw Banana Benefits: ಬಾಳೆಕಾಯಿಯನ್ನು ಸೇವಿಸಿದರೆ ಎಷ್ಟೆಲ್ಲ ಪ್ರಯೋಜನವಿದೆ ನೋಡಿ!
ಅಲೋವೆರಾದಿಂದ ಅಪಾಯವಿದೆಯೇ?
ಅಲೋವೆರಾ ಜೆಲ್ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲ್ಪಟ್ಟಿದ್ದರೂ ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಹೀಗಾಗಿ ಮೊದಲು ಪರೀಕ್ಷೆ ಮಾಡಿ ಬಳಿಕ ಬಳಸುವುದು ಒಳ್ಳೆಯದು.