ಭಾರತದ ಅನೇಕ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಹಲವಾರು ಶತಮಾನಗಳಿಂದ ಪ್ರತಿ ವರ್ಷ ಆಚರಿಸುವ ದೀಪಾವಳಿಯನ್ನು (Deepavali 2024) ಹಿಂದೂಗಳಷ್ಟೇ ಅಲ್ಲ, (Hindu) ಇತರ ಧರ್ಮೀಯರು ಆಚರಿಸುತ್ತಾರೆ. ಹಲವಾರು ಧರ್ಮಗಳಲ್ಲಿ (Religion) ಅವರವರ ನಂಬಿಕೆಗೆ ಅನುಗುಣವಾಗಿ ಆಚರಿಸುತ್ತಾರೆ. ಆದರೆ ಎಲ್ಲ ಧರ್ಮದಲ್ಲೂ ಆಚರಣೆಯ ಉದ್ದೇಶ ಒಂದೇ ಅದುವೇ ಕತ್ತಲೆಯ ಮೇಲೆ ಬೆಳಕಿನ ವಿಜಯ.
ದೀಪಾವಳಿ ಹಬ್ಬವು ಹಿಂದೂ ಧರ್ಮಿಯರಂತೆ ಬೌದ್ಧ (Buddhism), ಸಿಖ್ (Sikhism) ಮತ್ತು ಜೈನ (Jainism) ಧರ್ಮಗಳಲ್ಲೂ ಜನಪ್ರಿಯ ಹಬ್ಬವಾಗಿದೆ. ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳುಗಳಲ್ಲಿ ಇದನ್ನು ಆಚರಿಸಲಾಗುತ್ತದೆ.
ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳಿಗೆ ಇದು ದೊಡ್ಡ ಹಬ್ಬವಾಗಿದೆ. ಕೆಲವೆಡೆ ಮೂರು, ಇನ್ನು ಕೆಲವೆಡೆ ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬವು ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಮಹತ್ವದ ಹಬ್ಬವಾಗಿದೆ. ಕೆಟ್ಟದರ ಮೇಲೆ ಒಳ್ಳೆಯದು, ಕತ್ತಲೆಯ ಮೇಲೆ ಬೆಳಕಿನ ವಿಜಯ ಹಬ್ಬದ ಆಚರಣೆಯ ಪ್ರಮುಖ ಸಾರವಾಗಿದೆ.
ದೀಪಾವಳಿ ಸಮಯದಲ್ಲಿ ಸಂಬಂಧಿಗಳು, ಸ್ನೇಹಿತರು ಒಟ್ಟಿಗೆ ಕೂಡಿ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಪಟಾಕಿ ಪ್ರದರ್ಶನ, ಸಿಹಿ ತಿನಿಸುಗಳ ವಿತರಣೆ, ಉಡುಗೊರೆಗಳ ವಿನಿಮಯ, ವಿಶೇಷ ಪ್ರಾರ್ಥನೆಗಳನ್ನು ಈ ಹಬ್ಬದಂದು ಮಾಡಲಾಗುತ್ತದೆ.
ಹಿಂದೂ ಧರ್ಮದಲ್ಲಿ ದೀಪಾವಳಿಯು ರಾಕ್ಷಸ ರಾಜ ರಾವಣನನ್ನು ಕೊಂದ ಅನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಸೂಚಿಸುತ್ತದೆ. ಹಿಂದೂ ಸಮುದಾಯವು ರಾಮ, ಲಕ್ಷಣ, ಸೀತಾ ದೇವಿಯ ಪುನರಾಗಮನದ ಸಂತೋಷ, ವಿಜಯದ ಸಮಯವೆಂದು ಆಚರಿಸುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣರ ಸ್ವಾಗತಿಸಲು ಮಣ್ಣಿನ ಹಣತೆಯಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ಹಲವಾರು ಶತಮಾನಗಳ ಹಿಂದಿನ ಸಂಪ್ರದಾಯ ಈಗಲೂ ಮುಂದುವರಿದಿದೆ.
ದೀಪಾವಳಿಯ ದಿನದಂದು, ಹಿಂದೂಗಳು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವತೆಯನ್ನು ಆರಾಧಿಸುತ್ತಾರೆ. ದೀಪಾವಳಿಯ ಆರಂಭದ ದಿನ ನರಕ ಚತುರ್ದಶಿಯಿಂದ ಪ್ರಾರಂಭವಾಗುತ್ತದೆ. ದುಷ್ಟ ಶಕ್ತಿಗಳ ನಿರ್ಮೂಲನೆಯನ್ನು ಸಂಕೇತಿಸುವ ನರಕಾಸುರನ ವಧೆ ಮಾಡಿದ ಶ್ರೀಕೃಷ್ಣನ ವಿಜಯವನ್ನು ಈ ದಿನ ನೆನಪಿಸಲಾಗುತ್ತದೆ. ದೀಪಾವಳಿಯಂದು ಪಟಾಕಿಗಳನ್ನು ಹಚ್ಚುವುದು ನಕಾರಾತ್ಮಕ ಶಕ್ತಿಗಳ ಅಂತ್ಯವನ್ನು ಸೂಚಿಸುತ್ತದೆ.
