Saturday, 23rd November 2024

Actor Vijay: ನಟ ವಿಜಯ್‌ ಸಿದ್ಧಾಂತ ಇತರ ರಾಜಕೀಯ ಪಕ್ಷಗಳ ನಕಲು, ಹೊಸ ಬಾಟಲ್‌ನಲ್ಲಿ ಹಳೆ ಮದ್ಯ; ಡಿಎಂಕೆ, ಎಐಎಡಿಎಂಕೆ ವಾಗ್ದಾಳಿ

Actor Vijay

ಚೆನ್ನೈ: ಕಾಲಿವುಡ್‌ ನಟ ದಳಪತಿ ವಿಜಯ್‌ (Actor Vijay) ಭರ್ಜರಿಯಾಗಿಯೇ ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಮ್ (Tamizhaga Vetri Kazhagam-TVK) ಪಕ್ಷವನ್ನು ಹುಟ್ಟುಹಾಕಿರುವ ಅವರು ಭಾನುವಾರ (ಅ. 27) ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಮೊದಲ ರಾಜಕೀಯ ಸಮಾವೇಶ ನಡೆಸಿ ಸಂಚಲನ ಮೂಡಿಸಿದ್ದಾರೆ. ಲಕ್ಷಾಂತರ ಮಂದಿ ಭಾಗವಹಿಸಿದ್ದ ಸಭೆಯಲ್ಲಿ ಅವರು ಆಡಳಿತ ರೂಢ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ತಿರುಗೇಟು ನೀಡಿ ವಿಜಯ್‌ ಮತ್ತು ಅವರ ಟಿವಿಕೆ ಪಕ್ಷದ ವಾಗ್ದಾಳಿ ನಡೆಸಿದ್ದಾರೆ. ಟಿವಿಕೆ ಪಕ್ಷದ ಸಿದ್ಧಾಂತದಲ್ಲಿ ಏನೂ ಹೊಸತನವಿಲ್ಲ, ಹೊಸ ಬಾಟಲಿಯಲ್ಲಿ ಹಳ ಮದ್ಯ ತುಂಬಿಸಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಿಜಯ್‌ ಅವರ ಸಿದ್ಧಾಂತವನ್ನು ತಳ್ಳಿ ಹಾಕಿರುವ ಡಿಎಂಕೆ, ಇದು ತಮ್ಮ ಪಕ್ಷದ ನಕಲು ಎಂದಿದೆ. ಇತ್ತ ಎಐಎಡಿಎಂಕೆ, ವಿಜಯ್‌ ಅವರ ಟಿವಿಕೆ ಬೇರೆ ಬೇರೆ ರಾಜಕೀಯ ಪಕ್ಷಗಳ ಸಿದ್ದಾಂತವನ್ನು ಅಳವಡಿಸಿಕೊಂಡ ಕಾಕ್‌ಟೇಲ್‌ ರೀತಿ ಇದೆ ಎಂದು ವಾಗ್ದಾಳಿ ನಡೆಸಿದೆ.

ಡಿಎಂಕೆ ಹೇಳಿದ್ದೇನು?

ʼʼವಿಜಯ್‌ ಘೋಷಿಸಿರುವ ಯೋಜನೆಗಳೆಲ್ಲ ನಮ್ಮ ಪಕ್ಷದ ಹೇಳಿಕೆಗಳು. ಅವರು ಹೇಳಿದ್ದನ್ನೆಲ್ಲ ನಾವು ಈಗಾಗಲೇ ಜನರ ಮುಂದೆ ಪ್ರಸ್ತುತಪಡಿಸಿದ್ದೇವೆ. ಮಾತ್ರವಲ್ಲ ನುಡಿದಂತೆ ನಡೆಯುತ್ತಿದ್ದೇವೆ. ಅವರು ನಮ್ಮ ಸಿದ್ದಾಂತವನ್ನು ನಕಲು ಮಾಡಿರುವುದು ಸ್ಪಷ್ಟವಾಗಿದೆʼʼ ಎಂದು ಡಿಎಂಕೆ ನಾಯಕ ಟಿ.ಕೆ.ಎಸ್‌.ಇಳಂಗೋವನ್‌ ತಿಳಿಸಿದ್ದಾರೆ. ‌ʼʼಟಿವಿಕೆ ನಾಯಕರು ಡಿಎಂಕೆ ನಾಯಕರಂತೆ ಜೈಲಿಗೆ ಹೋಗಿ ಜನರಿಗಾಗಿ ಹೋರಾಡುವುದಿಲ್ಲ. ಇದು ಡಿಎಂಕೆ ಮತ್ತು ಇತರ ಪಕ್ಷಗಳ ನಡುವಿನ ವ್ಯತ್ಯಾಸ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ, ಜನರಿಗಾಗಿ ಇದ್ದೇವೆ” ಎಂದು ಹೇಳಿದ್ದಾರೆ.

ಎಐಎಡಿಎಂಕೆ ವಾದವೇನು?

ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್‌ ಮಾತನಾಡಿ, ʼʼಟಿವಿಕೆಯ ಸಿದ್ಧಾಂತ ಎಲ್ಲ ಪಾರ್ಟಿಗಳ ಸಿದ್ಧಾಂತಗಳ ಒಟ್ಟು ಮಿಶ್ರಣ ಎನಿಸುವಂತಿದೆ. ಇದು ಹೊಸ ಬಾಟಲ್‌ನಲ್ಲಿ ತುಂಬಿಸಿಟ್ಟಿರುವ ಹಳೆ ಮದ್ಯದಂತೆ ಭಾಸವಾಗುತ್ತಿದೆʼʼ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಹೇಳಿದ್ದಿಷ್ಟು

ಈ ಬಗ್ಗೆ ಬಿಜೆಪಿ ಮುಖಂಡ ಎಚ್‌.ರಾಜ ಮಾತನಾಡಿ, ʼʼಟಿವಿಕೆ ದ್ರಾವಿಡ ಪಕ್ಷಗಳ ಮತಗಳನ್ನು ಮಾತ್ರ ವಿಭಜಿಸಬಹುದು ಮತ್ತು ಇದರಿಂದ ಡಿಎಂಕೆ ದುರ್ಬಲಗೊಳ್ಳಬಹುದಷ್ಟೆ. ದ್ರಾವಿಡ ಸಿದ್ಧಾಂತದ ಬಗ್ಗೆ ಮಾತನಾಡುವ ಮೂಲಕ ಮತ್ತು ಆ ಮತಗಳನ್ನು ವಿಭಜಿಸಲಿರುವ ವಿಜಯ್ ನಮಗೆ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯ್‌ ನುಡಿದಿದ್ದೇನು?

ತಮ್ಮ ಮೊದಲ ಸಮಾವೇಶದಲ್ಲಿ ಡಿಎಂಕೆ ವಿರುದ್ಧ ಗಂಭೀರ ಆರೋಪ ಹೊರಿಸಿದ್ದ ವಿಜಯ್‌, ʼ’ದ್ರಾವಿಡ ಮಾದರಿ’ ಹೆಸರಿನಲ್ಲಿ ತಮಿಳುನಾಡಿನಲ್ಲಿ ಜನ ವಿರೋಧಿ ಸರ್ಕಾರವನ್ನು ನಡೆಸಲಾಗುತ್ತಿದೆ. ರಾಜ್ಯ ರಾಜಕೀಯ ಮತ್ತು ಜನ ಕಲ್ಯಾಣಕ್ಕೆ ಟಿವಿಕೆ ಮೂಲಕ ಹೊಸ ದಿಕ್ಕು ತೋರಲಾಗುವುದು. ಜನರಿಗಾಗಿ ಕೆಲಸ ಮಾಡುವುದು ಒಂದೇ ನಮ್ಮ ಗುರಿʼʼ ಎಂದಿದ್ದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕುಟುಂಬದ ಬಗ್ಗೆ ಮಾತನಾಡಿದ್ದ ಅವರು, “ಒಂದು ಕುಟುಂಬವು ರಾಜ್ಯವನ್ನು ಲೂಟಿ ಮಾಡುತ್ತಿದೆ” ಎಂದು ಹೇಳಿದ್ದರು.

“ಸಮಾಜದ ಒಳಗೆ ವಿಭಜನೆ ಉಂಟು ಮಾಡುವ ಗುಂಪು ಇದೆ. ಈ ವಿಭಜನೆ ಸೃಷ್ಟಿಸುವವರು ನಮ್ಮ ಮೊದಲ ಶತ್ರುಗಳು. ದ್ರಾವಿಡ ಸಿದ್ಧಾಂತ ಎತ್ತಿಹಿಡಿಯುವುದಾಗಿ ಪ್ರತಿಪಾದಿಸುತ್ತಿರುವವರು ವಾಸ್ತವವಾಗಿ ತಮಿಳುನಾಡನ್ನು ಕುಟುಂಬದ ಉದ್ಯಮದಂತೆ ಶೋಷಣೆ ಮಾಡುತ್ತಿದ್ದಾರೆ. ಅವರು ನಮ್ಮ ಎರಡನೇ ವೈರಿಗಳು. ಬಿಜೆಪಿ ನಮ್ಮ ರಾಜಕೀಯ ಸೈದ್ಧಾಂತಿಕ ಎದುರಾಳಿಯಾದರೆ ಡಿಎಂಕೆ ನಮ್ಮ ರಾಜಕೀಯ ಎದುರಾಳಿ” ಎಂದು ಘೋಷಿಸಿದ್ದರು.

”ಪೆರಿಯಾರ್ ನಮ್ಮ ಸೈದ್ಧಾಂತಿಕ ನಾಯಕ, ಆದರೆ ನಾವು ಅವರ ನಾಸ್ತಿಕ ನಿಲುವನ್ನು ಮಾತ್ರ ಅಳವಡಿಸಿಕೊಳ್ಳುವುದಿಲ್ಲ. ‘ಒಂದೇ ಕುಲ, ಒಬ್ಬನೇ ದೇವರು’ ಎಂಬುದು ನಮ್ಮ ನಿಲುವು. ಮಹಿಳಾ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತಾದ ಪೆರಿಯಾರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುತ್ತೇವೆ. ಕೆ.ಕಾಮರಾಜ್ ನಮ್ಮ ಮತ್ತೊಬ್ಬ ಸೈದ್ಧಾಂತಿಕ ನಾಯಕ. ಅದೇ ರೀತಿ ಬಿ.ಆರ್. ಅಂಬೇಡ್ಕರ್ ತತ್ವವನ್ನೂ ಅಳವಡಿಸಿಕೊಳ್ಳುತ್ತೇವೆ. ಮಹಿಳಾ ನಾಯಕರನ್ನು ಐಕಾನ್‌ಗಳನ್ನಾಗಿ ಸ್ವೀಕರಿಸಿದ ಮೊದಲ ಪಕ್ಷ ಟಿವಿಕೆʼʼ ಎಂದು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Engineer Rashid: ಜಾಮೀನು ಅವಧಿ ಮುಗಿಯುತ್ತಿದ್ದಂತೆ ತಿಹಾರ್‌ ಜೈಲಿಗೆ ಮರಳಿದ ಎಂಜಿನಿಯರ್‌ ರಶೀದ್‌