ಜ್ಞಾನೋದಯದ ಸಂಕೇತ
ಜೈನ ಧರ್ಮದಲ್ಲಿ, ದೀಪಾವಳಿಯು 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಮೋಕ್ಷ ಅಥವಾ ವಿಮೋಚನೆಯ ಪಡೆದ ದಿನವಾಗಿ ಸ್ಮರಿಸಲಾಗುತ್ತದೆ. ಜೈನ ಗ್ರಂಥಗಳ ಪ್ರಕಾರ ಮಹಾವೀರರಿಗೆ ಕ್ರಿಸ್ತ ಪೂರ್ವ 527ರಲ್ಲಿ ದೀಪಾವಳಿಯ ದಿನದಂದು ಜ್ಞಾನೋದಯವಾಗಿತ್ತು.
ಈ ಹಬ್ಬವು ಜೈನರಿಗೆ ಅಹಿಂಸೆ, ಸ್ವಯಂ ಶಿಸ್ತು ಮತ್ತು ಪರಿತ್ಯಾಗದ ಮಾರ್ಗವನ್ನು ಅನುಸರಿಸಲು ಪ್ರೇರಣೆ ನೀಡುತ್ತದೆ. ಸಾಮಾನ್ಯವಾಗಿ ಈ ದಿನ ಜೈನರು ಉಪವಾಸ, ಪ್ರಾರ್ಥನೆ ಮತ್ತು ಜೈನ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುತ್ತಾರೆ. ದೀಪಗಳನ್ನು ಬೆಳಗಿಸಿ ಮಹಾವೀರನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ.
ಸಿಖ್ಖರಿಗೆ ವಿಮೋಚನೆಯ ದಿನ
ಮೊಘಲ್ ಚಕ್ರವರ್ತಿ ಜಹಾಂಗೀರ್‌ನ ಸೆರೆಮನೆಯಿಂದ ಆರನೇ ಸಿಖ್ ಗುರು ಗುರು ಹರಗೋಬಿಂದ್ ಸಿಂಗ್ ಬಿಡುಗಡೆಯಾದ ನೆನಪಿಗಾಗಿ ಸಿಖ್ಖರು ದೀಪಾವಳಿಯ ಆಚರಿಸುತ್ತಾರೆ. ಬಂಡಿ ಚೋರ್ ದಿವಸ್ ಅಂದರೆ ವಿಮೋಚನೆಯ ದಿನವಾಗಿ ಇದನ್ನು ಆಚರಿಸಲಾಗುತ್ತದೆ. ಸಿಖ್ ಧರ್ಮದಲ್ಲಿ ದೀಪಾವಳಿಯು ಸ್ವಾತಂತ್ರ್ಯದ ಆಚರಣೆ ಮಾತ್ರವಲ್ಲದೆ ಸಹಾನುಭೂತಿ, ಶೌರ್ಯ ಮತ್ತು ಕೋಮು ಸೌಹಾರ್ದತೆಯ ಮೌಲ್ಯಗಳ ಸ್ಮರಣೆಯಾಗಿದೆ. ಈ ದಿನದಂದು ಸಿಖ್ಖರು ಗೋಲ್ಡನ್ ಟೆಂಪಲ್ ಅನ್ನು ದೀಪಗಳಿಂದ ಬೆಳಗಿಸುತ್ತಾರೆ. ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸುತ್ತಾರೆ.
ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ ದಿನ
ಬೌದ್ಧಧರ್ಮದಲ್ಲಿ ದೀಪಾವಳಿಯು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಆಳಿದ ಅಶೋಕ ಚಕ್ರವರ್ತಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾಗಿದೆ.
Deepavali 2024: ಪಟಾಕಿಯ ಮಾಲಿನ್ಯ ನಿಮ್ಮ ಮುಖದ ಅಂದ ಕಸಿಯದಿರಲಿ
ಚಕ್ರವರ್ತಿ ಅಶೋಕ ಆರಂಭದಲ್ಲಿ ನಿರ್ದಯ ಆಡಳಿತಗಾರನಾಗಿದ್ದ. ಯುದ್ಧದ ವಿನಾಶವನ್ನು ನೋಡಿದ ಅನಂತರ ಆತ ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮಾರ್ಗವನ್ನು ಆರಿಸಿಕೊಂಡನು. ಈ ದಿನ ಬೌದ್ಧರು ದೀಪಗಳನ್ನು ಬೆಳಗಿಸುತ್ತಾರೆ. ಇದು ಜ್ಞಾನೋದಯ ಮತ್ತು ಸಹಾನುಭೂತಿಯನ್ನು ಸಂಕೇತಿಸುತ್ತದೆ.